Advertisement
ನಿವೃತ್ತಿ ಹೊಂದಿ ಮನೆಯಲ್ಲೇ ಕುಳಿತಿರುವ ಹಿರಿಯ ನಾಗರಿಕರ ಪಾಡು ಸ್ವಲ್ಪ ಕಷ್ಟದ್ದೇ. ಅವರವರ ಆಟೋ ಮತ್ತು ಔಷಧದ ಖರ್ಚಿನಷ್ಟಾದರೂ ಅವರು ಆದಾಯ ತೋರಿಸದಿದ್ದರೆ ಮನೆಯೊಳಗೇ ಇರಿಸು-ಮುರಿಸಾಗುವ ಪರಿಸ್ಥಿತಿ. ಜೀವನವಿಡೀ “ಇಪಿಎಸ್’ ಎಂಬ ಮಹಾ ಟೊಪ್ಪಿಯ ಸರಕಾರಿ ಸ್ಕೀಮಿಗೆ ದುಡ್ಡು ಕಟ್ಟಿದವರಿಗಂತೂ ಇವತ್ತು ತಮ್ಮ ಮೊಮ್ಮಕ್ಕಳಿಗೆ ಕಡ್ಲೆಕಾಯಿ ಕೊಡಿಸುವಷ್ಟು ದುಡ್ಡು ಕೂಡಾ ಸಿಗುತ್ತಿಲ್ಲ. ಸೂಟು ಬೂಟು ಧರಿಸಿದ ಟಿವಿ ನಿವಾಸಿ ಶೇರು ಜೋಯಿಷರು ದೈನಂದಿನ ಜೂಜಾಟಕ್ಕೆ ನಿಮ್ಮನ್ನು ಪ್ರೋತ್ಸಾಹಿಸುವ ಹೂಡಿಕೆಗಳಿಗೆ ಯಾವುದೇ ಭದ್ರತೆ ಇಲ್ಲ. ಭದ್ರತೆ ಇರುವ ಬ್ಯಾಂಕ್ ಎಫ್.ಡಿಗಳಲ್ಲಿ ಡೀಸೆಂಟಾದ ಪ್ರತಿಫಲ ಇಲ್ಲ. ಭದ್ರತೆಯೂ ಇರುವ, ಹೆಚ್ಚುವರಿ ಪ್ರತಿಫಲವೂ ಇರುವ ಯೋಜನೆ ಯಾವುದಾದರೂ ಇದೆಯೇ ಎನ್ನುವುದು ಈವಾಗ ಎಲ್ಲರ ಪ್ರಶ್ನೆ.
Related Articles
Advertisement
ಅವಧಿ: ಇದೊಂದು 10 ವರ್ಷಗಳ ಯೋಜನೆ. ಹೂಡಿಕೆಯ ದಿನಾಂಕದಿಂದ ಹತ್ತು ವರ್ಷಗಳ ಕಾಲ ಈ ಹೂಡಿಕೆ ನಡೆಯುತ್ತದೆ. ಬಳಿಕ ಹೂಡಿಕಾ ಮೊತ್ತವನ್ನು ವಾಪಾಸು ನೀಡಲಾಗುತ್ತದೆ.
