Advertisement

ನೀರು ವಿನಿಮಯಕ್ಕೆ ಮಹಾ ಜತೆ ಒಡಂಬಡಿಕೆ: ಡಿಕೆಶಿ

11:29 PM May 06, 2019 | Lakshmi GovindaRaj |

ಬೆಳಗಾವಿ: “ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರದ ಜತೆಗೆ ಪರಸ್ಪರ ನೀರು ವಿನಿಮಯ ಒಡಂಬಡಿಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಸಿದ್ಧವಿದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಸಂಬಂಧಿಸಿದಂತೆ ನಗರದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಕಚೇರಿಯಲ್ಲಿ ಸೋಮವಾರ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಸಂಬಂಧಪಟ್ಟ ಶಾಸಕರು ಮತ್ತು ಸಂಸದರ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಸಂಪುಟ ಸಭೆಯಲ್ಲಿ ಈ ವಿಷಯ ಮಂಡಿಸಿ ಅದಕ್ಕೆ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು.

ಈ ಮುಂಚೆ ಮಹಾರಾಷ್ಟ್ರ ಸರ್ಕಾರ ನಮ್ಮಿಂದ ಹಣ ಪಡೆದು ನೀರು ಪೂರೈಸುತ್ತಿತ್ತು. ಪ್ರತಿ ವರ್ಷ ಹಲವಾರು ಬಾರಿ ಈ ರೀತಿ ಹಣಕೊಟ್ಟು ನೀರು ಪಡೆಯಲಾಗುತ್ತಿತ್ತು. ಆದರೆ ಈ ಬಾರಿ ಮಹಾರಾಷ್ಟ್ರ ಸರಕಾರ ಹಣದ ಬದಲು ನೀರು ವಿನಿಮಯದ ಪ್ರಸ್ತಾವ ಸಲ್ಲಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರವೂ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ ಎಂದರು.

ನಾಲ್ಕು ಟಿಎಂಸಿ ಅಡಿ ನೀರು ವಿನಿಮಯ ಕುರಿತು ಸಮಗ್ರ ಅಧ್ಯಯನ ನಡೆಸಿ ಅದರ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಲು ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಲಾಗುವುದು. ಸಮಿತಿ ನೀಡುವ ವರದಿಯ ಆಧಾರದ ಮೇಲೆ ಕಾನೂನು ಅಭಿಪ್ರಾಯ ಪಡೆದುಕೊಂಡು ಸಂಪುಟ ಸಭೆಯಲ್ಲಿ ಒಡಂಬಡಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮಹಾರಾಷ್ಟ್ರ ಸರ್ಕಾರ ಪ್ರಸ್ತಾವ: ಪ್ರತಿವರ್ಷ ಬೇಸಿಗೆಯ ಅವಧಿಯಲ್ಲಿ ಕೃಷ್ಣಾ ನದಿಯಿಂದ ನಾಲ್ಕು ಟಿಎಂಸಿ ಅಡಿ ನೀರು ವಿನಿಮಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಒಡಂಬಡಿಕೆ ಮಾಡಿಕೊಳ್ಳುವ ಪ್ರಸ್ತಾವವನ್ನು ನಮ್ಮ ಮುಂದಿಟ್ಟಿದೆ. ಎರಡೂ ರಾಜ್ಯಗಳ ಕೃಷ್ಣಾ ನದಿ ತೀರದ ಜನರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಈ ರೀತಿಯ ಒಡಂಬಡಿಕೆಗೆ ಕರ್ನಾಟಕ ಸರ್ಕಾರದ ಸಹಮತವಿದೆ. ನಮ್ಮ ಸಹಮತದ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ತಕ್ಷಣ ಪತ್ರ ಬರೆಯುವಂತೆ ಸೂಚಿಸಲಾಗುವುದು ಎಂದು ಹೇಳಿದರು.

Advertisement

ನೀರು ಬಿಡುಗಡೆಗೆ ಮನವಿ: ಕೃಷ್ಣಾ ನದಿ ತೀರದಲ್ಲಿರುವ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿನ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಮಾನವೀಯತೆ ಆಧಾರದ ಮೇಲೆ ತಕ್ಷಣವೇ ನಾಲ್ಕು ಟಿಎಂಸಿ ಅಡಿ ನೀರು ಬಿಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನೀರು ಬಿಡುಗಡೆ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಸಹ ಭರವಸೆ ನೀಡಿದೆ. ನಾಳೆಯವರೆಗೆ ನೀರು ಬರುವ ನಿರೀಕ್ಷೆಯಿದೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡುವ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಪಂಪ್‌ಸೆಟ್‌ ಅಳವಡಿಸಿ ಕೃಷಿ ಉದ್ದೇಶಕ್ಕೆ ಬಳಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌, ಹೆಸ್ಕಾಂ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಸಹ ಇದಕ್ಕೆ ಸಹಕಾರ ನೀಡಿ ನೀರನ್ನು ಕುಡಿಯಲು ಮಾತ್ರ ಬಳಸಬೇಕೆಂದು ಮನವಿ ಮಾಡಿದರು.

ಮಹಾರಾಷ್ಟ್ರ ನಮ್ಮ ಮುಂದಿಟ್ಟಿರುವ ನೀರು ವಿನಿಮಯ ಒಡಂಬಡಿಕೆಯ ಬಗ್ಗೆ ಮೇ 29 ರ ಬಳಿಕ ಅಗತ್ಯ ಪ್ರಕ್ರಿಯೆ ಆರಂಭಿಸಲಾಗುವುದು. ಮಹಾರಾಷ್ಟ್ರ ಸರಕಾರ ಸಿದ್ಧಪಡಿಸಿರುವ ಪ್ರಸ್ತಾವದಲ್ಲಿ ಪ್ರತಿವರ್ಷ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ತಲಾ ಎರಡು ಟಿಎಂಸಿ ಅಡಿ ನೀರು ಒದಗಿಸಿದರೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ಅಡಿ ನೀರು ಹರಿಸುವುದಾಗಿ ತಿಳಿಸಲಾಗಿದೆ. ಇದುವರೆಗೆ 2004 ರಿಂದ 2017 ರವರೆಗೆ ಮಹಾರಾಷ್ಟ್ರ ಸರ್ಕಾರ ನಮ್ಮಿಂದ ಹಣ ಪಡೆದು ನೀರು ಪೂರೈಸುತ್ತಿತ್ತು. 2004 ರಲ್ಲಿ 2.12 ಕೋಟಿ, 2009 ರಲ್ಲಿ 6.73 ಕೋಟಿ, 2012 ರಲ್ಲಿ 2.84 ಕೋಟಿ ನೀಡಲಾಗಿತ್ತು.

ವಿನಿಮಯದ ಬಗ್ಗೆ ಅಧ್ಯಯನ: ನೀರು ವಿನಿಮಯ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುತ್ತದೆ. ನಮ್ಮ ರಾಜ್ಯದ ನೀರಾವರಿ ಯೋಜನೆಗಳಿಗೆ ಲಭ್ಯವಿರುವ ನೀರು ಹಂಚಿಕೆ ಮಾಡಲಾಗಿದ್ದು, ನೀರು ಯಾವ ರೀತಿ ಉಳಿತಾಯ ಮಾಡಿ ಮಹಾರಾಷ್ಟ್ರದ ಜತೆ ಹೇಗೆ ವಿನಿಮಯ ಮಾಡಬೇಕು ಎಂಬ ಬಗ್ಗೆ ತಜ್ಞರ ಸಮಿತಿ ವರದಿ ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next