ಲಕ್ಷ್ಮೇಶ್ವರ: ಮುಂಗಾರು ಪೂರ್ವದ 4 ಪ್ರಮುಖ ಮಳೆಗಳು ಕೈಕೊಟ್ಟು ಮತ್ತೇ ಆತಂಕದಲ್ಲಿದ್ದ ರೈತ ಸಮುದಾಯಕ್ಕೆ ಇದೀಗ ಉತ್ತಮ ಮಳೆಯಾಗಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ರೈತರು ಭೂತಾಯಿಗೆ ಹೊಸ ಭರವಸೆಯೊಂದಿಗೆ ಉಡಿ ತುಂಬುವ ಕಾರ್ಯದಲ್ಲಿ ಉತ್ಸುಕರಾಗಿದ್ದಾರೆ. ಜತೆಗೆ ಮತ್ತಷ್ಟು ಮಳೆಯ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನ ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು ಬಿತ್ತನೆ ಹಂಗಾಮು ಮುಗಿದಿದೆ.
ಶೇಂಗಾ, ಉಳ್ಳಾಗಡ್ಡಿ, ಮೆಣಸಿನಕಾಯಿ, ಬಿಟಿ ಹತ್ತಿ ಹಾಗೂ ಗೋವಿನಜೋಳ ಬಿತ್ತನೆಗಾಗಿ ರೈತರು ರೈತ ಸಂಪರ್ಕ ಕೇಂದ್ರ ಮತ್ತು ಖಾಸಗಿ ಕೃಷಿ ಕೇಂದ್ರಗಳತ್ತ ಚಿತ್ತ ನೆಟ್ಟಿದ್ದಾರೆ.
ಜೂನ್ ತಿಂಗಳಲ್ಲಿನ ವಾಡಿಕೆ ಮಳೆ 93 ಮಿ.ಮೀ ನಷ್ಟಿದ್ದರೆ ಇದುವರೆಗೂ 86 ಮಿ.ಮೀ ಆಗಿದೆ. ಜೂನ್ 23 ರಂದು 30.4 ಮಿ.ಮೀ ದಾಖಲೆ ಮಳೆಯಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ನೀರಾವರಿ ಜಮೀನು 7000 ಹೆಕ್ಟೇರ್ ಮತ್ತು ಖುಷ್ಕಿ ಜಮೀನು 62600 ಹೆಕ್ಟೇರ್ ಸೇರಿ ಒಟ್ಟು 69600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ 13500 ಹೆಕ್ಟೇರ್ ಪ್ರದೇಶದಲ್ಲಿ ತೃಣ ಧಾನ್ಯಗಳು, 23300 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳು 20,800 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆ ಕಾಳು ಮತ್ತು 12000 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಾಣಜ್ಯ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ.
ಪ್ರಸಕ್ತ ವರ್ಷ ಉತ್ತಮ ಮಳೆ-ಬೆಳೆ ಬಂದು ಕೃಷಿ ಲಾಭದಾಯಕವಾದೀತೆಂಬ ಆಶಾಭಾವನೆಯಲ್ಲಿ ರೈತರಿದ್ದಾರೆ. ಇದೆಲ್ಲವೂ ಸಾಕಾರಗೊಳ್ಳಬೇಕಾದರೆ ಮೇಘರಾಜನ ಮೇಲೆ ನಿಂತಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದು ನಿನ್ನೆಯಿಂದ ಸ್ವಲ್ಪ ಮಳೆ ಬಿಡುವು ಕೊಟ್ಟಿದ್ದರಿಂದ ಬಿತ್ತನೆ ಕಾರ್ಯ ಜೋರಾಗಿ ಸಾಗಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ಕೆಲ ರೈತರು ಶೇಂಗಾ ಬೀಜಕ್ಕಾಗಿ ಕಾಯುತ್ತಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಬಿತ್ತನೆ ಬೀಜದ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತ ಮುಖಂಡ ವಿರೂಪಾಕ್ಷಪ್ಪ ಆದಿ ಒತ್ತಾಯಿಸಿದ್ದಾರೆ.