Advertisement

ಪಕ್ಷ ಸಂಘಟನೆಗೆ ಚುರುಕು; 2024ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ

12:27 AM Aug 22, 2022 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷಾಂತ್ಯದಲ್ಲಿ ಗುಜರಾತ್‌ ಮತ್ತಿತರ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾ ವಣೆ ಮತ್ತು 2024ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ, ಪಕ್ಷ ಸಂಘಟನೆಯನ್ನು ಆಮೂಲಾಗ್ರವಾಗಿ ಪುನಾ ರಚಿಸಲು ಹೊರಟಿದೆ.

Advertisement

2019ರ ಲೋಕಸಭೆ ಚುನಾವಣೆ ಸನ್ನಿವೇಶಕ್ಕೆ ಹೋಲಿಸಿದರೆ, ಈಗ ಎನ್‌ಡಿಎಯ ಅಂಗಪಕ್ಷಗಳ ನಡೆ ಬೇರೆಯಾಗಿದೆ. ಆಗ ಜತೆಯಲ್ಲಿದ್ದ ಶಿವಸೇನೆ ಮತ್ತು ಜೆಡಿಯು ಈಗಾಗಲೇ ಎನ್‌ಡಿಎ ತೊರೆದಿವೆ. ಹೀಗಾಗಿ ಬಿಜೆಪಿ ಅನಿವಾರ್ಯವಾಗಿ ಅನ್ಯ ಮತ ಲೆಕ್ಕಾಚಾರಗಳತ್ತ ನೋಡುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಈಗಾಗಲೇ ಸಂಘಟನೆಯಲ್ಲಿ ಒಂದು ಹಂತದ ಸರ್ಜರಿ ಮುಗಿಸಿರುವ ಬಿಜೆಪಿ ವರಿಷ್ಠರು, ಎರ ಡನೇ ಹಂತದಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳ ಮೇಲೆ ಗಮನ ಹರಿಸಿ ದ್ದಾರೆ. ಗೆಲ್ಲದೆ ಇರುವ ಕ್ಷೇತ್ರಗಳ ಮೇಲೆ ಗುರಿ ಇರಿಸಿಕೊಂಡು, ಪಕ್ಷದ ಬಲ ಇರುವ ಕಡೆಗಳಲ್ಲಿ ಇನ್ನಷ್ಟು ಶಕ್ತಿ ತುಂಬಿಕೊಳ್ಳುವತ್ತ ಗಮನ ಕೇಂದ್ರೀ ಕರಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಗುಜರಾತ್‌ ಗುರಿ
ಈ ವರ್ಷಾಂತ್ಯದಲ್ಲಿ ಗುಜರಾತ್‌ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, ಅಲ್ಲಿ ಕಾಂಗ್ರೆಸ್‌ ಜತೆಗೆ ಆಪ್‌ ಕೂಡ ಬಿಜೆಪಿಗೆ ಸಡ್ಡು ಹೊಡೆಯುತ್ತಿದೆ. ಹೀಗಾಗಿ ಬಿಜೆಪಿ ತನ್ನ ಕಾರ್ಯತಂತ್ರ ಬದಲಿಸಿಕೊಳ್ಳಬೇಕಾಗಿದೆ. ಈ ಮಧ್ಯೆ ಶನಿವಾರ ರಾತ್ರಿ ಗುಜರಾತ್‌ ಸರಕಾರದ ಇಬ್ಬರು ಪ್ರಮುಖ ಸಚಿವರ ಖಾತೆಗಳನ್ನು ಕಿತ್ತುಕೊಳ್ಳಲಾಗಿದೆ. ಇವರಿಬ್ಬರ ವಿರುದ್ಧ ಅಸಮರ್ಥರು ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಕೂಡ ಚುನಾವಣೆಯ ಸಿದ್ಧತೆಯ ಒಂದು ಭಾಗ ಎಂದು ವಿಶ್ಲೇಷಿಸಲಾಗಿದೆ.