ಪಿಂಚಣಿ ಪ್ರತಿಫಲ: ಈ ಯೋಜನೆಯಡಿಯಲ್ಲಿ ಪೆನ್ಸ್ ನ್ ಪಡೆಯಲು 4 ಆಯ್ಕೆಗಳಿವೆ. ವಾರ್ಷಿಕ, ಅರೆವಾರ್ಷಿಕ, ತ್ತೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ಪೆನ್ಸ್ ನ್ ಪಡೆಯಬಹುದು. ಸರಳ ಬಡ್ಡಿ ಲೆಕ್ಕದಲ್ಲಿ ನೋಡಿದರೆ ಪ್ರತಿಫಲವು ಈ ನಾಲ್ಕೂ ಆಯ್ಕೆಗಳಲ್ಲಿ ಬೇರೆಬೇರೆಯಾಗಿರುತ್ತದೆ. ವಾರ್ಷಿಕ ಕಂತುಗಳಲ್ಲಿ ಪೆನÒನ್ ಪಡೆಯುವ ಆಯ್ಕೆ ಮಾಡಿದರೆ 8.3% ಪ್ರತಿಫಲ ದೊರೆಯುತ್ತದೆ. ಅರೆವಾರ್ಷಿಕ ಕಂತುಗಳಲ್ಲಿ ಪಿಂಚಣಿ ಪಡೆದರೆ 8.13%, ತ್ತೈಮಾಸಿಕ ಕಂತುಗಳಲ್ಲಿ ಪೆನ್ಸ್ ನ್ ಪಡೆದರೆ 8.05% ಹಾಗೂ ಮಾಸಿಕ ಕಂತುಗಳಲ್ಲಿ ಪಿಂಚಣಿ ಪಡೆದರೆ 8% ಪ್ರತಿಫಲ ಸಿಗುತ್ತದೆ. ವಾರ್ಷಿಕ ಕಂತುಗಳಲ್ಲಿ 8.3% ಪ್ರತಿಫಲ ನೀಡುವ ಈ ಆಯ್ಕೆ ಉತ್ತಮವೆಂದು ತೋರುತ್ತದೆ.
ಎಲ್ಲಿ ಸಿಗುತ್ತದೆ?: ಇದೊಂದು ಸರಕಾರಿ ಯೋಜನೆ ಹಾಗೂ ಇದು ಕೇವಲ ಎಲ್‌ಐಸಿಯ ಮೂಲಕ ಮಾತ್ರವೇ ಸಿಗುತ್ತದೆ. ಇದನ್ನು ಎಲ್‌ಐಸಿಯು ತನ್ನ ಒಂದು ಪಾಲಿಸಿಯ ರೂಪದಲ್ಲಿ (ಪ್ಲಾನ್ 842) ಮಾರಾಟ ಮಾಡುತ್ತದೆ. ಇದನ್ನು ಎಲ್‌ಐಸಿಯಿಂದ ಆನ್-ಲೈನ್ ಆಗಿಯೂ ಖರೀದಿ (www.licindia.com) ಮಾಡಬಹುದು.
ಲಾಭ: ಈ ಯೋಜನೆಯಲ್ಲಿ ಅದರ ಹತ್ತು ವರ್ಷಗಳ ಅವಧಿ ಪೂರ್ತಿ ನಿಮ್ಮ ಆಯ್ಕೆಯ ಪೂರ್ವ ನಿಗದಿತ ಸಮಯಾನುಸಾರ (ಮಾಸಿಕ, ತ್ತೈಮಾಸಿಕ, ಅರೆವಾರ್ಷಿಕ ಹಾಗೂ ವಾರ್ಷಿಕ) ಪೆನ್ಸ್ ನ್ ಸಿಗುತ್ತಾ ಹೋಗುತ್ತದೆ. ಒಂದು ವೇಳೆ ಈ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರನ ಮೃತ್ಯು ಉಂಟಾದರೆ (ಸುಸೈಡ್ ಸಹಿತ) ಪಾಲಿಸಿ ಕೊನೆಗೊಂಡು ನಾಮಿನಿಗೆ ಹೂಡಿಕಾ ಮೊತ್ತವು ಸಲ್ಲುತ್ತದೆ. ಪಾಲಿಸಿಯು ಪೆನ್ಸ್ ನ್ ರೂಪದಲ್ಲಿ ಮುಂದುವರಿಯುವುದಿಲ್ಲ. ಅದಲ್ಲದೆ, ಇದು ಜೀವ ವಿಮಾ ನಿಗಮದಿಂದ ಬಿಡುಗಡೆಯಾದರೂ ಇದೊಂದು ವಿಮಾ ಯೋಜನೆಯಲ್ಲ. ಹಾಗಾಗಿ ಇಲ್ಲಿ ಬೇರಾವುದೇ ವಿಮಾ ಮೊತ್ತ ಪಾಲಿಸಿದಾರನಿಗೆ ಸಲ್ಲತಕ್ಕದ್ದಲ್ಲ. ಇದೊಂದು ಹೇಳಿಕೇಳಿ ಪೆನ್ಸ್ನ್ ಯೋಜನೆ. ಒಂದು ವೇಳೆ ಹೂಡಿಕೆದಾರ ಯೋಜನೆಯ ಪೂರ್ತಿ ಅವಧಿಯಾದ 10 ವರ್ಷಗಳನ್ನು ಪೂರ್ತಿಗೊಳಿಸಿದರೆ ಆತನ ಕೈಗೆ ಕೊನೆಯ ಕಂತಿನ ಪೆನ್ಸ್ನ್ ಜೊತೆಗೆ ಹೂಡಿಕಾ ಮೊತ್ತ ಬರುತ್ತದೆ, ಬೇರಾವ ಹೆಚ್ಚುವರಿ ಬೋನಸ್/ಗೀನಸ್ ಇರುವುದಿಲ್ಲ.
