ಹೊಸದಿಲ್ಲಿ: ಸೇನೆಗೆ ಮುಂದಾಗುವ ಯಾರೇ ಒಬ್ಬ ಯುವಕ ಅಗ್ನಿವೀರ ಯೋಜನೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಹೇಳಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಬಗೆಗಿನ ಚರ್ಚೆಯ ವೇಳೆ ಅವರು ಈ ಅಂಶ ಪ್ರಸ್ತಾವಿಸಿದ್ದಾರೆ. ಆದರೆ ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ಅದಕ್ಕೆಆಕ್ಷೇಪ ಮಾಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅಖೀಲೇಶ್, “ಅಗ್ನಿವೀರ ಯೋಜನೆ ಆರಂಭವಾದಾಗ ಅವರ ಸೇವೆ ಮುಗಿದ ಬಳಿಕ ತಮ್ಮಲ್ಲಿ ಕೆಲಸ ನೀಡುವಂತೆ ಉದ್ಯಮಿಗಳು ಟ್ವೀಟ್ ಮಾಡಬೇಕೆಂದು ಬಿಜೆಪಿ ಕೇಳಿಕೊಂಡಿತ್ತು. ಅಗ್ನಿವೀರ ಉತ್ತಮವಾದ ಯೋಜನೆಯಲ್ಲ ಎಂದು ಸರಕಾರಕ್ಕೆ ತಿಳಿದಿತ್ತು. ಹಾಗಾಗಿಯೇ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಗ್ನಿವೀರರಿಗೆ ಉದ್ಯೋಗ ಮೀಸಲು ನೀಡುವಂತೆ ಕೇಂದ್ರ ಕೇಳಿದೆ ಎಂದರು.
ಇದನ್ನು ನಿರಾಕರಿಸಿದ ಅನುರಾಗ್, ದೇಶದಲ್ಲೇ ಹೆಚ್ಚು ಪರಮವೀರ ಚಕ್ರ ಪಡೆದಿರುವ ಹಿಮಾಚಲ ಪ್ರದೇಶದವನು ನಾನು. ಬಹುಕಾಲದಿಂದ ಬಾಕಿಯಿದ್ದ ಒನ್ ರ್‍ಯಾಂಕ್, ಒನ್ ಪೆನ್ಶನ್ ಯೋಜನೆ ಜಾರಿಗೊಳಿಸಿದ ಕೀರ್ತಿ ಮೋದಿ ಸರಕಾರದ್ದು. ಅಗ್ನಿವೀರರಿಗೆ ಅವರ ಸೇವೆ ಮುಕ್ತಾಯಗೊಂಡ ಬಳಿಕ ಶೇ.100ರಷ್ಟು ಉದ್ಯೋಗ ಖಾತ್ರಿಯಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಖೀಲೇಶ್, ಹಾಗಾದರೆ ಸರಕಾರ ಏಕೆ ಮೀಸಲು ನೀಡಬೇಕು?, ನಾನು ಮಿಲಿಟರಿ ಶಾಲೆಗೆ ಹೋದವನು. ನಾನೂ ಪರಮವೀರ ಚಕ್ರ ಪಡೆದವರ ಎಣಿಸಬಹುದು ಎಂದಿದ್ದಾರೆ. ಕೊನೆಗೆ “ನೀವು ಮಿಲಿಟರಿ ಶಾಲೆಗೆ ಹೋಗಿದ್ದೀರಿ. ನಾನು ಪ್ರದೇಶಿಕ ಸೇನಾ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಬುದ್ಧಿ ಹೇಳಬೇಡಿ’ ಎಂದು ಅನುರಾಗ್ ಅಖೀಲೇಶ್‌ಗೆ ತಿರುಗೇಟು ನೀಡಿದರು.
ಸೋಮವಾರದ ಕಲಾಪದಲ್ಲೂ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಕ್ಷಣ ಸಚಿವ ರಾಜನಾಥ್ ಸಿಂಗ್ ನಡುವೆ ಅಗ್ನಿವೀರ ವಿಚಾರವಾಗಿ ವಾಗ್ವಾದ ನಡೆದಿತ್ತು.