Advertisement
“ಈ ಭಾನುವಾರ ಗಂಡಿನ ಕಡೆಯವರು ಬರ್ತೀದ್ದಾರೆ. ರೆಡಿಯಾಗು…’ಈ ಮಾತುಗಳನ್ನು ಹೇಳುವಾಗ ಅಮ್ಮನ ದನಿಯಲ್ಲಿ, ಉತ್ಸಾಹಕ್ಕಿಂತ, ವಿಷಾದವೇ ಹೆಚ್ಚಿತ್ತು ಅನ್ನಿಸುತ್ತದೆ. ಖುಷಿಯಾದರೂ ಯಾಕಾಗುತ್ತೆ ಆಕೆಗೆ? ಒಂದೆರಡು ವರ್ಷಗಳಿಂದ ಲೆಕ್ಕ ಹಾಕಿದರೆ, ಪ್ರತಿ ತಿಂಗಳಿಗೆ ಒಬ್ಬರಂತೆ ಮನೆಗೆ ಬಂದ ವರ ಮಹಾಶಯರಿಗೆ, ಅವರೊಡನೆ ಬಂದವರಿಗೆ ಕಾಫಿ-ತಿಂಡಿ ತಿನ್ನಿಸಿ, ಅವರನ್ನು ಖುಷಿಪಡಿಸಿ ಆಕೆಗೂ ಸಾಕಾಗಿದೆ. ಮೊದಲೆರಡು ಸಂಬಂಧಗಳನ್ನು ನಾನು ಬೇಡವೆಂದಾಗ, ಒಂದೆರಡು ಹುಡುಗರು ನನ್ನನ್ನು ಬೇಡವೆಂದಾಗ ಅಮ್ಮನಿಗೆ ಇಷ್ಟೊಂದು ಹೆದರಿಕೆಯಾಗಿರಲಿಲ್ಲ ಅನ್ನಿಸುತ್ತೆ. “ಇನ್ನು ಹುಡುಗಾಟ ಮಾಡಿದ್ದು ಸಾಕು. ಮದುವೆಗೆ ಒಪ್ಪಿಕೋ’ ಅಂತ ನಯವಾಗಿಯೇ ಗದರಿದ್ದಳು. ಆದರೆ, ಯಾವಾಗ ನಾನು “ವಧು ಪರೀಕ್ಷೆ’ಯಲ್ಲಿ ಒಂದಾದ ಮೇಲೆ ಒಂದೊರಂತೆ ಫೇಲ್ ಆಗುತ್ತಲೇ ಹೋದೆನೋ, ಅಮ್ಮನ ಆತಂಕ, ಸಿಟ್ಟು, ಅಸಹನೆಯೂ ಹೆಚ್ಚುತ್ತಲೇ ಹೋಯ್ತು. ಈಗ ನಾನು, ಅಮ್ಮ ಮೊದಲಿನಂತೆ ಮಾತನಾಡುವುದೇ ಇಲ್ಲ.
Related Articles
Advertisement
ಸಿಟಿಗಳಲ್ಲೆಲ್ಲ, ಈಗ ವಯಸ್ಸು ಮೂವತ್ತಾದರೂ ಹುಡುಗಿಯರು “ಮದುವೆಗಿನ್ನೂ ಸಮಯವಿದೆ’ ಅಂತ ಹೇಳುತ್ತಾರಂತೆ. ಆದರೆ, ಹಳ್ಳಿಯಲ್ಲಿರುವ, ಸಣ್ಣ ಪಟ್ಟಣಗಳಲ್ಲಿರುವ ನನ್ನಂಥ‚ ಹುಡುಗಿಯರಿಗೆ ಹಾಗೆ ಹೇಳುವ ಹಕ್ಕಿಲ್ಲ. ಧೈರ್ಯವೂ ಇಲ್ಲ. ವಯಸ್ಸು 25 ದಾಟುವುದರೊಳಗೆ ಮದುವೆಯಾಗಿ ಗಂಡನ ಮನೆ ಸೇರಬೇಕು. ಹುಡುಗ ಇಷ್ಟವಾಗಲಿ, ಆಗದೇ ಇರಲಿ. ಯಾರನ್ನಾದರೂ ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಅದೊಂದು ದೊಡ್ಡ ಅಪರಾಧ ಮಾಡಿದಂತೆ. “ಅವಳಿಗೆ ಕೊಬ್ಬು. ಬಂದ ಹುಡುಗರನ್ನೆಲ್ಲ ಬೇಡ ಅಂತಾಳಂತೆ’ ಅಂತ ಬೇರೆಯವರು ಹೇಳ್ಳೋದಷ್ಟೇ ಅಲ್ಲ, “ಅವನಿಗೇನು ಕಡಿಮೆಯಾಗಿತ್ತು ಅಂತ ಬೇಡ ಅಂದೆ. ರಾಜಕುಮಾರ ಬಂದು ಮದುವೆಯಾಗ್ತಾನೆ ಅಂತ ಕನಸು ಕಾಣಿ¤ದ್ದೀಯೋ ಹೇಗೆ?’ ಅಂತ ಸ್ವಂತದವರೇ ಕುಹಕವಾಗಿ ಕುಟುಕುತ್ತಾರೆ. ನಿಮ್ಮದೇ ಮನೆಯಲ್ಲಿ ನೀವು ಪರಕೀಯರಂತೆ, ಹೆತ್ತವರಿಗೆ ಭಾರವಾಗಿ ಬದುಕುತ್ತಿರುವಂತೆ ಭಾಸವಾಗುತ್ತದೆ.