ಬಿಹಾರ, ಮಹಾರಾಷ್ಟ್ರದ ಮೇಲೆ ಕಣ್ಣು
2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಜತೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಹಾರದಲ್ಲಿ ಜೆಡಿಯು ಇದ್ದವು. ಹೀಗಾಗಿ ಜಾತಿ ಸಮೀಕರಣ ಸರಿಹೋಗಿ, ಹೆಚ್ಚು ಮಂದಿ ಮತದಾರರು ಎನ್‌ಡಿಎ ಕೈಹಿಡಿದಿದ್ದರು. ಈಗ ಬಿಹಾರದಲ್ಲಿ ಹಿಂದುಳಿದ ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು, ಹೊಸ ಪಕ್ಷಾಧ್ಯಕ್ಷರ ನೇಮಕ ಮತ್ತು ಪಕ್ಷ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ. ವಿಧಾನಸಭೆಯಲ್ಲೂ ವಿಪಕ್ಷ ನಾಯಕನನ್ನು ಬದಲಾವಣೆ ಮಾಡಲಿದೆ ಎಂದು ಮೂಲಗಳು ಹೇಳಿವೆ.

Advertisement

ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಿಂಧೆ ಬಣ ಮತ್ತು ಬಿಜೆಪಿ ಜತೆಗೂಡಿ ಸರಕಾರ ರಚಿಸಿವೆ. ಆದರೂ ಲೋಕಸಭೆ ಚುನಾವಣೆ ವೇಳೆಗೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಭಾರೀ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಅವರನ್ನು ಕೈಬಿಟ್ಟು, ಒಬಿಸಿ ಸಮುದಾಯದ ಚಂದ್ರಶೇಖರ ಬಾವಂಕುಲೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕರ್ನಾಟಕದಲ್ಲಿ ಏನು?
ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರಾಜ್ಯ ಬಿಜೆಪಿಯಲ್ಲಿಯೂ ಕೆಲವು ಸಂಘಟನಾತ್ಮಕ ಬದಲಾವಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿಯನ್ನು ಬದಲಾಯಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿಗಳ ಉಸ್ತುವಾರಿ ವಿಭಾಗಗಳನ್ನು ಬದಲಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಸಕ್ರಿಯಗೊಳಿಸಲು ಹಾಲಿ ಇರುವ ಮೂವರು ಪ್ರಧಾನ ಕಾರ್ಯದರ್ಶಿಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಉತ್ತರ ಪ್ರದೇಶದಲ್ಲೂ ಬದಲಾವಣೆ
ಯೋಗಿ ಆದಿತ್ಯನಾಥ್‌
ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲೂ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಂಭವವಿದೆ. 2017ರಲ್ಲಿ ಮೌರ್ಯ ಅವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು, ಆಗ ಪಕ್ಷ ಗೆದ್ದು ಅಧಿಕಾರಕ್ಕೇರಿತ್ತು. 2024ರ ಚುನಾವಣೆಗೂ ಅವರನ್ನೇ ಸಾರಥಿಯನ್ನಾಗಿಸುವ ಸಾಧ್ಯತೆಗಳಿವೆ.

ಕೇಂದ್ರ ಮಂಡಳಿಗಳಲ್ಲೂ ಬದಲಾವಣೆ
ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣ ಸಮಿತಿಯಲ್ಲೂ ಬದಲಾವಣೆ ಮಾಡಿರುವ ಬಿಜೆಪಿಯು ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಇದೇ ಮೊದಲ ಬಾರಿಗೆ ಮೇಲ್ವರ್ಗದವರಿಗಿಂತ ಕೆಳ ವರ್ಗದ ಸಮುದಾಯಗಳ ನಾಯಕರಿಗೆ ಹೆಚ್ಚಿನ ಸ್ಥಾನ ಸಿಕ್ಕಿದೆ. ಇದು ಕೂಡ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ದೃಷ್ಟಿಯಿಂದ ಜಾತಿ ಸಮೀಕರಣದ ಭಾಗ ಎಂದು ವಿಶ್ಲೇಷಿಸಲಾಗಿದೆ.

ಉತ್ತರ ಪ್ರದೇಶದವರಾದ ಸುನಿಲ್‌ ಬನ್ಸಾಲ್‌ ಅವರಿಗೆ ತೆಲಂಗಾಣ, ಪ. ಬಂಗಾಲ, ಒಡಿಶಾ ಉಸ್ತುವಾರಿ ನೀಡಲಾಗಿದೆ. ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ಇವರಿಗೆ ಇದುವರೆಗೆ ಗೆಲ್ಲಲಾಗದ ರಾಜ್ಯಗಳ ಹೊಣೆ ವಹಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next