ಹೂಡಿಕೆ: ಪೆನ್ಸ್ನ್ ಮೊತ್ತ: ಹೂಡಿಕೆ ಹಾಗೂ ಪೆನ್ಸ್ ನ್ ಮೊತ್ತಗಳು ಕಂತುಗಳ ಅವಧಿಯನ್ನು ಹೊಂದಿಕೊಂಡಿದೆ. ಕೆಳಗಿನ ಟೇಬಲ್‌ನಲ್ಲಿ ಕೆಲವು ಅಂಕಿ ಅಂಶಗಳನ್ನು ನೀಡಲಾಗಿದೆ. ಉದಾಹರಣೆಗಾಗಿ, ಒಬ್ಟಾತ ಪಾಲಿಸಿದಾರನಿಗೆ ಮಾಸಿಕ ಪೆನ್ಸ್ನ್ ರೂ 10000 ಬೇಕೆಂದಾದರೆ ಆತನು ರೂ 1500000 ಹೂಡಿಕೆ ಮಾಡಬೇಕು ಅಥವಾ ಎಲ್‌ಐಸಿಯ ಭಾಷೆಯಲ್ಲಿ ಹೇಳುವುದಾರೆ ಅಷ್ಟು ಮೊತ್ತ ಕೊಟ್ಟು ಆ ಪಾಲಿಸಿಯನ್ನು ಖರೀದಿ ಮಾಡಬೇಕು. ಅಂತೆಯೇ ಅರೆವಾರ್ಷಿಕ ರೂ 6000 ಪೆನÒನ್ ಬೇಕಾದವರು ರೂ 147601 ನೀಡಿ ಅಂತಹ ಪಾಲಿಸಿಯನ್ನು ಖರೀದಿಸಬೆಕು. ಈ ಅಂಕಿ-ಅಂಶಗಳು ಜೀವವಿಮೆಯಂತೆ ವಯಸ್ಸು ಆಧರಿಸಿ ಬದಲಾಗುವುದಿಲ್ಲ. ಅರುವತ್ತು ದಾಟಿದ ಎಲ್ಲರಿಗೂ ಇದು ಸಮಾನವಾಗಿ ಅನ್ವಯಿಸುತ್ತದೆ..
ಕನಿಷ್ಠ-ಗರಿಷ್ಟ ಮಿತಿ: ಕನಿಷ್ಠ ಪೆನ್ಸ್ನ್ ಮೊತ್ತ ರೂ 1000 ಹಾಗೂ ಖರೀದಿ ಮೊತ್ತ ರೂ 150000. ಗರಿಷ್ಟ ಪೆನ್ಸ್ ನ್ ಮಾಸಿಕ ರೂ 10000 ಹಾಗೂ ಅದರ ಖರೀದಿ ಮೊತ್ತ ರೂ 1500000 ಆಗಿರುತ್ತದೆ. ಈ ಯೋಜನೆಯಲ್ಲಿ ರೂ 15 ಲಕ್ಷಕ್ಕಿಂತ ಜಾಸ್ತಿ ಹೂಡಲು ಬರುವುದಿಲ್ಲ. ಅಲ್ಲದೆ ಇಲ್ಲಿನ ಹೂಡಿಕೆ ಟೇಬಲ್‌ನಲ್ಲಿ ನೀಡಿದ ಉದಾಹರಣಾ ಅಂಕಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಕನಿಷ್ಠ-ಗರಿಷ್ಟ ಮಿತಿಗಳೊಳಗೆ ಎಷ್ಟಾದರೂ ಹೂಡಿಕೆ ಮಾಡಿ ತತ್ಸಮಾನ(ಪ್ರೋ ರೇಟಾ) ಪೆನ್ಸ್ನ್ ಪಡೆಯಬಹುದು.
