Advertisement

ಬೆಳೆಗಳ ಪಲ್ಲಟಕ್ಕೆ ಮುಂದಾದ ರೈತರು

07:04 PM Jul 05, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಈ ಬಾರಿಯ ಮುಂಗಾರು ಪೂರ್ವ ಹಾಗೂ ಮುಂಗಾರು ಆರಂಭಕ್ಕೆ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆಯೂ ಶೇ.95-97ರಷ್ಟಾಗಿದೆ. ಈ ಬಾರಿಯ ಮುಂಗಾರು ಹಂಗಾಮಿಗೆ ರೈತರು ಬೆಳೆಗಳ ಪಲ್ಲಟಕ್ಕೆ ಮುಂದಾಗಿರುವುದು ಕಂಡು ಬರುತ್ತಿದ್ದು, ಸೋಯಾಬಿನ್‌ ನಿರೀಕ್ಷೆಗೂ ಮೀರಿ ಬೇಡಿಕೆ ಸೃಷ್ಟಿಸಿಕೊಂಡಿದ್ದರೆ, ಹೆಸರು, ಉದ್ದು ನೆಗೆತ ಕಂಡಿವೆ. ಆದರೆ ಉಳ್ಳಾಗಡ್ಡಿ ಬೆಳೆಯತ್ತ ರೈತರು ಹಿಂದೇಟು ಹಾಕಿದಂತೆ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 3.60ಲಕ್ಷ ಹೆಕ್ಟೇರ್‌ ಕೃಷಿ ಬಿತ್ತನೆ ಭೂಮಿ ಇದ್ದು, ಇದರಲ್ಲಿ ಸುಮಾರು 3.30ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಶೇ.67ರಷ್ಟು ಹೆಚ್ಚಿನ ಮಳೆ ಬಿದ್ದಿದ್ದರೆ, ಮುಂಗಾರು ಆರಂಭಕ್ಕೆ ಜೂನ್‌ ನಲ್ಲಿ ವಾಡಿಕೆಗಿಂತ ಶೇ.68 ರಷ್ಟು ಹೆಚ್ಚಿನ ಮಳೆ ಆಗಿದ್ದು, ಸಹಜವಾಗಿಯೇ ಕೃಷಿ ಚಟುವಟಿಕೆಗಳು ತೀವ್ರತೆ ಪಡೆಯುವಂತೆ ಮಾಡಿತು. ಮುಂಗಾರು ಬಿತ್ತನೆ ಚುರುಕು ಪಡೆಯಿತು.

ಬೆಳೆಗಳ ಪಲ್ಲಟ: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸಾಮಾನ್ಯವಾಗಿ ಹೆಸರು, ಉದ್ದು, ಸೋಯಾಬಿನ್‌, ಸಜ್ಜೆ, ಶೇಂಗಾ, ಮೆಣಸಿನಕಾಯಿ, ಉಳ್ಳಾಗಡ್ಡಿ, ಮೆಕ್ಕೆಜೋಳ, ಭತ್ತ, ಹತ್ತಿ ಇನ್ನಿತರೆ ಬೆಳೆ ಬೆಳೆಯಲಾಗುತ್ತದೆ. ತೋಟಗಾರಿಕೆ ಬೆಳೆಗಳಾದ ಚಿಕ್ಕು, ಮಾವು, ಪೇರಲಕ್ಕೂ ಧಾರವಾಡ ಜಿಲ್ಲೆ ಹೆಸರುವಾಸಿ. ಈ ಬಾರಿ ಮುಂಗಾರು ಬಿತ್ತನೆಯನ್ನು ಗಮನಿಸಿದರೆ ರೈತರು ಹಲವು ವರ್ಷಗಳಿಂದ ಬಿತ್ತನೆ ಮಾಡುತ್ತ ಬಂದಿದ್ದ ಬೆಳೆಗಳ ಬದಲಾಗಿ ಇತರೆ ಬೆಳೆಗಳತ್ತ ವಾಲಿರುವುದು ಕಂಡು ಬರುತ್ತಿದೆ. ಹತ್ತಿಗೆ ಹೇಳಿ ಮಾಡಿಸಿದ ಪ್ರದೇಶದಲ್ಲಿ ಹತ್ತಿ ಬದಲು ಹೆಸರು, ಉದ್ದು ಹೆಚ್ಚಿನ ಸ್ಥಾನ ಪಡೆದಿವೆ.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಯಾಬಿನ್‌ ಹೆಚ್ಚು ಪ್ರಭಾವ ಬೀರಿದೆ. ಕೆಲವು ಕಡೆ ಭತ್ತದ ಪ್ರದೇಶ ಹೆಚ್ಚುತ್ತಿದ್ದರೆ, ಕಲಘಟಗಿ ತಾಲೂಕಿನಲ್ಲಿ ಕಬ್ಬು ಸಿಹಿ ಕಂಪು ಬೀರತೊಡಗಿದೆ. ಮುಂಗಾರು ಹಂಗಾಮಿಗೆ ಹೆಚ್ಚಿನ ರೀತಿಯಲ್ಲಿ ಬಿತ್ತನೆ ಆಗುತ್ತಿದ್ದ ಉಳ್ಳಾಗಡ್ಡಿ ಯಾಕೋ ಈ ಬಾರಿ ಕೊಂಚ ಮಂಕಾದಂತೆ ಕಾಣುತ್ತಿದೆ. ಕಳೆದ ಕೆಲ ವರ್ಷಗಳಿಂದ ಮೆಣಸಿನಕಾಯಿ ಬಿತ್ತನೆ ಹಿನ್ನಡೆಗೆ ಸಿಲುಕಿತ್ತು. ಕಳೆದ ವರ್ಷ ಒಣಮೆಣಸಿನಕಾಯಿ ಕ್ವಿಂಟಲ್‌ಗೆ 35-40 ಸಾವಿರ ರೂ.ವರೆಗೂ ಮಾರಾಟ ಆಗಿದ್ದರಿಂದ ಮೆಣಸಿನಕಾಯಿ ಬೆಳೆ ಚೇತರಿಸಿಕೊಂಡಿದ್ದು, ಈ ಬಾರಿಯ ಮುಂಗಾರಿನಲ್ಲಿ ಇಲ್ಲಿಯವರೆಗೆ ಸುಮಾರು 6,100 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ದ್ಯಾವನೂರು ಕಡ್ಡಿ ಮೆಣಸಿನಕಾಯಿ ತಳಿ ಇಲ್ಲಿನ ವಿಶೇಷ.

