Advertisement

ಯಕ್ಷಲೋಕದಿಂದ ಮರೆಯಾದ ಅಗರಿ ರಘುರಾಮ ಭಾಗವತರು 

12:50 AM Feb 03, 2019 | Team Udayavani |

ಯಕ್ಷರಂಗ ಇತ್ತೀಚೆಗೆ ಹಿರಿಯ ಕೊಂಡಿಯನ್ನು ಕಳೆದುಕೊಂಡಿದೆ. ತನ್ನದೆ ಆದ ಕೊಡುಗೆಗಳನ್ನು ಯಕ್ಷರಂಗಕ್ಕೆ ನೀಡಿದ ಹಿರಿಯ ಚೇತನ,ತೆಂಕಿನ ಧೀಮಂತ ಭಾಗವತ ಅಗರಿ ರಘುರಾಮ ಭಾಗವತರು ಇನ್ನು ನೆನಪು ಮಾತ್ರ. 

Advertisement

ತೆಂಕು ತಿಟ್ಟಿನ ದಿಗ್ಗಜ ಭಾಗವತರಾಗಿದ್ದ ಅಗರಿ ಶೈಲಿಯ ಖ್ಯಾತಿಯ ಶ್ರೀನಿವಾಸ ಭಾಗವತ ಮತ್ತು ರುಕ್ಮಿಣಿ ಅಮ್ಮನವರ ಪುತ್ರರಾಗಿ 1935 ರಲ್ಲಿ ಜನನ. ರಘುರಾಮ ಭಾಗವತರು ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ಉದ್ಯೋಗವನ್ನು ಪಡೆದಿದ್ದರು. ಆದರೂ ವೃತ್ತಿ ಭಾಗವತನಾಗಿ ಕಾಣಿಸಿಕೊಂಡದ್ದು ಆ ಕಾಲಕ್ಕೂ ಈ ಕಾಲಕ್ಕೂ ವಿಶೇಷವೇ.

ಮನೆಯಲ್ಲೇ ಯಕ್ಷಗಾನ ವಾತಾವರಣದ ಪ್ರೇರಣೆಯಿಂದ ಕಲಾವಿದ ನಾಗಿ ಬೆಳೆದ ರಘುರಾಮ ಭಾಗವತರು, ಸರ್ಕಾರಿ ಉದ್ಯೋಗದ ನಡುವೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. 

ತುಳು ಪ್ರಸಂಗಗಳ ಪ್ರದರ್ಶನಗಳು ಜನಪ್ರಿಯವಾಗಿದ್ದ ಕಾಲದಲ್ಲಿ ವೃತ್ತಿ ಮೇಳಕ್ಕೆ ಅಗರಿ ರಘುರಾಮ ಭಾಗವತರು ಅನಿವಾರ್ಯವಾಗಿದ್ದರು. 
ತಂದೆ ಶ್ರೀನಿವಾಸ ಭಾಗವತರು ತುಳು ಹಾಡುಗಳನ್ನು ಹಾಡಲು ಒಲ್ಲೆ ಎಂದಾಗ ಅಂದಿನ ಸುರತ್ಕಲ್‌ ಮೇಳದಲ್ಲಿ  ಅಗರಿ ರಘುರಾಮ ಭಾಗವತರು ಭಾಗವತಿಕೆ ಮಾಡುತ್ತಿದ್ದರು ಎನ್ನುವುದನ್ನು ಹಿರಿಯ ವಿಮರ್ಶಕರು ನೆನೆಸಿಕೊಳ್ಳುತ್ತಾರೆ. 

ತಂದೆ ಸುರತ್ಕಲ್‌ ಮೇಳ ತೊರೆದಾಗ ಅನಿವಾರ್ಯತೆಯಿಂದ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಪ್ರಧಾನ ಭಾಗವತರಾಗಿ ಸುರತ್ಕಲ್‌ ಮೇಳ ಸೇರಿದ ರಘುರಾಮ ಭಾಗವತರು  ಹಲವು ವರ್ಷ ಸೇವೆ ಸಲ್ಲಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.

Advertisement

ಡೇರೆ ಮೇಳಕ್ಕೆ ಅನಿವಾರ್ಯವಾಗಿದ್ದ ಹೊಸ ಪ್ರಸಂಗಗಳೂ ಮತ್ತು ಪೌರಾಣಿಕ ಪ್ರಸಂಗಗಳಿಗೆ ತನ್ನ ಕಂಠಸಿರಿಯಿಂದ ಜೀವ ತುಂಬುವ ಶಕ್ತಿ ಅಗರಿ ರಘುರಾಮ ಭಾಗವತರದ್ದು ಎಂದು ಹಿರಿಯ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. 

ಮಲ್ಪೆ ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ  ಭಟ್‌, ಕುಂಬ್ಳೆ ಸುಂದರ್‌ ರಾವ್‌ , ಕೊಳ್ಯೂರು ರಾಮಚಂದ್ರ ರಾವ್‌ , ಗೋವಿಂದ ಭಟ್‌ ಸೂರಿಕುಮೇರು , ಜಲವಳ್ಳಿ ವೆಂಕಟೇಶ್‌ ರಾವ್‌ , ಎಂ. ವಾಸುದೇವ ಸಾಮಗ , ಶಿವರಾಮ ಜೋಗಿ ,  ಪಾತಾಳ ವೆಂಕಟರಮಣ , ವಿಟ್ಲ ಜೋಷಿ ,  ಎಂ.ಕೆ.ರಮೇಶಾಚಾರ್ಯ , ವೇಣೂರು ಸುಂದರಾಚಾರ್ಯ , ಕೊಕ್ಕಡ ಈಶ್ವರ ಭಟ್ ಮೊದಲಾದ ದಿಗ್ಗಜರಿಗೆ ಭಾಗವತಿಕೆ ಮಾಡಿ ಸೈ ಎನಿಸಿಕೊಂಡವರು ಅಗರಿ ರಘುರಾಮ ಭಾಗವತರು. 

ಶ್ರೀನಿವಾಸ ಭಾಗವತರ ನಂತರ ರಘುರಾಮ ಭಾಗವತರು ಜನಪ್ರಿಯಗೊಳಿಸಿದ ಅಗರಿ ಶೈಲಿ ಯಕ್ಷರಂಗದಲ್ಲಿ ಸ್ಥಾಯಿಯಾಗಿ ಉಳಿಯಲಿ. ಅವರು ನೀಡಿದ ಕಲಾ ಮೌಲ್ಯಗಳು ಇಂದಿನ ಭಾಗವತರಿಗೆ ಆದರ್ಶವಾಗಲಿ ಎನ್ನುವುದು ಆಶಯ.

Advertisement

Udayavani is now on Telegram. Click here to join our channel and stay updated with the latest news.

Next