ಇಲ್ಲಿ ಹೂಡಿಕೆಯ ಅಥವಾ ಪೆನ್ಸ್ ನ್‌ನ ಗರಿಷ್ಟ ಮಿತಿಯ ಬಗ್ಗೆ ಮಾತನಾಡುವಾಗ ಈ ಮಿತಿಗಳು ಹೇಗೆ ಅನ್ವಯವಾಗುತ್ತವೆ ಎನ್ನುವುದನ್ನು ಕೂಡಾ ತಿಳಿದುಕೊಳ್ಳುವುದು ಅಗತ್ಯ. ಈ ಮಿತಿ ಒಂದು ಕೌಟುಂಬಿಕ ನೆಲೆಯಲ್ಲಿ ಅನ್ವಯವಾಗುತ್ತದೆಯೇ ಹೊರತು ಒಂದು ವೈಯಕ್ತಿಕ ನೆಲೆಯಲ್ಲಿ ಅಲ್ಲ. ಅಂದರೆ, ಒಬ್ಬರು ಮತ್ತು ಅವರ ಪತ್ನಿ/ಪತಿ ಹಾಗೂ ಅವಲಂಬಿತರು ಒಟ್ಟಾಗಿ ಈ ಗರಿಷ್ಟ ಮಿತಿಯಂತೆ ಹೂಡಿಕೆ ಮಾಡಬಹುದಾಗಿದೆ. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕವಾಗಿ ಈ ಮಿತಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಳಸುವಂತಿಲ್ಲ.
ಪೆನ್ಸ್ನ್ ಪಾವತಿ: ಪೆನ್ಸ್ನ್ ಮೊತ್ತವನ್ನು ಹೂಡಿಕೆಯ ದಿನಾಂಕದಿಂದ ಆರಂಭಗೊಂಡಂತೆ ವಾರ್ಷಿಕ, ಅರೆವಾರ್ಷಿಕ, ತ್ತೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ನೀಡಲಾಗುತ್ತದೆ. ಪೆನ್ಸ್ನ್ ಪಾವತಿಯನ್ನು ನೆಫ್ಟ್ ಬ್ಯಾಕ್ ವರ್ಗಾವಣೆ ಅಥವಾ ಆಧಾರ್ ಆಧರಿತ ಪಾವತಿ ಪದ್ಧತಿಯ ಮೂಲಕ ನಡೆಸಲಾಗುತ್ತದೆ.
ಸರೆಂಡರ್ ಮೊತ್ತ: ಒಮ್ಮೆ ಖರೀದಿ ಮಾಡಿದ ಪಾಲಿಸಿಯನ್ನು ಅವಧಿ ಮುಗಿಯುವ ತನಕ ಹಿಂಪಡೆಯುವಂತಿಲ್ಲ. ಆದರೆ ಸ್ವಂತ ಅಥವಾ ಗಂಡ/ಹೆಂಡತಿಗೆ ಯಾವುದೇ ಮಾರಣಾಂತಿಕ ಕಾಯಿಲೆ ಉಂಟಾದ ಸಂದರ್ಭದಲ್ಲಿ ಮೂಲ ಹೂಡಿಕೆಯ 98% ಮೊತ್ತವನ್ನು ವಾಪಾಸು ಪಡೆದು ಪಾಲಿಸಿಯನ್ನು ಸರೆಂಡರ್ ಮಾಡಬಹುದಾಗಿದೆ.
