ಬೆಂಗಳೂರು: ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ಶನಿವಾರ ಒಪ್ಪಂದ ಮಾಡಿಕೊಳ್ಳಲಾಯಿತು. ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಪರವಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.
ಕಲಬುರಗಿ ವಿಮಾನ ನಿಲ್ದಾಣ ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ -3.0 ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಾಚರಣೆಗೆ ಆಯ್ಕೆಯಾಗಿದ್ದು, ಅಲೈಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈ ಲಿಮಿಟೆಡ್ ಇವರು ವಿಮಾನಯಾನ ಕಾರ್ಯಾಚರಣೆ ಒದಗಿಸಲು ಆಯ್ಕೆಯಾಗಿದ್ದಾರೆ. ಪ್ರಸ್ತುತ ಕಲಬುರಗಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಗಾಗಿ ಬೆಂಗಳೂರು-ಕಲಬುರಗಿ-ಬೆಂಗಳೂರು, ಹಿಂಡನ್-ಕಲಬುರಗಿ, ಕಲಬುರಗಿ- ತಿರುಪತಿ -ಕಲಬುರಗಿ ಮಾರ್ಗವು ಆಯ್ಕೆಗೊಂಡಿದೆ.
ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ 2007ರ ಮಾರ್ಚ್ 27 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಈ ಯೋಜನೆಯನ್ನು 742 ಎಕರೆ ಜಮೀನಿನಲ್ಲಿ ಸುಮಾರು 22 ಕೋಟಿ ರೂ.ಗಳ ಭೂಸ್ವಾಧೀನ ವೆಚ್ಚ ಹಾಗೂ 181 ಕೋಟಿ ರೂ.ಗಳ ನಿರ್ಮಾಣ ವೆಚ್ಚದಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಇದುವರೆಗೆ 203 ಕೋಟಿ ರೂ.ಗಳನ್ನು ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ನಿರ್ಮಾಣಕ್ಕಾಗಿ ವೆಚ್ಚ ಮಾಡಲಾಗಿದೆ.
ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಮೆ.ರೈಟ್ಸ್ ಪ್ರೈವೇಟ್ ಲಿಮಿಟೆಡ್ ಇವರನ್ನು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಪ್ರಸ್ತುತ ಸದರಿ ವಿಮಾನ ನಿಲ್ದಾಣದ ಕಾಮಗಾರಿಗಳು ಪೂರ್ಣಗೊಂಡಿದ್ದು, 2018ರ ಆಗಸ್ಟ್ ತಿಂಗಳಿನಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಕೈಗೊಳ್ಳಲಾಗಿತ್ತು.
ಕೇಂದ್ರ ಸರ್ಕಾರದ ಭಾರತೀಯ ವಿಮಾನಯಾನ ಪ್ರಾಧಿಕಾರದಿಂದ ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಕೈಗೊಳ್ಳಲಾಗುವುದರಿಂದ ಕರ್ನಾಟಕ ರಾಜ್ಯದ ಹಿಂದುಳಿದ ಪ್ರದೇಶವಾದ ಹೈದರಾಬಾದ್ -ಕರ್ನಾಟಕ ಪ್ರದೇಶಕ್ಕೆ ದೇಶದ ಹಾಗೂ ರಾಜ್ಯದ ರಾಜಧಾನಿಯೊಂದಿಗೆ ವಿಮಾನಯಾನ ಸಂಪರ್ಕವನ್ನು ಕಲ್ಪಿಸುವುದಕ್ಕೆ ಅನುಕೂಲವಾಗುತ್ತದೆ.
ಅಲ್ಲದೆ, ಹೈದರಾಬಾದ್-ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಲೋಕಸಭೆ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಕೆಎಸ್‌ಐಐಸಿ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಉಪಸ್ಥಿತರಿದ್ದರು.