Advertisement

ಶೇ.130 ಹೆಚ್ಚಳ: ಉತ್ತಮ ದರ ಹಾಗೂ ಒಳ್ಳೆ ಬೇಡಿಕೆ ಇದೆ. ಇಳುವರಿಯೂ ಉತ್ತಮ ರೀತಿಯಲ್ಲಿ ಬರುತ್ತದೆ ಎಂಬ ಕಾರಣಕ್ಕೋ ಏನೋ ಧಾರವಾಡ, ಬೀದರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿಗೆ ಸೋಯಾಬಿನ್‌ ಬಿತ್ತನೆ ಅಧಿಕವಾಗಿದ್ದು, ಸೋಯಾಬೀಜಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಸೋಯಾಬಿನ್‌ ಕೂಡ ಒಂದಾಗಿದೆಯಾದರೂ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸೋಯಾ ಬಿತ್ತನೆ ಪ್ರದೇಶದ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸೋಯಾ ಬಿತ್ತನೆ ಕಳೆದ ಬಾರಿಗೆ ಹೋಲಿಸಿದರೆ ಶೇ.120-130 ಹೆಚ್ಚಳವಾಗಿದೆಯಂತೆ.

ಮುಂಗಾರು ಹಂಗಾಮಿಗೆ ಸರಿ ಸುಮಾರು 15 ಸಾವಿರ ಕ್ವಿಂಟಲ್‌ನಷ್ಟು ಸೋಯಾ ಬಿತ್ತನೆ ಬೀಜ ಹಂಚಿಕೆ ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4020 ಕ್ವಿಂಟಲ್‌ ಅಧಿಕವಾಗಿದೆ. ಹತ್ತಿ ಬೆಳೆಗೆ ನವಲಗುಂದ, ಅಣ್ಣಿಗೇರಿ ತಾಲೂಕುಗಳು ತಮ್ಮದೇ ಖ್ಯಾತಿ ಪಡೆದಿವೆ. ಪಾರಂಪರಿಕವಾಗಿ ಹತ್ತಿ ಬೆಳೆಯುವ ಪ್ರದೇಶವೆಂಬ ಕಾರಣಕ್ಕೆ ಅಣ್ಣಿಗೇರಿಯಲ್ಲಿ ಹಲವು ದಶಕಗಳಿಂದ ಹತ್ತಿ ಮಾರುಕಟ್ಟೆಗೆ ಹೆಸರಾಗಿದೆ. ಜತೆಗೆ ಅಣ್ಣಿಗೇರಿಯಲ್ಲಿಯೇ ಬೃಹತ್‌ ಹತ್ತಿ ಕಾರ್ಖಾನೆಯೊಂದು ಕಾರ್ಯ ನಿರ್ವಹಿಸುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಹತ್ತಿ ಕಾರ್ಖಾನೆಯೂ ತನ್ನ ಸದ್ದು ನಿಲ್ಲಿಸಿದೆ. ಸಾಂಪ್ರದಾಯಿಕ ಜಯಧರ, ಪಂಢರಾಪುರ, ವರಲಕ್ಷೀ ಹತ್ತಿ ಬೆಳೆ ಬೆಳೆಯುತ್ತಿದ್ದ ರೈತರು ಕೆಲ ವರ್ಷಗಳಿಂದ ಬಹುತೇಕವಾಗಿ ಬಿ.ಟಿ ಹತ್ತಿಯತ್ತ ವಾಲಿದ್ದರು. ಹತ್ತಿ ಇಳುವರಿ ಎಕರೆಗೆ 15 ಕ್ವಿಂಟಲ್‌ನಿಂದ ಇದೀಗ 7-8 ಕ್ವಿಂಟಲ್‌ ಗೆ ಇಳಿದಿರುವುದು, ಹತ್ತಿಗೆ ರೋಗಬಾಧೆ ಹೆಚ್ಚುತ್ತಿರುವುದು, ನಿರ್ವಹಣೆ ವೆಚ್ಚ ಅಧಿಕವಾಗುತ್ತಿರುವುದರಿಂದ ಪ್ರಸಕ್ತ ಮುಂಗಾರಿನಲ್ಲಿ ಅಣ್ಣಿಗೇರಿ, ನವಲಗುಂದಲ್ಲಿ ಬಿತ್ತನೆ ಗಮನಿಸಿದರೆ, ರೈತರು ಹತ್ತಿ ಬದಲು ಹೆಸರು-ಉದ್ದು ಬೆಳೆಗಳತ್ತ ವಾಲಿರುವುದು ಕಂಡು ಬರುತ್ತಿದೆ. ಅದೇ ರೀತಿ ಧಾರವಾಡ ತಾಲೂಕಿನಲ್ಲೂ ಹೆಸರು ಬಿತ್ತನೆ ಕೊಂಚ ಹೆಚ್ಚಾಗಿದ್ದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉದ್ದು ದುಪ್ಪಟ್ಟು ಆಗಿದೆ.