ಸಾಲ: ಪಾಲಿಸಿಗೆ 3 ವರ್ಷ ಸಂದ ಬಳಿಕ ಮೂಲ ಹೂಡಿಕೆಯ 75% ಸಾಲವನ್ನು ಈ ಪಾಲಿಸಿಯಿಂದ ಪಡೆಯಬಹುದಾಗಿದೆ. ಈ ಸಾಲದ ಮೇಲಿನ ಬಡ್ಡಿದರ ಆಗಿಂದಾಗ್ಗೆ ಪರಿಷ್ಕರಣೆಗೊಳ್ಳಲಿದೆ. ಸದ್ಯದ ದರ 10% ಆಗಿದೆ. ಈ ಪಾಲಿಸಿಯಲ್ಲಿ ಬಡ್ಡಿ ದರವನ್ನು ಪಾವತಿಸಬೇಕಾದ ಪೆನ್ಸ್ನ್ ಮೊತ್ತದಿಂದ ಕಳೆಯಲಾಗುತ್ತದೆ. ಆದರೆ ಸಾಲದ ಮೊತ್ತವನ್ನು ಪಾಲಿಸಿ ಮುಗಿಯುವಾಗಿನ ಅಂತಿಮ ಮೊತ್ತದಿಂದ ಕಳೆಯಲಾಗುತ್ತದೆ.
ಆದಾಯ ಕರ: ಈ ಪಾಲಿಸಿಯಲ್ಲಿ ಸಿಗುವ 8% ಪೆನ್ಸ್ನ್ ಮೊತ್ತವು ಸಂಪೂರ್ಣವಾಗಿ ಆದಾಯ ಕರಕ್ಕೆ ಒಳಪಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆಯ ಮೇಲಾಗಲಿ, ಬರುವ ಪೆನ್ಸ್ನ್ ಮೊತ್ತದ ಮೇಲಾಗಲಿ, ಯಾವುದೇ ಆದಾಯ ಕರ ವಿನಾಯಿತಿ ಇರುವುದಿಲ್ಲ.
ಫ್ರೀ-ಲುಕ್ ಅವಧಿ: ಜೀವ ವಿಮಾ ಪಾಲಿಸಿಗಳಿಗೆ ಇರುವಂತೆಯೇ ಈ ಪೆನ್ಸ್ನ್ ಪಾಲಿಸಿಗೆ ಕೂಡಾ ಫ್ರೀ-ಲುಕ್ ಅವಧಿಯನ್ನು ಎಲ್‌ಐಸಿಯು ನೀಡಿದೆ. ಅಂದರೆ ಈ ಪಾಲಿಸಿ ಕೈಸೇರಿದ 15 ದಿನಗಳ ಒಳಗೆ ಅದು ಇಷ್ಟವಾಗದಿದ್ದಲ್ಲಿ ಅದನ್ನು ಹಿಂತಿರುಗಿಸಬಹುದು. ಆನ್-ಲೈನ್ ಖರೀದಿಯಾಗಿದ್ದಲ್ಲಿ ಈ ಅವಧಿ 30 ದಿನಗಳು. ಈ ರೀತಿ ಹಿಂತಿರುಗಿಸಿದ ಪಾಲಿಸಿಯ ಮೇಲೆ ಸ್ಟ್ಯಾಂಪ್ ಡ್ನೂಟಿ ವೆಚ್ಚ ಕಳೆದು ಉಳಿದ ಮೊತ್ತವನ್ನು ಮರುಪಾವತಿ ಮಾಡಲಾಗುವುದು.
