“ಅಘೋರ’ ಎಂಬ ಪದವನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಈ “ಅಘೋರ’ ಎಂಬುದಕ್ಕೆ ಹತ್ತಾರು ವ್ಯಾಖ್ಯಾನಗಳಿವೆ. ವೇದ, ಪುರಾಣಗಳಿಂದ ಹಿಡಿದು ಇಂದಿನ ಕಾದಂಬರಿಗಳವರೆಗೆ ಇದರ ಬಗ್ಗೆ ನೂರಾರು ಕಥೆ-ಕಲ್ಪನೆಗಳಿವೆ. ಈಗ ಇಲ್ಲೊಂದು ಹೊಸಬರ ತಂಡ ಈ ಮಾಂತ್ರಿಕ ವಿದ್ಯೆಯನ್ನು ತಮ್ಮದೇ ಅರ್ಥ, ವ್ಯಾಖ್ಯಾನದೊಂದಿಗೆ “ಅಘೋರ’ ಎಂಬ ಹೆಸರಿನಲ್ಲೇ ಸಿನಿಮಾ ಮೂಲಕ ತೆರೆಮೇಲೆ ಹೇಳಲು ಹೊರಟಿದೆ.
ಅಂದಹಾಗೆ, ತಮ್ಮ ಸಿನಿಮಾಕ್ಕೆ ಚಿತ್ರತಂಡ ಇಂಥದ್ದೊಂದು ಟೈಟಲ್ ಇಟ್ಟಿರುವುದಕ್ಕೂ ಕಾರಣವಿದೆಯಂತೆ, “ಅನೇಕರಿಗೆ ಗೊತ್ತಿರುವಂತೆ, ಈ “ಅಘೋರ’ ಎಂಬುದಕ್ಕೆ ಒಂದು ಘಟನೆ ಅಥವಾ ಒಂದು ವಿದ್ಯೆ ಎಂಬ ಅರ್ಥವಿದೆ. ಈ ವಿದ್ಯೆ ತುಂಬ ಕಠೊರವಾಗಿರುತ್ತದೆ. ಆದರೆ, ಈ ವಿದ್ಯೆಯನ್ನು ಮನುಷ್ಯ ಒಮ್ಮೆ ಕಲಿತರೆ, ಸೃಷ್ಟಿಯ ನಿಯಮ, ತನ್ನ ಅಸ್ವಿತ್ವ, ಜಗತ್ತಿನ ವಾಸ್ತವ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾನೆ. ಈ ಸಿನಿಮಾದಲ್ಲೂ ಅದನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಸಿನಿಮಾಕ್ಕೂ “ಅಘೋರ’ ಎಂದು ಟೈಟಲ್ ಇಟ್ಟಿದ್ದೇವೆ’ ಎನ್ನುತ್ತದೆ ಚಿತ್ರತಂಡ.
ಇನ್ನು “ಅಘೋರ’ ಚಿತ್ರದಲ್ಲಿ ಅವಿನಾಶ್, ಪುನೀತ್, ಅಶೋಕ್, ದ್ರವ್ಯಾ ಶೆಟ್ಟಿ, ರಚನಾ ದಶರಥ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಮೋಕ್ಷ ಸಿನಿಮಾಸ್’ ಬ್ಯಾನರ್‌ನಲ್ಲಿ ಪುನೀತ್ ಗೌಡ ನಿರ್ಮಿಸಿರುವ “ಅಘೋರ’ ಚಿತ್ರಕ್ಕೆ ಎನ್. ಎಸ್ ಪ್ರಮೋದ್ ರಾಜ್ ನಿರ್ದೇಶನವಿದೆ.
ಇದನ್ನೂ ಓದಿ:ಯುದ್ಧದ ನಡುವೆಯೂ ರಷ್ಯಾಗೆ ಸಿಹಿ ಸುದ್ದಿ ನೀಡಿದ ಡೇನಿಯಲ್ ಮೆಡ್ವೆಡೇವ್
“ಕೆಲವರನ್ನ ನಾವು ಮೊದಲ ಬಾರಿಗೆ ನೋಡಿದ್ರೂ ಅವರು ನಮಗೆ ಮೊದಲೇ ತುಂಬ ಪರಿಚಿತರು ಅನಿಸುತ್ತದೆ. ಅವರೊಂದಿಗೆ ಆತ್ಮೀಯತೆ ಭಾವ ಮೂಡುತ್ತದೆ. ಅವರಿಗೆ ಸ್ಪಂದಿಸಬೇಕು ಅನಿಸುತ್ತದೆ. ಅದೇ ಇನ್ನು ಕೆಲವರನ್ನ ನೋಡಿದ್ರೆ, ಅವರು ನಮಗೇನೂ ಮಾಡದಿದ್ದರೂ, ನಮಗೇ ಗೊತ್ತಿಲ್ಲದಂತೆ ಅವರ ಮೇಲೆ ನಮಗೆ ಕೋಪ ಬರುತ್ತದೆ. ಅವರು ನಮಗೆ ಎಷ್ಟೇ ಹತ್ತಿರವಿದ್ರೂ, ನಾವೇ ದೂರ ಹೋಗ್ಬೇಕು ಅನಿಸುತ್ತದೆ. ನಮಗೆ ಸಹಾಯ ಮಾಡುವ ಮನೋಭಾವವಿದ್ದರೂ, ಅಂಥವರನ್ನು ನೋಡಿದ್ರೆ ನಾವು ಸಹಾಯ ಮಾಡಲ್ಲ. ಎಲ್ಲರಿಗೂ ಇಂಥದ್ದೊಂದು ಅನುಭವವಾಗಿರುತ್ತದೆ. ಯಾಕೆ ಹೇಗೆ? ಅಂದ್ರೆ, ಅದೆಲ್ಲದಕ್ಕೂ ಕಾರಣ ಕರ್ಮಫಲ!. ಈ ಪೂರ್ವ ಜನ್ಮದ ನಂಟು ಪ್ರೀತಿ, ಮೋಸ ಎಲ್ಲವನ್ನೂ ಮಾಡುತ್ತದೆ’ ಎನ್ನುವುದು “ಅಘೋರ’ ಚಿತ್ರತಂಡದ ಮಾತು.
ಋಣ ಮತ್ತು ಕರ್ಮಫಲದ ಆಧಾರದ ಮೇಲೆ “ಅಘೋರ’ ಚಿತ್ರದ ಕಥೆ ಮತ್ತು ಪಾತ್ರಗಳು ಸಾಗುತ್ತದೆ ಎಂದು ಕಥಾಹಂದರದ ವಿವರಣೆ ಕೊಡುತ್ತದೆ ಚಿತ್ರತಂಡ. ಇದೇ ಫೆ. 26ಕ್ಕೆ “ಅಘೋರ’ ಚಿತ್ರದ ಮೊದಲ ಪಬ್ ಸಾಂಗ್ ಬಿಡುಗಡೆ ಯಾಗಲಿದ್ದು, ಮಾರ್ಚ್ 4ಕ್ಕೆ ಚಿತ್ರ ತೆರೆಗೆ ಬರಲಿದೆ.