Advertisement

ಏಜೆನ್ಸಿಗಳ ಪ್ರಮಾಣಪತ್ರ: ಪ್ರತಿಕ್ರಿಯೆ ಕೇಳಿದ ಹೈಕೋರ್ಟ್‌

03:09 PM Dec 13, 2018 | Team Udayavani |

ಬೆಂಗಳೂರು: ಜಾಹೀರಾತು ಫ‌ಲಕಗಳಲ್ಲಿ ಶೇ.100ರಷ್ಟು ಕಾಟನ್‌ ಬಳಸಲಾಗುತ್ತಿದೆ ಎಂದು ವಿವಿಧ ಜಾಹೀರಾತು ಕಂಪನಿಗಳು ಸಲ್ಲಿಸಿರುವ ಪ್ರಮಾಣಪತ್ರಗಳ ಬಗ್ಗೆ ಡಿ.17ರೊಳಗೆ ಸಮಗ್ರ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್‌ ಬುಧವಾರ ಬಿಬಿಎಂಪಿಗೆ ನಿರ್ದೇಶನ ನೀಡಿತು. ನಗರದಲ್ಲಿನ ಅನಧಿಕೃತ ಹಾಗೂ ಕಾನೂನುಬಾಹಿರ ಫ್ಲೆಕ್ಸ್‌, ಹೋರ್ಡಿಂಗ್ಸ್‌ ಹಾಗೂ ಬ್ಯಾನರ್‌ಗಳನ್ನು ತೆರವುಗೊಸಲು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌.ಸುಜಾತಾ ಅವರಿದ್ದ ನ್ಯಾಯಪೀಠ ನಡೆಸಿತು.

Advertisement

ವಿಚಾರಣೆ ವೇಳೆ, ಜಾಹೀರಾತು ಫ‌ಲಕಗಳಲ್ಲಿ ಶೇ.100ರಷ್ಟು ಕಾಟನ್‌ ಬಳಸಲಾಗುತ್ತಿದೆ ಎಂದು ಸುಮಾರು 12 ಜಾಹೀರಾತು ಸಂಸ್ಥೆಗಳು ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಿರುವುದನ್ನು ಖಾತರಿಪಡಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆಗೆ ಈ ಪ್ರಮಾಣಪತ್ರಗಳ ಬಗ್ಗೆ ಸಮಗ್ರವಾದ ಪ್ರತಿಕ್ರಿಯೆ ಹಾಗೂ ಉತ್ತರ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ನಿರ್ದೇಶನ ನೀಡಿತು. ಅಲ್ಲದೇ ಜಾಹೀರಾತು ನೀತಿ-ಬೈಲಾ ಬಗ್ಗೆ ಕೇಳಿದಾಗ, ಕೆಲವೊಂದು ಉತ್ತಮ ಸಲಹೆಗಳು ಬಂದಿದ್ದು, ಅವುಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಿಬಿಎಂಪಿ ಪರ ವಕೀಲರು ತಿಳಿಸಿದರು. ಆಗ, ಡಿ.17ರೊಳಗೆ ಜಾಹೀರಾತು ನೀತಿ-ಬೈಲಾ ಅಂತಿಮಗೊಳಿಸಿ ಎಂದು ನ್ಯಾಯಪೀಠ ತಾಕೀತು ಮಾಡಿತು.

113 ರಿಟ್‌ ಅರ್ಜಿಗಳು: ಜಾಹೀರಾತು ಫ‌ಲಕಗಳಿಗೆ ತೆರಿಗೆ ವಿಧಿಸಿದ ಹಾಗೂ ದಂಡ ಹಾಕಿದ ಪ್ರಕರಣಗಳು ಮತ್ತು ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸದಂತೆ ತಡೆಯಾಜ್ಞೆ ತಂದಿರುವುದು ಸೇರಿ ಸುಮಾರು 113 ರಿಟ್‌ ಅರ್ಜಿಗಳು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿವೆ. ಅಲ್ಲದೇ ವಿವಿಧ ಅಧೀನ ನ್ಯಾಯಾಲಯಗಳಲ್ಲಿ 87 ಸಿವಿಲ್‌ ದಾವೆಗಳು ವಿಚಾರಣಾ ಹಂತದಲ್ಲಿವೆ. 

