ಮಾಲೂರು: ಸಕಾಲದಲ್ಲಿ ಮಳೆ ಬೀಳದೆ, ಅಂತರ್ಜಲ ಕುಸಿತದಿಂದ ತಾಲೂಕಿನಲ್ಲಿ ಕೃಷಿ ಚಟುವಟಿಕೆ ದಿನದಿಂದ ದಿನಕ್ಕೆ ಕುಂಠಿತಗೊಳ್ಳುತ್ತಿದೆ ಎಂದು ಜಿಪಂ ಸದಸ್ಯೆ ಗೀತಮ್ಮ ವೆಂಕಟೇಶಗೌಡ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಮೈದಾನದಲ್ಲಿ ತಾಲೂಕು ಕೃಷಿ ಇಲಾಖೆ, ಜಿಪಂ ಹಾಗೂ ತಾಲೂಕು ಪಂಚಾಯ್ತಿ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದೇ, ಕೃಷಿಗಾಗಿ ಕೊಳವೆಬಾವಿಗಳನ್ನೇ ನಂಬಿಕೊಂಡಿದ್ದ ರೈತ ಮಳೆ ಕೊರತೆಯಿಂದ ಅಂತರ್ಜಲ ಬತ್ತಿ ಹೋಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ನೀರಾವರಿ ಸೌಲಭ್ಯಗಳಿಲ್ಲದೇ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತವಾಗುತ್ತಿವೆ ಎಂದು ವಿಷಾದಿಸಿದರು.
ಆಧುನಿಕ ಪದ್ಧತಿ ಅಳವಡಿಸಿಕೊಳ್ಳಿ: ಸಹಾಯಕ ಕೃಷಿ ನಿರ್ದೇಶಕಿ ಜಿ.ಆರ್.ಭೌವ್ಯರಾಣಿ ಮಾತನಾಡಿ, ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಅಭಿಯಾನದಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ನೀಡುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ಅಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ಕೃಷಿಯನ್ನು ಹೆಚ್ಚು ಲಾಭದಾಯವನ್ನಾಗಿಸಲು ಸಾಧ್ಯವಿದೆ ಎಂದರು.
ರಿಯಾಯ್ತಿ ದರದಲ್ಲಿ ಸೌಲಭ್ಯ: ಕೃಷಿ ಅಭಿಯಾನದಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ರೈತರ ಮನೆ ಬಾಗಿಲಿಗೆ ತೆರಳಿ ಕಾರ್ಯಕ್ರಮವನ್ನು ಪರಿಚಯಿಸುವ ಜೊತೆಗೆ ಅಗತ್ಯ ಮಾಹಿತಿ ನೀಡಬೇಕಿದೆ. ಅದರಂತೆ ಬಿತ್ತನೆ ಬೀಜಗಳ ದಾಸ್ತನು ಮಾಡಿರುವ ಕೃಷಿ ಇಲಾಖೆಯು ರಾಗಿ, ಅಲಸಂದೆ, ತೊಗರಿ, ಕಡಲೆಬೀಜ, ಕೃಷಿ ಯಂತ್ರಗಳು, ಟಾರ್ಪಲಿನ್‌ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ.75ರ ರಿಯಾಯ್ತಿ, ಸಾಮಾನ್ಯ ವರ್ಗ ರೈತರಿಗೆ ಶೇ.50 ರಿಯಾಯ್ತಿ ದರದಲ್ಲಿ ನೀಡುತ್ತಿದೆ ಎಂದು ಹೇಳಿದರು. ಹನಿ ನೀರಾವರಿ, ಪಾಲಿಹೌಸ್, ಕೃಷಿ ಹೊಂಡ, ರಾಗಿ ಒಕ್ಕಣೆ ಮಿಷನ್‌ಗಳನ್ನು ನೀಡುತ್ತಿರುವ ಕೃಷಿ ಇಲಾಖೆ, ರೈತರಿಗೆ ಕೃಷಿ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೂ ನೀಡುತ್ತಿದೆ. ರೈತರ ತಮ್ಮ ಬೆಳೆಗಳಿಗೆ ಅಗತ್ಯವಾಗಿರುವ ವಿಮಾ ಸೌಲಭ್ಯ ಪಡೆಯಲು ಅವಕಾಶವಿದೆ ಎಂದರು.
ರೈತರಿಗೆ ಪರಿಹಾರ: ಸರ್ಕಾರದ ಅತ್ಮ ಯೋಜನೆಯಡಿಯಲ್ಲಿ ಹಾವು ಕಚ್ಚಿ ರೈತ ಮೃತನಾದರೆ 2 ಲಕ್ಷ ರೂ. ಪರಿಹಾರ ಮತ್ತು ಹುಲ್ಲಿನ ಬಣವೆ ಸುಟ್ಟು ಹೋದಲ್ಲಿ 20 ಸಾವಿರ ರೂ. ಪರಿಹಾರ ಪಡೆಯಬಹುದು. ಮಣ್ಣು ಪರೀಕ್ಷೆ ನಡೆಸಿ, ಲಘು ಪೋಷಕಾಂಶಗಳಾದ ಎರೆಗೊಬ್ಬರ, ಜಿಪ್ಸಂ ಮಿಶ್ರಣವನ್ನು ರಿಯಾಯ್ತಿ ದರದಲ್ಲಿ ರೈತರಿಗೆ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
14ರವರೆಗೂ ಬೆಳೆ ವಿಮೆ ಮಾಡಿಸಿ: ಮಣ್ಣು ಅಭಿವೃದ್ಧಿ ಯೋಜನೆಯಡಿಯಲ್ಲಿ ಚನ್ನಕಲ್ಲು ಗ್ರಾಮವನ್ನು ಅಯ್ಕೆ ಮಾಡಿದ್ದು, ರೈತರ ಕೃಷಿ ಭೂಮಿಯಲ್ಲಿನ ಮಣ್ಣು ಪರೀಕ್ಷೆ ನಡೆಸಿ ಚೀಟಿ ನೀಡುತ್ತಿರುವುದಾಗಿ ತಿಳಿಸಿದ ಅವರು, ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆಗಳಿಗೆ ವಿಮೆ ಮಾಡಿಸಲು ಜ.14ರವರೆಗೂ ಅವಕಾಶ ಇದೆ, ರೈತ ಸಿರಿ ಯೋಜನೆಯಡಿಯಲ್ಲಿಯೂ ರೈತರು ಅನುಕೂಲ ಪಡೆಯಬಹುದಾಗಿದೆ ಎಂದು ವಿವರಿಸಿದರು. ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್, ತಾಪಂ ಸದಸ್ಯ ಶ್ರೀನಾಥ್, ಎಪಿಎಂಸಿ ನಿರ್ದೇಶಕರಾದ ಸುರೇಶ್, ಎಂ.ಪಿ.ಚಂದ್ರಶೇಖರ್, ಪಟ್ಲಪ್ಪ, ಕೃಷಿ ವಿಜ್ಞಾನಿ ಡಾ . ನಾಗರಾಜು, ಡಾ.ಅಂಬಿಕಾ, ಜಿಪಂ ಮಾಜಿ ಸದಸ್ಯ ಎಚ್.ಹನುಮಂತಪ್ಪ, ನಾರಾಯಣ ಗೌಡ, ರತ್ನಮ್ಮ, ವೆಂಕಟೇಶಪ್ಪ, ಬೈರೇಗೌಡ, ಸಹಾಯಕ ಕೃಷಿ ಅಧಿಕಾರಿ ಮುನಿರಾಜು, ಪ್ರದೀಪ್ ಮತ್ತಿತರರು ಇದ್ದರು.