ವಿಶ್ಲೇಷಣೆ: ಸದ್ಯದ ಬ್ಯಾಂಕ್ ಬಡ್ಡಿಯ ಪರಿಸ್ಥಿತಿಯಲ್ಲಿ ಇಂತಹ ಸರಕಾರಿ ಯೋಜನೆಗಳ ಅಗತ್ಯವಿದೆ. 1 ವರ್ಷದ ಎಫ್.ಡಿ.ಯ ಮೇಲೆ ಹಿರಿಯ ನಾಗರಿಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ 7.2% ಬಡ್ಡಿ ನೀಡುತ್ತದೆ. 10 ವರ್ಷಕ್ಕಾದರೆ ಅದು ಕೇವಲ 7.35%. ಆದರೆ ಇಲ್ಲಿ ಎಲ್‌ಐಸಿಯು 10 ವರ್ಷಗಳ ಮಟ್ಟಿಗೆ 8.3% ಪ್ರತಿಫಲವನ್ನು ನೀಡುತ್ತದೆ. ಹಾಗಾಗಿ ಇದು ಒಂದು ಉತ್ತಮ ಯೋಜನೆ ಎನ್ನುವುದರಲ್ಲಿ ಸಂಶಯವಿಲ್ಲ. ಸರಕಾರಿ ಯೋಜನೆಯಾದ ಕಾರಣ ಅಲ್ಲದೆ ಎಲ್‌ಐಸಿಯೂ ಒಂದು ಅತ್ಯುತ್ತಮ ಸರಕಾರಿ ವಿತ್ತೀಯ ಸಂಸ್ಥೆಯಾದ ಕಾರಣ ಭದ್ರತೆಯ ಮಟ್ಟಿಗೆ ಯಾವುದೇ ಹೆದರಿಕೆ ಇಲ್ಲ.
ಇಲ್ಲಿಯ ಮುಖ್ಯ ಸಮಸ್ಯೆಇದರ ಹೂಡಿಕಾ ಮಿತಿ. ಇಲ್ಲಿ ರೂ15 ಲಕ್ಷ ಮೀರಿ ಹೂಡಿಕೆ ಮಾಡುವಂತಿಲ್ಲ; ಅದು ಕೂಡಾ ಒಂದು ಕುಟುಂಬದ ಲೆಕ್ಕದಲ್ಲಿ. ಹಾಗಾಗಿ ಒಂದು ಕುಟುಂಬದಲ್ಲಿನ ಹಿರಿಯನಾಗರಿಕರು ರೂ15ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಕೆಲ ವಾರಗಳ ಹಿಂದೆ ಇದೇ ಕಾಕು ಕಾಲಂನಲ್ಲಿ ಬ್ಯಾಂಕು ಮತ್ತು ಪೋಸ್ಟಾಫೀಸುಗಳಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಂ (ಎಸ್‌ಸಿಎಸ್‌ಎಸ್) ದೊರೆಯುತ್ತದೆ ಎಂದು ಬರೆದಿದ್ದೆ. ಅದರಲ್ಲಿ ಪ್ರತಿಫಲ 8.7%, ಇಲ್ಲಿ ಪ್ರತಿಫಲ 8.3%. ಅಲ್ಲಿನ ಮಿತಿ ವೈಯಕ್ತಿಕ ನೆಲೆಯಲ್ಲಿ ರೂ 15 ಲಕ್ಷ ಹಾಗೂ ಇಲ್ಲಿನ ಮಿತಿ ಕೌಟುಂಬಿಕ ನೆಲೆಯಲ್ಲಿ ರೂ 15 ಲಕ್ಷ. ಅವರವರ ವಯಸ್ಸು ಮತ್ತು ಸಂದರ್ಭ ನೋಡಿಕೊಂಡು ಎರಡೂ ಎಡೆಗಳಲ್ಲಿ ಗರಿಷ್ಟ ಹೂಡಿಕೆ ಮಾಡಿಕೊಳ್ಳುವುದು ಒಳ್ಳೆಯದು. ಇವೆರಡರಲ್ಲೂ ಒಟ್ಟಿಗೆ ಹೂಡಿಕೆ ಮಾಡಬಹುದೇ? ಎಂಬುದಾಗಿ ಹಲವಾರು ಓದುಗರು ಇ-ಮೈಲ್ ಕಳುಹಿಸಿದ್ದುಂಟು. ಹೌದು. ಎರಡರಲ್ಲೂ ಹೂಡಬಹುದು. ಅದರ ಮೇಲೆ ಯಾವುದೇ ನಿರ್ಬಂಧವಿಲ್ಲ.