ಅಧೀನ ನ್ಯಾಯಾಲಯಗಳಲ್ಲಿ ಇರುವ ಸಿವಿಲ್‌ ದಾವೆಗಳನ್ನು ಒಂದೇ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಏಕ ಸದಸ್ಯಪೀಠ ಆದೇಶ ನೀಡಿದೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. 

ಪ್ರಕರಣಗಳ ಬಾಕಿಗೆ ಅಸಮಾಧಾನ: ಕರ್ನಾಟಕ ಮುಕ್ತ ಪ್ರದೇಶ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ ಅಡಿ ಒಟ್ಟು 480 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆ ಪೈಕಿ 232 ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದು, 258 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತ ಪೊಲೀಸ್‌ ಇಲಾಖೆಯ
ನಿಧಾನ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌, ಒಂದಷ್ಟು ದಿನ ಹೈಕೋರ್ಟ್‌ ಇದರ ಬಗ್ಗೆ ಕೇಳಿಲ್ಲ ಎಂಬ ಕಾರಣಕ್ಕೆ ನೀವು (ಸರ್ಕಾರ) ಸುಮ್ಮನೆ ಕುಳಿತಂತಿದೆ. ಇದು ಸರಿಯಲ್ಲ. ಬಾಕಿ ಪ್ರಕರಣಗಳ ತನಿಖೆ ತ್ವರಿತಗೊಳಿಸಿ. ಇಲ್ಲದಿದ್ದರೆ ಪೊಲೀಸ್‌ ಆಯುಕ್ತ ರನ್ನು ಕೋರ್ಟ್‌ಗೆ ಕರೆಸಿ ಹೇಳಬೇಕಾಗುತ್ತದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರಿಗೆ ನ್ಯಾಯಪೀಠ ಹೇಳಿತು.

Advertisement

ಅಟೋ, ಬಸ್‌ಗಳಲ್ಲಿ ಫ್ಲೆಕ್ಸ್‌ ಬಳಸುತ್ತಿಲ್ಲ: ಎಎಜಿ
ಸರ್ಕಾರಿ ಬಸ್‌ಗಳು ಹಾಗೂ ಆಟೋಗಳ ಮೇಲೆ ಜಾಹೀರಾತು ಪ್ರಕಟಿಸಲು ಫ್ಲೆಕ್ಸ್‌ ಬಳಸಲಾಗುತ್ತಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ಸಲ್ಲಿಸಿದ ಪ್ರಮಾಣಪತ್ರವನ್ನು ನ್ಯಾಯಪೀಠ ದಾಖಲಿಸಿಕೊಂಡಿತು.ಈ ಮಧ್ಯೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಈಕೆಆರ್‌ಟಿಸಿ, ಎನ್‌ಡಬ್ಲೂಕೆಆರ್‌ಟಿಸಿ ನಿಲ್ದಾಣಗಳು ಮತ್ತು ಇವುಗಳಿಗೆ ಸೇರಿದ ಇತರೆ ಕಚೇರಿ ಕಟ್ಟಡಗಳ ಆವರಣಗಳಲ್ಲಿ ನಾವು ಜಾಹೀರಾತು ಅಳವಡಿಸಿ, ನಿರ್ವಹಿಸುತ್ತಿದ್ದೇವೆ. ಶೇ.80ರಷ್ಟು ಪರವಾಗಗಿ ಗಳನ್ನು ನಾವೇ ಹೊಂದಿದ್ದೇವೆ. ಫ್ಲೆಕ್ಸ್‌ ಬಿಟ್ಟು ಬೇರೆ ಏನಾದರೂ ಬಳಸಿ ಎಂದು ಸಾರಿಗೆ ಇಲಾಖೆ ಹೇಳುತ್ತದೆ. ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ದೂರಿ ಜಾಹೀರಾತು ಕಂಪನಿಯೊಂದು ಮಧ್ಯಂತರ ಮನವಿ ಸಲ್ಲಿಸಿತು. ಈ ಬಗ್ಗೆ ವಿವರಣೆ ನೀಡುವಂತೆ ಕೆಎಸ್‌ಆರ್‌ಟಿಸಿ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next