ಇಂಥ ಅದೆಷ್ಟು ಕುಟುಕು ಗಾಯಗಳ ಗುರುತಿಲ್ಲ ನನ್ನ ಎದೆಯೊಳಗೆ? ವಯಸ್ಸು 27 ದಾಟಿದರೂ ಮದುವೆಯಾಗಿಲ್ಲ ಅನ್ನೋ ಏಕೈಕ ಕಾರಣದಿಂದ, ನಾನು ತುಂಬಾನೇ ಕುಗ್ಗಿ ಹೋಗಿದ್ದೇನೆ. ಆದರೂ, ಹುಡುಗನ ಕಡೆಯವರು ಬಂದಾಗ ನೋವನ್ನು ಮರೆತು ನಸುನಗುತ್ತೇನೆ, ಕಪ್ಪು ಕಾಣದಿರಲೆಂದು ಬಣ್ಣ ಬಳಿಯುತ್ತೇನೆ. ಮೊದಲಿನಂತೆ ಹುಡುಗನ ಗುಣಾವಗುಣಗಳನ್ನು ವಿಮರ್ಶಿಸಲು ಹೋಗದೆ, “ಇವನಾದರೂ ಒಪ್ಪಿಕೊಳ್ಳಲಿ’ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ. “ಹುಡುಗನೊಬ್ಬನಿಗೆ ನಾನು ಇಷ್ಟವಾದೆ’ ಅಂತಾದರೆ ಸಾಕು!
ಮೊದಲು ಹೀಗಿರಲಿಲ್ಲ ನಾನು. ನನ್ನ ನಸುಗಪ್ಪು ಬಣ್ಣವನ್ನು, ನಾಲ್ಕೂವರೆ ಅಡಿ ದೇಹವನ್ನು, ಒಟ್ಟಾರೆ ನನ್ನ ವ್ಯಕ್ತಿತ್ವವನ್ನು ಬಹಳವಾಗಿ ಪ್ರೀತಿಸುತ್ತಿದ್ದೆ. ನಾನು ಚಂದವಿಲ್ಲ ಅಂತ ಯಾವತ್ತೂ ತಲೆ ಕೆಡಿಸಿಕೊಂಡಿರಲಿಲ್ಲ. ಇದು ದೇವರು ಕೊಟ್ಟ ರೂಪ ಅಂತ ಖುಷಿಯಲ್ಲೇ ಇದ್ದೆ. ಆದರೆ, ಯಾವಾಗ ಸೌಂದರ್ಯದ ಮಾನದಂಡದಿಂದಲೇ ನಾನು ಪದೇ ಪದೆ ನಿರಾಕರಿಸಲ್ಪಟ್ಟೆನೋ, ಅಂದಿನಿಂದ ನನ್ನ ಬಗ್ಗೆ ನನಗೇ ಅಸಹ್ಯ, ಅನುಕಂಪ ಹುಟ್ಟತೊಡಗಿತು. ಈಗ ಮೊದಲಿನಂತೆ ನನ್ನನ್ನು ನಾನು ಪ್ರೀತಿಸಲು ಸಾಧ್ಯವಾಗುತ್ತಿಲ್ಲ. ಕನ್ನಡಿಯ ಮುಂದೆ ನಿಂತಾಗೆಲ್ಲಾ, ಹುಡುಗಿ ಕಪ್ಪು, ದಪ್ಪ ಅಂತ ಹೇಳಿದ ಹುಡುಗರ ಮಾತುಗಳೇ ಕಿವಿಗೆ ಬಡಿದು, ಕನ್ನಡಿಯಿಂದ ದೂರ ಸರಿಯುತ್ತೇನೆ. ನಾನೂ ಎಲ್ಲರಂತೆ ಹಾಲ್ಬಣ್ಣ ಹೊಂದಬೇಕಿತ್ತು, ಎತ್ತರ ಇರಬೇಕಿತ್ತು, ಕಡೇ ಪಕ್ಷ, ದೊಡ್ಡ ಸಿಟಿಯಲ್ಲಿ ಹುಟ್ಟಿ “ಮದುವೆಯೇ ಬೇಡ’ ಅನ್ನುವ ಸ್ವಾತಂತ್ರ್ಯವನ್ನಾದರೂ ಪಡೆಯಬೇಕಿತ್ತು ಅಂತ ಅನ್ನಿಸುತ್ತದೆ.
ಉಹೂಂ, ಅದ್ಯಾವುದೂ ಸಾಧ್ಯವಿಲ್ಲ. ಯಾಕೆ ಹೇಳಿ? ನಾನೊಬ್ಬಳು ಹೆಣ್ಣು, ನೋಡಲು ಅಷ್ಟೇನೂ ಚಂದವಿಲ್ಲದ ಹೆಣ್ಣು. ನನ್ನ ಮುಂದೆ ಆಯ್ಕೆಗಳಿಲ್ಲ. ಅನಿವಾರ್ಯತೆಗಳಿವೆ ಅಷ್ಟೇ.
ಚೈತ್ರಾ ಜೆ.