ವಿಶೇಷ ವರದಿ
ಹಾವೇರಿ: ಕೊರೊನಾ ಲಾಕ್‌ಡೌನ್ ನಡುವೆಯೂ ಜಿಲ್ಲೆಯ ರೈತರು ಹೊಸ ಆಸೆ, ಹೊಸ ನಿರೀಕ್ಷೆಯೊಂದಿಗೆ ಮತ್ತೆ ಜಮೀನಿನತ್ತ ಹೆಜ್ಜೆ ಹಾಕುತ್ತಿದ್ದು, ಜಮೀನುಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ರೈತರು ಭೂಮಿ ಹದಗೊಳಿಸಲು ಸಜ್ಜಾಗಿದ್ದಾರೆ.
ಈ ವರ್ಷವಾದರೂ ಉತ್ತಮ ಮಳೆ-ಬೆಳೆ ಬಂದು ತಮ್ಮ ಬದುಕು ಹಸನಾಗಬಹುದೆಂಬ ಆಸೆ ರೈತರ ಮನದಲ್ಲಿ ಚಿಗುರೊಡೆದಿದೆ. ಹಾಗಾಗಿ ಕೃಷಿ ಕಾರ್ಯಗಳಿಗೆ ಅವಶ್ಯವಿರುವ ಸಾಮಗ್ರಿಗಳ ಸಂಗ್ರಹಣೆ, ಸಿದ್ಧತೆ ನಡೆಸಿದ್ದಾರೆ. ಕೃಷಿಗೆ ಬೇಕಾಗುವ ಪ್ರಮುಖ ಸಲಕರಣೆಗಳಾದ ರಂಟಿ, ಕುಂಟಿ, ಕೊರಡು, ಬುಡಗುಂಟಿ, ನೊಗ, ಕಾಯಿಕೋಲು ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕೃಷಿ ಉಪಕರಣಗಳನ್ನು ಕಮ್ಮಾರನ ಕುಲುಮೆಗೆ ಒಯ್ದು ಸರಿ ಮಾಡಿಕೊಳ್ಳುತ್ತಿದ್ದಾರೆ. ಉಳುಮೆಗೆ ಎತ್ತುಗಳನ್ನು ಬಳಸುವ ರೈತರು ಬೇಕಾದ ನೊಗ, ಕುಂಟಿ, ಬಾರಕೋಲು, ಕೊರಡುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
ಇನ್ನು ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡುವವರು ಯಂತ್ರದ ನೇಗಿಲು, ರಂಟಿ ತಯಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಕಮ್ಮಾರ, ಬಡಿಗ ಸೇರಿದಂತೆ ಕೃಷಿ ಚಟುವಟಿಕೆಗೆ ಪೂರಕ ಸೇವೆ ನೀಡುವ ಅಂಗಡಿಗಳಲ್ಲಿ ವ್ಯವಹಾರ ಜೋರಾಗಿದೆ. ಬಿತ್ತನೆ ಗುರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಒಟ್ಟಾರೆ 3.30 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ಏಕದಳ 2,07,973 ಹೆಕ್ಟೇರ್, ದ್ವಿದಳ 7,209 ಹೆಕ್ಟೇರ್, ಎಣ್ಣೆಕಾಳು 31,854 ಹೆಕ್ಟೇರ್, ವಾಣಿಜ್ಯ ಬೆಳೆ 85,790 ಹೆಕ್ಟೇರ್ ಗುರಿ ಹೊಂದಲಾಗಿದೆ. ಇದರಲ್ಲಿ ಪ್ರಮುಖವಾಗಿ ಗೋವಿನಜೋಳ 1,63,318 ಹೆಕ್ಟೇರ್, ಹತ್ತಿ 77,565 ಹೆಕ್ಟೇರ್, ಭತ್ತ 40235 ಹೆಕ್ಟೇರ್, ಶೇಂಗಾ 19,840 ಹೆಕ್ಟೇರ್ ಹಾಗೂ ಸೋಯಾ ಅವರೆ 11,360 ಹೆಕ್ಟೇರ್ ಪ್ರಮುಖ ಬೆಳೆಗಳಾಗಿವೆ. ಮುಂಗಾರು ಹಂಗಾಮಿಗೆ 33650 ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆಯಿದೆ. ಇದರಲ್ಲಿ ಮುಖ್ಯವಾಗಿ ಹೈಬ್ರಿಡ್ ಗೋವಿನಜೋಳ 12000 ಕ್ವಿಂಟಲ್, ಭತ್ತ 5500 ಕ್ವಿಂಟಲ್, ಸೋಯಾ ಅವರೆ 12000 ಕ್ವಿಂಟಲ್, ತೊಗರಿ 900 ಕ್ವಿಂಟಲ್, ಹೆಸರು 400 ಕ್ವಿಂಟಲ್, ಶೇಂಗಾ 2700 ಕ್ವಿಂಟಲ್ ಬೀಜದ ಅವಶ್ಯಕತೆಯಿದ್ದು, ಕೃಷಿ ಇಲಾಖೆ ಅಗತ್ಯ ದಾಸ್ತಾನು ಮಾಡಿಕೊಳ್ಳುತ್ತಿದೆ. ಮುಂಗಾರು ಹಂಗಾಮಿಗೆ ಒಟ್ಟು 1.25 ಲಕ್ಷ ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಇದರಲ್ಲಿ 48000 ಟನ್ ಪೂರೈಕೆಯಾಗಿದ್ದು, ಈವರೆಗೆ 1800 ಟನ್ ವಿತರಿಸಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜಿಗೆ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.
ದರ ಹೆಚ್ಚಿಸಿದರೆ ದೂರು ನೀಡಿ: ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರು ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ. ಮಾರಾಟ ಮಾಡಿದ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿಯಲ್ಲಿ ಲಾಟ್ ಇಲ್ಲವೇ ಬ್ಯಾಚ್ ಸಂಖ್ಯೆ, ನಿಗದಿಪಡಿಸಿದ ದರ ನಮೂದಿಸಲು ಸೂಚಿಸಿದೆ. ಯಾವುದೇ ಮಾರಾಟಗಾರರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಿದರೆ ಅವಧಿ ಮೀರಿರುವ ಪರಿಕರ ಮಾರಿದರೆ, ಯಾವುದೇ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿದರೆ ರೈತರು ಕೂಡಲೇ ಸಮೀಪದ ಕೃಷಿ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಬೇಕೆಂದು ಸಹ ಜಿಲ್ಲಾಡಳಿತ ರೈತರಿಗೆ ತಿಳಿಸಿದೆ.