ವರದಿ : ಜೆ.ವಿ. ಕೆರೂರ
ಕೆರೂರ: ಕಳೆದ ಸುಮಾರು ಐದು ವರ್ಷಗಳಿಂದ ಈ ಭಾಗದ ನೇಗಿಲಯೋಗಿಗಳಿಗೆ ಹುಸಿ ಮುನಿಸು ತೋರಿದ್ದ “ರೋಹಿಣಿ ಮಳೆ’, ಈ ಬಾರಿ ಉತ್ತಮವಾಗಿ ಸುರಿದಿದ್ದು ಕೃಷಿ ಜಮೀನುಗಳು ಹೆಚ್ಚು ತೇವಾಂಶದಿಂದ ಬಿತ್ತನೆಗೆ ಸಿದ್ಧಗೊಂಡಿದ್ದರೆ, ರೈತರು ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರಗಳ ಖರೀದಿಯ ಧಾವಂತದಲ್ಲಿ ಮುನ್ನಡೆದಿದ್ದಾರೆ.
ಕಳೆದ ಭಾನುವಾರ ಮೂರ್‍ನಾಲ್ಕು ಗಂಟೆಗಳ ಕಾಲ ಎಡಬಿಡದೇ ಸುರಿದ ರೋಹಿಣಿ ಮಳೆಯು ಪಟ್ಟಣದಲ್ಲಿ 72.08 ಮಿ.ಮೀ ಅ ಕ ಪ್ರಮಾಣದಲ್ಲಿ ಸುರಿಯಿತು. ಜಮೀನುಗಳನ್ನು ಬಿತ್ತನೆಗೆ ಸಿದ್ಧ ಮಾಡಿಕೊಂಡಿದ್ದ ರೈತರಲ್ಲಿ ಮುಂಗಾರು ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ. ಎಲ್ಲಿ ನೋಡಿದಲ್ಲಿ ಕೃಷಿಕ ಜಮೀನುಗಳಲ್ಲಿ ಬಿತ್ತನೆಯ ಭರದ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಮಳೆಯಿಂದ ಈ ಸಲ ಉತ್ತಮ ಫಸಲಿನ ನಿರೀಕ್ಷೆ ಇಲ್ಲಿನ ರೈತರಲ್ಲಿ ಹೆಚ್ಚು ಆಶಾಭಾವ ಮೂಡಿದೆ. ಹಳ್ಳಿ ಭಾಗಗಳಲ್ಲಿ ಬಿತ್ತನೆ ಕಾರ್ಯ ಅಂತಿಮಗೊಂಡಿದೆ ಎನ್ನುತ್ತಾರೆ ಹಿರಿಯ ರೈತ ಕೃಷ್ಣಪ್ಪ ನಡಮನಿ.
ಬಿತ್ತನೆಗೆ ಧಾವಂತ: ಈಗಾಗಲೇ ಕೃಷಿಕರು ಬೀಜ, ರಸಗೊಬ್ಬರದ ಭರಾಟೆಯ ಖರೀದಿ ಭರದಲ್ಲಿ ಚಟುವಟಿಕೆ ನಿರತರಾಗಿದ್ದು ಗ್ರಾಮೀಣ ಪ್ರದೇಶಗಳಿಂದ ನಿತ್ಯ ನೂರಾರು ಕೃಷಿಕರು ಲಾಕ್‌ಡೌನ್ ಕಾರಣ ನಸುಕಿನ ಜಾವದಿಂದ ಆಗಮಿಸುತ್ತಿರುವುದು ಸಾಮಾನ್ಯವಾಗಿದೆ. ಈಗಾಗಲೇ ಸಜ್ಜೆ, ಹೆಸರು, ಗೋವಿನಜೋಳ, ಸೂರ್ಯಕಾಂತಿ ಮುಂತಾದ ಬೀಜಗಳ ಬಿತ್ತನೆ ಕಾರ್ಯವು ಪ್ರಗತಿಯಲ್ಲಿದೆ.
“ಬಾದಾಮಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂರ್ಯಕಾಂತಿ ಬೀಜ ಸಿಗುತ್ತಿಲ್ಲ. ಸದ್ಯ ಉತ್ತಮ ಮಳೆ ಸುರಿದಿದ್ದು ಕೂಡಲೇ ಬಿತ್ತನೆ ಮುಗಿಸದಿದ್ದರೆ ಎಲ್ಲವೂ ವ್ಯರ್ಥವಾಗಲಿದೆ. ಖಾಸಗಿ ವ್ಯಾಪಾರಿಗಳ ದುಬಾರಿ ದರದಿಂದ ನಾವು ಅಸಹಾಯಕರಾಗಿದ್ದೇವೆ’ ಎನ್ನುತ್ತಾರೆ ಜಂಗವಾಡದ ರಾಮಪ್ಪ ಬಡಿಗೇರ.
“ಈವರೆಗೂ ಬೀಜ ಕಂಪನಿಗಳಿಂದ ಪೂರೈಕೆಯೇ ಆಗಿಲ್ಲ. ಹೀಗಾಗಿ ತಾಲೂಕಿನಲ್ಲಿ ಸೂರ್ಯಕಾಂತಿ ಬೀಜ ಖರೀದಿಗೆ ಲಭ್ಯವಿಲ್ಲ. ದಾಸ್ತಾನು ಬಂದ ಕೂಡಲೇ ಬೀಜ ವಿತರಣೆಗೆ ನಾವು ಎದುರು ನೋಡುತ್ತಿದ್ದೇವೆ’ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು.