Advertisement

ಕೋವಿಡ್ ಮಧ್ಯೆ ಬಿತ್ತನೆಗೆ ಸಿದ್ಧರಾದ ರೈತರು

02:18 PM May 18, 2021 | Team Udayavani |

ವರದಿ : ಕೇಶವ ಆದಿ

Advertisement

ಬೆಳಗಾವಿ: ಕಳೆದ ವರ್ಷ ಬಂದ ಕೊರೊನಾ ಹಾವಳಿಯಿಂದ ಸಂಪೂರ್ಣ ತತ್ತರಿಸಿದ್ದ ಕೃಷಿ ಕ್ಷೇತ್ರ ಅದರಿಂದ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಈ ವರ್ಷ ಬಂದ ಎರಡನೇ ಅಲೆ ಮತ್ತಷ್ಟು ಹೊಡೆತ ನೀಡಿದೆ. ಸಮೃದ್ಧ ಬೆಳೆ ಬಂದರೂ ಅದನ್ನು ಅನುಭವಿಸಲಾರದ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಆತಂಕವೂ ಉಂಟಾಗಿದೆ.

ಸತತ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾದಿಂದ ನೆಮ್ಮದಿ ಕಳೆದುಕೊಂಡಿರುವ ರೈತ ಸಮುದಾಯ ಅನಿವಾರ್ಯವಾಗಿ ಮತ್ತೆ ಹೊಸ ಬಿತ್ತನೆ ಕಾರ್ಯಕ್ಕೆ ಮುಂದಾಗಬೇಕಿದೆ. ಇನ್ನೊಂದು ಕಡೆ ಈ ಎಲ್ಲ ಆತಂಕ ಹಾಗೂ ನೋವುಗಳ ನಡುವೆ ಕೃಷಿ ಇಲಾಖೆ ವಾಡಿಕೆಯಂತೆ ಮುಂಗಾರು ಬಿತ್ತನೆ ಕಾರ್ಯಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಬೀಜ ಹಾಗೂ ರಸಗೊಬ್ಬರ ಸಂಗ್ರಹಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಏಪ್ರೀಲ್‌ ಕೊನೆಯ ವಾರ ಹಾಗೂ ಮೇ ತಿಂಗಳ ಆರಂಭದಲ್ಲಿ ಬಿದ್ದ ಮಳೆ ಕೃಷಿ ಚಟುವಟಿಕೆಗಳಿಗೆ ಜೀವ ತುಂಬಿದೆ.

ಜಿಲ್ಲೆಯ ಸವದತ್ತಿ, ರಾಮದುರ್ಗ, ಬೆಳಗಾವಿ, ಬೈಲಹೊಂಗಲ, ಕಿತ್ತೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಬಿತ್ತನೆ ಕಾರ್ಯಕ್ಕೆ ಜಮೀನನ್ನು ಹದ ಮಾಡಿಕೊಳ್ಳುವ ಕಾರ್ಯ ಬಿರುಸಿನಿಂದ ನಡೆದಿದೆ. ಆಗಾಗ ಬಿದ್ದ ಉತ್ತಮ ಮಳೆ ಕೃಷಿ ಚಟುವಟಿಕೆಗಳಿಗೆ ವರವಾಗಿ ಕಂಡಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ 6.86 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ 5.92 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು ಈ ಬಾರಿ ಮೇ ತಿಂಗಳಲ್ಲಿ ಸಮರ್ಪಕ ಮಳೆಯಾಗುತ್ತಿದ್ದು ಉತ್ತಮ ಬೆಳೆಯ ವಿಶ್ವಾಸದೊಂದಿಗೆ ಬಿತ್ತನೆಯ ಗುರಿಯನ್ನು 7.16 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಒಟ್ಟು 48 ಸಾವಿರ ಕ್ವಿಂಟಲ್‌ ಬೀಜಗಳು ಮತ್ತು ಎರಡು ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

ಕಳೆದ ಎರಡು ವರ್ಷಗಳ ಬೆಳೆಯ ಪ್ರಮಾಣವನ್ನು ನೋಡಿದಾಗ 20 ಸಾವಿರ ಹೆಕ್ಟೇರ್‌ದಷ್ಟು ಏರಿಕೆಯಾಗಿದೆ. ವಾಣಿಜ್ಯ ಬೆಳೆಯಾದ ಕಬ್ಬಿನ ಬಿತ್ತನೆ ಪ್ರದೇಶದಲ್ಲಿ ಸುಮಾರು 60 ಸಾವಿರ ಹೆಕ್ಟೇರ್‌ದಷ್ಟು ಹೆಚ್ಚಳವಾಗಿದೆ. ಮುಖ್ಯವಾಗಿ ಮಳೆಯಾಶ್ರಿತ ಪ್ರದೇಶದ ಪ್ರಮಾಣದಲ್ಲಿ 14 ಸಾವಿರ ಹೆಕ್ಟೇರ್‌ ದಷ್ಟು ಕಡಿಮೆಯಾಗಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.

ಜಿಲ್ಲೆಯಲ್ಲಿ ವಿಶೇಷವಾಗಿ ಚಿಕ್ಕೋಡಿ, ಹುಕ್ಕೇರಿ, ಬೈಲಹೊಂಗಲ ಹಾಗೂ ಬೆಳಗಾವಿ ತಾಲೂಕುಗಳಲ್ಲಿ ಸೋಯಾಬಿನ್‌ ಬೀಜಕ್ಕೆ ಮೊದಲಿಂದಲೂ ಹೆಚ್ಚಿ ನ ಬೇಡಿಕೆ ಇದೆ. ಈ ಕಾರಣದಿಂದ ಈಗಾಗಲೇ 25 ಸಾವಿರ ಕ್ವಿಂಟಲ್‌ ಸೋಯಾ ಅವರೆ ಬಿತ್ತನೆ ಬೀಜವನ್ನು ಸಂಗ್ರಹಮಾಡಲಾಗಿದೆ. 2.06 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಧಾನ್ಯಗಳು, ಸುಮಾರು 63 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೇಳೆ ಕಾಳುಗಳು, 1.30 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಆಹಾರ ಧಾನ್ಯ ಮತ್ತು ಎಣ್ಣೆ ಕಾಳುಗಳು, 3,17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು, ಹತ್ತಿ, ತಂಬಾಕು ಮೊದಲಾದ ವಾಣಿಜ್ಯ ಬೆಳೆಗಳ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಇದಲ್ಲದೆ ಜಿಲ್ಲೆಯಲ್ಲಿ 40 ಕ್ವಿಂಟಲ್‌ ಹೆಸರು, 525 ಕ್ವಿಂಟಲ್‌ ಭತ್ತ, 300 ಕ್ವಿಂಟಲ್‌ ಉದ್ದು ಬೀಜಗಳ ಸಂಗ್ರಹ ಇದೆ. 18 ಸಾವಿರ ಮೆಟ್ರಿಕ್‌ ಟನ್‌ ಯೂರಿಯಾ, ಎಂಟು ಸಾವಿರ ಡಿ ಎ ಪಿ ಗೊಬ್ಬರ ಲಭ್ಯವಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಹಂಗಾಮಿನಲ್ಲಿ ಸೋಯಾ ಅವರೆ, ಮೆಕ್ಕೆಜೋಳ, ಹೆಸರು, ಭತ್ತ, , ತೋಗರಿ, ಸೂರ್ಯಕಾಂತಿ, ಜೋಳದ ಬೀಜಗಳನ್ನು ಎಲ್ಲ ವರ್ಗದ ರೈತರಿಗೆ ಗರಿಷ್ಠ ಐದು ಎಕರೆ ಪ್ರದೇಶಕ್ಕೆ ಸೀಮೀತವಾಗಿರುವಂತೆ ರಿಯಾಯತಿ ದರದಲ್ಲಿ ವಿತರಿಸಲಾಗುವದು. ಜಿಲ್ಲೆಯ ಒಟ್ಟು 35 ರೈತ ಸಂಪರ್ಕ ಕೇಂದ್ರಗಳು ಹಾಗೂ 96 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಈ ಬೀಜಗಳನ್ನು ರೈತರಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಬಹಳ ಹಾನಿಯಾಗಿದೆ.

ಒಳ್ಳೆಯ ಬೆಳೆ ಬಂದಿದ್ದರೂ ಅದನ್ನು ಮಾರಾಟ ಮಾಡಲಾಗದೆ ಅಪಾರ ನಷ್ಟ ಅನುಭವಿಸಿದ್ದೇವೆ. ಲಾಕ್‌ಡೌನ್‌, ದರ ಕುಸಿತ, ಮಾರುಕಟ್ಟೆ ಅಭಾವ ಮೊದಲಾದ ಕಾರಣಗಳಿಂದ ನಾವು ನಿರೀಕ್ಷೆ ಮಾಡಿದ ಆದಾಯ ಸಿಕ್ಕಿಲ್ಲ. ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಬಹಳ ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಕಾರಣ ಈ ಬಾರಿ ಉಚಿತವಾಗಿ ಬೀಜ ಹಾಗೂ ಗೊಬ್ಬರವನ್ನು ನೀಡಬೇಕು ಎಂಬುದು ರೈತರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next