ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಾಡಿ ಹರ್ಕಾಡಿ ಗ್ರಾಮದ ಹಿರಿಯ ಸಾಂಪ್ರದಾಯಿಕ ಕೃಷಿಕ ಗಾವಳಿ ಪದ್ಮನಾಭ ಕಿಣಿ ಅವರು ಭತ್ತದ ಬೀಜದ ಬಿತ್ತನೆ ಮಾಡಿ ,ಸುಮಾರು 3ಸಾವಿರಕ್ಕೂ ಅಧಿಕ ಚಾಪೆ ಮಾದರಿಯಲ್ಲಿ ಭತ್ತದ ಸಸಿ ಸಿದ್ದಪಡಿಸಿಕೊಂಡು. ವೈಜ್ಞಾನಿಕ ಯಂತ್ರೋಪಕರಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಚಾಪೆ ನೇಜಿಯ ಕಾರ್ಯವನ್ನು ಜೂ.10 ರಂದು ಚಾಲನೆ ನೀಡಲಾಗಿದೆ.
ಚಾಪೆ ನೇಜಿಯಲ್ಲಿ ವಿಶಿಷ್ಟ ಆವಿಷ್ಕಾರ : ಬಾಲ್ಯದಿಂದಲೂ ತಂದೆ ಶ್ರೀಧರ ಕಿಣಿ ಅವರ ಮಾರ್ಗದರ್ಶನದಂತೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ತಳೆದ ಕೃಷಿಕ ಗಾವಳಿ ಪದ್ಮನಾಭ ಕಿಣಿ ಅವರು ಎಂಓ4, ಎಂಓ13, ಐಶ್ವರ್ಯ ಸೇರಿದಂತೆ ವಿವಿಧ ಭತ್ತದ ತಳಿಗಳನ್ನು ಸಂಗ್ರಹಿಸಿ, ಹೊಸ ತಳಿಗಳ ಬೀಜೋತ್ಪಾದನೆ ಹಾಗೂ ತನ್ನ ಮನೆಯ ಅಂಗಣದಲ್ಲಿಯೇ ಭತ್ತದ ಬೀಜದ ಬಿತ್ತನೆ ಮಾಡಿ ಸುಮಾರು 3ಸಾವಿರಕ್ಕೂ ಅಧಿಕ ಚಾಪೆ ಮಾದರಿಯಲ್ಲಿ (ಪ್ಲಾಸ್ಟಿಕ್ ಟ್ರೇ) ಭತ್ತದ ಸಸಿ ಸಿದ್ದಪಡಿಸಿಕೊಂಡು, ಚಾಪೆ ನೇಜಿಯ ಮೂಲಕವೇ ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡಿ ಜಿಲ್ಲೆಯಲ್ಲಿಯೇ ಚಾಪೆ ನೇಜಿ ಕೃಷಿ ಪದ್ದತಿಗೊಂದು ಹೊಸ ಭಾಷ್ಯ ಬರೆದಿದ್ದಾರೆ. ಬದಲಾದ ತಾಂತ್ರಿಕ ಯುಗದಲ್ಲಿ ಕೃಷಿ ಚಟುವಟಿಕೆಗೆ ಎದುರಾದ ಕೂಲಿ ಕಾರ್ಮಿಕರ ಸಮಸ್ಯೆಗೆ ದೃತಿಗೆಡದ ಇವರು ಸುಮಾರು 6 ವೈಜ್ಞಾನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು, ಈಗಾಗಲೇ ತಾಲೂಕಿನಾದ್ಯಂತ ಚಾಪೆನೇಜಿ ಕಾರ್ಯಕ್ಕೆ ಸರ್ವ ಸನ್ನದ್ಧರಾಗಿದ್ದಾರೆ.
ವರ್ಷಕ್ಕೆ ಸುಮಾರು 250 ಎಕ್ರೆಗೂ ಅಧಿಕ ಕೃಷಿಭೂಮಿಯಲ್ಲಿ ಚಾಪೆ ನೇಜಿ :
ಇವರ ಬಳಿ ಸುಮಾರು 6 ವೈಜ್ಞಾನಿಕ ನಾಟಿ ಯಂತ್ರಗಳಿದ್ದು , 10 ಮಂದಿ ಆಂಧ್ರ ಹಾಗೂ ಗಂಗಾವತಿ ಮೂಲದ ನುರಿತ ನಾಟಿ ಯಂತ್ರಗಳ ಚಾಲಕರು ಜಿಲ್ಲೆಯಾದ್ಯಂತ ವರ್ಷಕ್ಕೆ ಸುಮಾರು 250 ಎಕ್ರೆ ಗೂ ಅಧಿಕ ಕೃಷಿಭೂಮಿಗೆ ಬೇಕಾಗುವಷ್ಟು , 3ಸಾವಿರಕ್ಕೂ ಅಧಿಕ ಚಾಪೆ ಮಾದರಿಯಲ್ಲಿ (ಪ್ಲಾಸ್ಟಿಕ್ ಟ್ರೇ )ಸಿದ್ದಪಡಿಸುವ ಜತೆಗೆ ಅಗತ್ಯವಿರುವ ಕೃಷಿಕರಿಗೆ ಸ್ಥಳಕ್ಕೆ ತೆರಳಿ ಸುಗ್ಗಿ ಹಾಗೂ ಕಾತೆ ಬೆಳೆಗಳಿಗಾಗಿ ಚಾಪೆ ನೇಜಿ ಮಾಡಲು ಕಾರ್ಯೋನ್ಮುಖರಾಗಿದ್ದಾರೆ.
ಮುಂಗಾರು ಆಗಮನವಾದ್ದರಿಂದ ಈಗಾಗಲೇ ಸುಮಾರು 250 ಎಕ್ರೆ ಗೂ ಅಧಿಕ ಕೃಷಿಭೂಮಿಗೆ ಬೇಕಾಗುವಷ್ಟು ಚಾಪೆ ನೇಜಿ ಶೀಟ್‌ಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಒಂದು ಎಕರೆ ಕೃಷಿಭೂಮಿಗೆ ಸುಮಾರು 20 ಕೆಜಿ ಭತ್ತದ ಬೀಜ, ಸುಮಾರು 80 ಶೀಟ್‌ಗಳನ್ನು (2ಫೀಟ್ ಅಗಲ ಹಾಗೂ 1ಫೀಟ್ ಎತ್ತರದ ಪ್ಲಾಸ್ಟಿಕ್ ಟ್ರೇ) ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೇ.10 ಶುಕ್ರವಾರದಂದು ಸುಮಾರು 4 ಎಕರೆ ವಿಸ್ತೀರ್ಣದ ಕೃಷಿಭೂಮಿಯಲ್ಲಿ ಈಗಾಗಲೇ ಚಾಪೆ ನೇಜಿ ಕಾರ್ಯವನ್ನು ಆರಂಭಿಸಿದ್ದೇವೆ.
– ಗಾವಳಿ ಪದ್ಮನಾಭ ಕಿಣಿ ಹಿರಿಯ ಸಾಧಕ ಕೃಷಿಕರು.
-ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