Advertisement

ಚಂದ್ರನ ಮೇಲಿನ ಅಧ್ಯಯನಕ್ಕೆ ಒಪ್ಪಂದ

11:27 AM Nov 18, 2017 | Team Udayavani |

ಬೆಂಗಳೂರು: ಚಂದ್ರನ ಮೇಲಿನ ಹೆಚ್ಚಿನ ಅಧ್ಯಯನಕ್ಕಾಗಿ ಭಾರತ ಮತ್ತು ಜಪಾನ್‌ ಹೊಸ ಒಪ್ಪಂದ ಮಾಡಿಕೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಮತ್ತು ಜಪಾನ್‌ ಜಂಟಿಯಾಗಿ ಚಂದ್ರನ ಮೇಲೆ ರೋವರ್‌ ಮತ್ತು ರೇಂಜರ್‌ ಇಳಿಸಲು, ಸ್ಯಾಂಪಲ್‌ ಪಡೆಯುವ ಸಂಬಂಧ ಪೂರಕವಾಗುವ ಒಪ್ಪಂದ ಮಾಡಿಕೊಂಡಿದೆ ಎಂದರು.

ಇದು ಇಂಪ್ಲಿಮೆಂಟೇಷನ್‌ ಅರೆಂಜ್‌ಮೆಂಟ್‌ ಒಪ್ಪಂದವಾಗಿದ್ದು, ವಾತಾವರಣದ ಬದಲಾವಣೆಯ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ಫ್ರಿಕ್ವೇನ್ಸಿಸ್‌ ಕ್ಯಾಸ್ಟ್ರೋ ಮೀಟರ್‌ ಉಪಕರಣವನ್ನು ಉಪಗ್ರಹದಲ್ಲಿ ಕೂರಿಸುವ ಸಂಬಂಧ ಚರ್ಚೆ ನಡೆಯುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ ಎಂದು ವಿವರಿಸಿದರು.

ಚಂದ್ರಯಾನ-2ರ ಉಡಾವಣೆಗೆ ಬೇಕಾದ ಸಿದ್ಧತೆ ಮೂರು ವಿಭಾಗದಲ್ಲಿ ನಡೆಯುತ್ತಿದೆ. ಕಕ್ಷೆಗೆ ಸೇರಲು ಬೇಕಾದ ಉಪಕರಣಗಳನ್ನು ಜೋಡಿಸುವ ಪ್ರಕ್ರಿಯೆ ಆರಂಭವಾಗಿದೆ. 2018ರ ಮಾರ್ಚ್‌ಗೆ ಉಡಾವಣೆಯಾಗಲಿದೆ. ಇಸ್ರೋ ಗ್ರಾಹಕ ಸಂಸ್ಥೆಗಳ 28 ಹಾಗೂ ಇಸ್ರೋ ಸಿದ್ಧಪಡಿಸಿರುವ ಕಾರ್ಟ್‌ಸೆಟ್‌-2ರ ಸೀರಿಸ್‌ನ ಉಪಗ್ರಹ ಉಡಾವಣೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದರು.

ವಾತಾವರಣ ಅಧ್ಯಯನ: ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯದ ಬಗ್ಗೆ ಮಾಹಿತಿ ನೀಡುವ ಅಧ್ಯಯನ ನಾಸ ನಡೆಸಿದೆ. ಇಸ್ರೋ ಈ ಕುರಿತಾಗಿ ಅಷ್ಟೊಂದು ಆಳವಾಗಿ ಅಧ್ಯಯನ ಮಾಡಿಲ್ಲ. ವಾತಾವರಣದಲ್ಲಿ ಆಗುವ ಬದಲಾವಣೆ, ಸಮುದ್ರ ಮಟ್ಟದ ಏರಿಳಿತ ಸೇರಿದಂತೆ ಹಲವು ವಿಷಯದ ಅಧ್ಯಯನವನ್ನು ಹೈದರಬಾದ್‌ನ ಘಟಕ ಮಾಡಿದೆ. ಇನ್ನೂ ಸಾಕಷ್ಟು ಸಂಶೋಧನೆ ಆಗಬೇಕಿದೆ ಎಂದರು.

Advertisement

ಸ್ವದೇಶಿ ನಿರ್ಮಿತ ಜಿಪಿಎಸ್‌ನಿಂದ ಮೀನುಗಾರರಿಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುವ ಕೆಲಸ ಆಗುತ್ತಿದೆ. ಐದಾರು ತಿಂಗಳಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಲಿದ್ದೇವೆ. ಸ್ವದೇಶಿ ನಿರ್ಮಿತ ಜಿಪಿಎಸ್‌ ವ್ಯವಸ್ಥೆ ಮೊಬೈಲ್‌ ಸೇರಿದಂತೆ ಇನ್ನಿತರೇ ಉಪಕರಣಗಳಿಗೆ ಅವಳಡಿಸಲು ಇನ್ನೂ ಐದಾರು ವರ್ಷದ ಅಗತ್ಯವಿದೆ ಎಂದರು.

ಇಸ್ರೋ ಅಧ್ಯಯನ: ಇಸ್ರೋ ಕ್ರಿಯೋಜೆನಿಕ್‌ ಟೆಕ್ನಾಲಜಿಯನ್ನು ಹೊಸ ಉಪಗ್ರಹಕ್ಕೂ ಬಳಸಿಕೊಳ್ಳುವ ಚಿಂತನೆ ನಡೆಸುತ್ತಿದ್ದೇವೆ. ಮಂಗಳಯಾನ-1 ಕಕ್ಷೆಗೆ ಸೇರಿ ಸೆ.24ಕ್ಕೆ 3 ವರ್ಷ ಪೂರೈಸಿದೆ. ಇನ್ನು ಹಲವು ವರ್ಷ ಕೆಲಸ ಮಾಡಲಿದೆ. ಮಂಗಳಯಾನ-2ರ ಯಾವುದೇ ಸಿದ್ಧತೆ ನಡೆದಿಲ್ಲ.

ಚಂದ್ರಯಾನ-2 ಮತ್ತು ಆದಿತ್ಯ ಮಿಷನ್‌ಗೆ ಆದ್ಯತೆ ನೀಡುತ್ತಿದ್ದೇವೆ. ಇಸ್ರೋ ಸಂಶೋಧನಾ ತಂಡಗಳು ಹಲವು ವಿಷಯದ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ನೀಡುತ್ತಿವೆ. ಭೂಮಿಯ ಚಲನೆ, ಸಂವಹನ ಹಾಗೂ ನ್ಯಾವಿಗೇಷನ್‌ ವಿಚಾರವಾಗಿಯೇ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ ಎಂದು ಕಿರಣ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next