ಧಾರವಾಡ, ಹುಬ್ಬಳ್ಳಿ, ನವಲಗುಂದ ತಾಲೂಕುಗಳಲ್ಲಿ ಭತ್ತದ ಬೆಳೆ ಹೆಚ್ಚತೊಡಗಿದೆ. ಕಲಘಟಗಿ ತಾಲೂಕಿನಲ್ಲಿ ಕಬ್ಬು ಪ್ರದೇಶ ಹೆಚ್ಚತೊಡಗಿದೆ. ಹೆಸರಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಘೋಷಿಸಿದ್ದರಿಂದ ಖಚಿತ ಬೆಲೆ ದೊರೆಯುವ ವಿಶ್ವಾಸ ಒಂದು ಕಡೆಯಾದರೆ, ಹೆಸರು ಬಿತ್ತನೆ ಮಾಡಿದರೆ ಹೊಲದಲ್ಲಿ ಕಳೆ ಸಮಸ್ಯೆ ಕಡಿಮೆ ಆಗಲಿದೆ ಎಂಬ ನಂಬಿಕೆ ರೈತರದ್ದಾಗಿದೆ. ಹೆಸರು ತೆಗೆದ ನಂತರ ಹಿಂಗಾರಿಗೆ ಕಡಲೆ ಬಿತ್ತನೆ ಮಾಡಿದರೆ ಕಡಲೆಗೂ ಉತ್ತಮ ಬೆಲೆ ಇದ್ದು, ಎಕರೆಗೆ ಏನಿಲ್ಲವೆಂದರೂ 7-8 ಕ್ವಿಂಟಲ್‌ ಕಡಲೆ ಬರುತ್ತದೆ ಎಂಬುದು ರೈತರ ಅನಿಸಿಕೆ.ಅದೇ ರೀತಿ ತೋಟಗಾರಿಕೆ ಬೆಳೆಗಳತ್ತ ಗಮನ ಹರಿಸಿದರೆ ಮಾವು, ಚಿಕ್ಕು, ಪೇರಲ ಬೆಳೆಗೆ ಧಾರವಾಡ ಜಿಲ್ಲೆ ಹೆಸರುವಾಸಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಹವಾಮಾನ ವೈಪರಿತ್ಯ, ಉತ್ತಮ ಮಾರುಕಟ್ಟೆ ಇಲ್ಲದಿರುವುದು, ಸರಾಸರಿ ಉತ್ಪನ್ನ ಕುಸಿತ, ಮಾವು ಕೃಷಿ ಮೇಲೆ ತನ್ನದೇ ಪರಿಣಾಮ ಬೀರಿದ್ದು, ಕೊರೊನಾ ಸಹ ಕಳೆದೆರಡು ವರ್ಷಗಳಿಂದ ಮಾವಿನ ಸೊಂಟ ಮುರಿದಿದೆ ಎಂದೇ ಹೇಳಬಹುದು.

ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಬದಲಾದ ಸನ್ನಿವೇಶ, ಮಾರುಕಟ್ಟೆ, ಹವಾಮಾನ ಇನ್ನಿತರೆ ಕಾರಣಗಳಿಂದ ರೈತರು ಬೆಳೆಗಳ ಪಲ್ಲಟಕ್ಕೆ ಮುಂದಾಗಿರುವುದಂತೂ ಸ್ಪಷ್ಟ.

Advertisement

Udayavani is now on Telegram. Click here to join our channel and stay updated with the latest news.

Next