Advertisement

ವಯಸ್ಸು ಚಿಕ್ಕದಾದರೂ ಕೀರ್ತಿ ದೊಡ್ಡದು!

10:15 AM Jan 25, 2020 | mahesh |

ಸಾಧನೆಗೆ ವಯಸ್ಸಿನ ಹಂಗಿಲ್ಲ. ಅಂತೆಯೇ ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವರ ಪಟ್ಟಿ ಇಲ್ಲಿದೆ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂಬಂತೆ ಇವರ ಸಾಧನೆ ಜಗದಗಲಕ್ಕೂ ಮುಟ್ಟಿದೆ.

Advertisement

ಶ್ರೀ ಲಕ್ಷ್ಮೀ ಸುರೇಶ್‌
ವಿಶ್ವದ ಅತಿ ಕಿರಿಯ ವೆಬ್‌ ಡಿಸೈನರ್‌ ಮತ್ತು ಸಿಇಒ ಎಂಬ ಖ್ಯಾತಿಯನ್ನು ಶ್ರೀ ಲಕ್ಷ್ಮೀ ಸುರೇಶ್‌ ಅವರು ಹೊಂದಿದ್ದಾರೆ. ಇವರು ಕೇರಳದ ಕೊಝೀಕ್ಕೊಡ್‌ನ‌ವರು. ತಮ್ಮ 6ನೇ ವಯಸ್ಸಿನಲ್ಲೇ ವೆಬ್‌ ಡಿಸೈನ್‌ ಮಾಡಿದ್ದಾರೆ. ಪ್ರಸ್ತುತ ಇವರು ಭಾರತಾದ್ಯಂತ 100ಕ್ಕೂ ಹೆಚ್ಚು ಸಂಸ್ಥೆಗಳಿಗೆ ವೆಬ್‌ಸೈಟ್‌ ವಿನ್ಯಾಸಗೊಳಿಸಿದ್ದಾರೆ. ಇವರಿಗೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

ನೈನಾ ಜೈಸ್ವಾಲ್‌
ಅತಿ ಕಿರಿಯ ಪದವೀಧರೆ ಎಂಬ ಹೆಗ್ಗಳಿಕೆ ಪಡೆದಿರುವ ನೈನಾ ಜೈಸ್ವಾಲ್‌ ಅವರು ತಮ್ಮ 8ನೇ ವಯಸ್ಸಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, 13ನೇ ವಯಸ್ಸಿಗೆ ಪತ್ರಿಕೋದ್ಯಮ ಪದವಿ ಪಡೆದಿದ್ದು ಭಾರತ ಮಾತ್ರವಲ್ಲದೆ ಏಷ್ಯಾದಲ್ಲೇ ಅತೀ ಕಿರಿಯ ಪದವೀಧರೆಯಾಗಿದ್ದಾರೆ. ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರ ಚಟುವಟಿಕೆಯಲ್ಲೂ ಮುಂದಿರುವ ಇವರು ರಾಷ್ಟ್ರೀಯ ಟೆನ್ನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಹಲವು ಬಾರಿ ಜಯಗಳಿಸಿದ್ದಾರೆ. ಅಲ್ಲದೇ ರಾಮಾಯಣ 108 ಶ್ಲೋಕಗಳನ್ನು ಕಂಠಪಾಠ ಮಾಡಿದ್ದಾರೆ.

ಹಿಮಾ ದಾಸ್‌
ಇವರು ಅಸ್ಸಾಂನ ಭತ್ತದ ಕೃಷಿಕನ ಮಗಳು. ತಮ್ಮ 18ನೇ ವಯಸ್ಸಿನಲ್ಲಿ ಐಎಎಎಫ್ ಉ-20 ಚಾಂಪಿಯನ್‌ಶಿಪ್‌ 400 ಮೀಟರ್‌ ಓಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರಲ್ಲಿ ಬಂಗಾರದ ಪದಕ ಪಡೆದ ಮೊದಲ ಭಾರತೀಯ ಆ್ಯತ್ಲೀಟ್‌ ಎಂಬ ಹಿರಿಮೆ ಇವರಿಗಿದೆ. 2018 ರಲ್ಲಿ ಅರ್ಜುನ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿರುವ ಹಿಮಾ ಅವರು ಕಾಮನ್‌ವೆಲ್ತ್‌ಗೆ ಅರ್ಹತೆ ಪಡೆಯುವ ಮುನ್ನ ಕೇವಲ ಒಂದು ವರ್ಷ ಮಾತ್ರ ತರಬೇತಿಗೆ ಒಳಗಾಗಿದ್ದರು.

ಸಮೃದ್ಧಿ ಯಾದವ್‌
ಬೆಂಗಳೂರಿನ ಬೆಡಗಿ ಸಮೃದ್ಧಿ ಯಾದವ್‌ ಪೋಸ್ಟ್‌ ಕಾರ್ಡ್‌ನಲ್ಲಿ ಗರಿಷ್ಠ ಬಾರಿ ಕನ್ನಡ ಕಣ್ಮಣಿ ಬರೆದಿರುವ ದಾಖಲೆ ಹೊಂದಿದ್ದಾರೆ. ಇವರು ಫೆಬ್ರವರಿ 4, 2008ರಲ್ಲಿ ಜನಿಸಿದ್ದು. ನವೆಂಬರ್‌ 30, 2019ರಲ್ಲಿ ಪೊಸ್ಟ್‌ಕಾರ್ಡ್‌ನಲ್ಲಿ ಒಟ್ಟು 852 ಬಾರಿ ಕನ್ನಡ ಕಣ್ಮಣಿ ಬರೆದ ದಾಖಲೆಗೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಾಗಿದೆ.

Advertisement

ಆರತಿ ಕಿರಣ್‌ ಶೇಟ್‌
ಹೊನ್ನಾವರದ ನವಿಲುಗೋಣ ಗ್ರಾಮದ ಈ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿದೆ. ತನ್ನ ಮನೆಯ ಮುಂದೆ ಈ ಬಾಲಕಿ ತನ್ನ ತಮ್ಮನೊಂದಿಗೆ ಆಟವಾಡುತ್ತಿ¨ªಾಗ ದಿಢೀರನೆ ಗೂಳಿಯೊಂದು ದಾಳಿ ಮಾಡುತ್ತದೆ. ಅದಕ್ಕೆ ಅಂಜದೇ ಅದರಿಂದ ತಮ್ಮನ ಪ್ರಾಣವನ್ನು ಕಾಪಾಡಿ ಸಾಹಸ ಮೆರೆದಿದ್ದಕ್ಕಾಗಿ ಸರಕಾರ ಈ ಬಾಲಕಿಗೆ ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

– ಶಿವಮಲ್ಲಯ್ಯ, ಪ್ರೀತಿ ಭಟ್‌, ಧನ್ಯಶ್ರೀ, ಪೂರ್ಣಿಮಾ, ಶಿವಾನಂದ
ನಿರ್ವಹಣೆ: ಮಂಗಳೂರು ಸುದಿನ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next