ನವದೆಹಲಿ: ಭಾರತೀಯ ಯುವಕರು ಸೇನೆಗೆ ಸೇರಿ ಅಲ್ಪಾವಧಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಮಹತ್ವದ ಅಗ್ನಿಪಥ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ (ಜೂನ್ 14) ಅನುಮೋದನೆ ನೀಡಿರುವುದಾಗಿ ವರದಿ ತಿಳಿಸಿದೆ.
ಏನಿದು ಅಗ್ನಿಪಥ ಯೋಜನೆ?
ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುವ ಅಗ್ನಿಪಥ ನೇಮಕಾತಿ ಯೋಜನೆಯಡಿ 17 ವರ್ಷದಿಂದ 21 ವರ್ಷದವರೆಗಿನ ಯುವಕರಿಗೆ ಆದ್ಯತೆ ನೀಡಲಾಗುವುದು. ಅಗ್ನಿಪಥ್ ಯೋಜನೆಯಲ್ಲಿ ಮೂರು ಸೇನೆಯಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದ್ದು, ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಿಂಟರ್ ತೆಗೆದುಕೊಳ್ಳುವ ಯೋಚನೆಯಲ್ಲಿದ್ದೀರಾ? ಇಲ್ಲಿದೆ ಮಿತವ್ಯಯದ ಎಚ್‍ಪಿ ಪ್ರಿಂಟರ್
“ಅಗ್ನಿಪಥ್ ನೇಮಕಾತಿ ಯೋಜನೆಯು ಬದಲಾವಣೆಯ ಆರಂಭದ ಹಂತವಾಗಿದೆ. ಕಳೆದ ಎರಡು ವರ್ಷಗಳ ಕಾಲ ಸುದೀರ್ಘ ಚರ್ಚೆಯ ನಂತರ ಸುಧಾರಣೆಯ ನೇಮಕಾತಿ ನೀತಿಗೆ ಕೇಂದ್ರದ ಭದ್ರತಾ ಕ್ಯಾಬಿನೆಟ್ ಸಮಿತಿ ಅನುಮೋದನೆ ನೀಡಿದೆ. ಈ ಯೋಜನೆಯಿಂದಾಗಿ ಭಾರೀ ಬದಲಾವಣೆಯನ್ನು ತರುವ ಜೊತೆಗೆ ದೇಶದ ಯುವಕರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಲಿದೆ. ಅಷ್ಟೇ ಅಲ್ಲ ಅಗ್ನಿಪಥ್ ಯೋಜನೆಯು ದೇಶದ ಭದ್ರತಾ ವ್ಯವಸ್ಥೆಯನ್ನು ಸದೃಢಗೊಳಿಸುವುದರೊಂದಿಗೆ ಭಾರತದ ಸೇನೆಯಲ್ಲಿ ಯುವಪಡೆಗೆ ಅದ್ಯತೆ ನೀಡಿದಂತಾಗುತ್ತದೆ ಎಂದು” ಸಿಂಗ್ ತಿಳಿಸಿದ್ದಾರೆ.
ಎಲ್ಲರೂ ಸಶಸ್ತ್ರ ಪಡೆಗಳನ್ನು ಗೌರವದಿಂದ ನೋಡುತ್ತಾರೆ. ಅದೇ ರೀತಿ ಯುವಕರು ಸೇನಾ ಸಮವಸ್ತ್ರ ಧರಿಸಲು ಬಯಸುತ್ತಾರೆ. ಸೇನೆಗೆ ಸೇರ್ಪಡೆಗೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಉನ್ನತ ಕೌಶಲ್ಯದ ಪಡೆ ಲಭ್ಯವಾಗುತ್ತದೆ.
ಅಗ್ನಿಪಥ್ ಯೋಜನೆಯಲ್ಲಿ ನೇಮಕವಾಗುವ “ಅಗ್ನಿವೀರ”ರಿಗೆ ಉತ್ತಮ ಸಂಬಳ ನೀಡಲಾಗುತ್ತದೆ. ಇದರೊಂದಿಗೆ ಯೋಜನೆಯಲ್ಲಿ ಸೇವಾವಧಿ ಮುಗಿದ ನಂತರವೂ ಉತ್ತಮ ಪ್ಯಾಕೇಜ್ ನೀಡಲಾಗುವುದು ಎಂದು ರಾಜನಾಥ್ ಸಿಂಗ್ ವಿವರಿಸಿದ್ದಾರೆ.