Advertisement

ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಒಪ್ಪಿಗೆ : ಸಚಿವ ನಾರಾಯಣಗೌಡ 

05:31 PM Mar 01, 2021 | Suhan S |

ವಿಜಯಪುರ : ಮುಂಬರುವ ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯದಲ್ಲಿ ಆಯೋಜಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

Advertisement

ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್, ಅಥ್ಲೆಟಿಕ್ ಟ್ರಾಕ್, ವಾಲಿಬಾಲ್ ಮೈದಾನಗಳ ಹಾಗೂ ಒಳಾಂಗಣ ಈಜುಕೊಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖೆಲೋ ಇಂಡಿಯಾ ಕ್ರೀಡಾಕೂಟ ಆಯೋಜಿಸುವ ರಾಜ್ಯದ ಮನವಿಗೆ ಪ್ರಧಾನಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಕೇಂದ್ರದ ಕ್ರೀಡಾ ತಜ್ಞರು ಕೂಡ ಕ್ರೀಡಾಕೂಟಕ್ಕಾಗಿ ರಾಜ್ಯದ ಆರು ಸ್ಥಳಗಳನ್ನು ಗುರುತಿಸಿದ್ದಾರೆ ಎಂದು ಹೇಳಿದರು.

ವಿಜಯಪುರ ನಗರದಲ್ಲಿ ಕ್ರೀಡಾಪಟುಗಳನ್ನು ಹೆಚ್ಚಿನ  ಪ್ರೋತ್ಸಾಹದ ಅಗತ್ಯವಿದೆ. ರಾಜ್ಯದ 2 ಕೋಟಿ ಕ್ರೀಡಾಪಟುಗಳಲ್ಲಿ ಪ್ರೋತ್ಸಾಹಿಸಿ, ಶಕ್ತಿ ತುಂಬುವ  ಕಾರ್ಯ ನಡೆಯಬೇಕಿದೆ. ಕ್ರೀಡಾ ಕ್ಷೇತ್ರದಲ್ಲಿ ಸಮಸ್ಯೆ, ಅಗತ್ಯಗಳನ್ನು ತಿಳಿಯಲು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಬರುವ ಬಜೆಟ್ ನಲ್ಲಿ ಇದಕ್ಕಾಗಿ ಅಗತ್ಯ ಅನುದಾನ ಒದಗಿಸಲು ಸಮಗ್ರ ಅಧ್ಯಯನ ವರದಿ ಸಿದ್ಧಪಡಿಸುವುದಾಗಿ ತಿಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾಪಟುಗಳಲ್ಲಿ ಶಕ್ತಿ ತುಂಬುವ ಕಾರ್ಯ ನಡೆಯಬೇಕಾಗಿದೆ. ಕ್ರೀಡಾಪಟುಗಳ ಮೂಲಕ ದೇಶದ ಕೀರ್ತಿ ಹೆಚ್ಚಿಸಬೇಕಾಗಿದೆ ಎಂದ ಅವರು ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವ ಕೆಲಸವೂನಡೆದಿದೆ ಎಂದರು.

ವಿಜಯಪುರ ನಗರದಲ್ಲಿ ಅರ್ಧಕ್ಕೆ ನಿಂತಿರುವ ಸೈಕ್ಲಿಂಗ್ ವೆಲೋಡ್ರೋಂ  ಕಾಮಗಾರಿಯನ್ನು ಅತ್ಯುತ್ತಮ ತಂತ್ರಜ್ಞರ ಮೂಲಕ ರೂಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

Advertisement

ನಗರದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಅಥ್ಲೆಟಿಕ್ ಟ್ರ್ಯಾಕ್, 3 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ, 2 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, 50 ಲಕ್ಷ ರೂ. ವೆಚ್ಚದಲ್ಲಿ ವಾಲಿಬಾಲ್ ಅಂಕಣ ಸೇರಿದಂತೆ ಇತರೆ ಕಾಮಗಾರಿಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಲೋಕಾರ್ಪಣೆ ಮಾಡಲಾಗಿದೆ.ಜಿಲ್ಲೆಯ ಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಅವರು ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ತರಬೇತಿ ನೀಡುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರಿಗೆ ಅವಕಾಶ ಒದಗಿಸಬೇಕು ಎಂದು ಹೇಳಿದರು.

ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿ.ಪಂ ಸಿಇಒ ಗೋವಿಂದರೆಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next