ತೆಂಕುತಿಟ್ಟಿನ ಹಿರಿಯ ಹಾಗೂ ಪ್ರಸಿದ್ಧ ಭಾಗವತರಾಗಿದ್ದ ಅಗರಿ ರಘುರಾಮ ಭಾಗವತರ ನಿಧನ ಯಕ್ಷರಂಗಕ್ಕೊಂದು ದೊಡ್ಡ ನಷ್ಟ . ಅಗರಿ ಶೈಲಿಯ ಸಮರ್ಥ ಪ್ರತಿನಿಧಿಗಳಾಗಿದ್ದ ರಘುರಾಮ ಭಾಗವತರು ಪ್ರಸಂಗಗಳ ನಡೆ ಅರಿತಿದ್ದ , ಹೊಸ ಪ್ರಸಂಗಗಳಿಗೆ ನಿರ್ದೇಶನ ನೀಡುತ್ತಿದ್ದ , ಪರಂಪರೆ ಹಾಗೂ ಸಂಗೀತ ಶೈಲಿ – ಎರಡನ್ನೂ ಅರಿತಿದ್ದ ಅಪರೂಪದ ಭಾಗವತರೆನಿಸಿಕೊಂಡಿದ್ದರು .
ಸರಕಾರಿ ನೌಕರರಾದರೂ ಮೇಳದ ಪೂರ್ಣಕಾಲಿಕ ತಿರುಗಾಟದ ಭಾಗವತರಾದುದು ಒಂದು ಆಕಸ್ಮಿಕ ಘಟನೆಯಿಂದಾಗಿ . 1965 – 66ರ ಕಾಲ . ಅಗರಿ ಶ್ರೀನಿವಾಸ ಭಾಗವತರು ಕಸ್ತೂರಿ ಪೈ ಸಹೋದರರ ಸುರತ್ಕಲ್ ಮೇಳದ ಪ್ರಧಾನ ಭಾಗವತರಾಗಿದ್ದ ಸಮಯದಲ್ಲಿ ಮೇಳಗಳ ಪೈಪೋಟಿಯಿಂದಾಗಿ ಸುರತ್ಕಲ್ ಮೇಳಕ್ಕೂ ತುಳು ಪ್ರಸಂಗಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು. ಆದರೆ ಪ್ರಧಾನ ಭಾಗವತರಾದ ಅಗರಿಯವರು ತಾವು ತುಳು ಪ್ರಸಂಗಗಳಿಗೆ ಭಾಗವತಿಕೆ ಮಾಡಲಾರೆ ಎಂದು ಪೈ ಸಹೋದರರಲ್ಲಿ ಖಡಾ ಖಂಡಿತವಾಗಿ ತಿಳಿಸಿದರು . ಪ್ರಸಿದ್ಧಿಯ ತುತ್ತ ತುದಿಯಲ್ಲಿದ್ದ ಅಗರಿ ಶ್ರೀನಿವಾಸ ಭಾಗವತರು ಇಲ್ಲದಿದ್ದರೆ ಕಲೆಕ್ಷನ್‌ಗೆ ತೊಂದರೆ , ಹಾಗೆಂದು ತುಳು ಪ್ರಸಂಗ ಆಡಿಸದಿದ್ದರೆ ಕಂಟ್ರಾಕುrದಾರರನ್ನು ಕಳೆದುಕೊಳ್ಳುವ ಅಪಾಯ . ಕೊನೆಗೆ ಅಗರಿಯವರ ಸಲಹೆಯಂತೆ ಪೌರಾಣಿಕ ಪ್ರಸಂಗಗಳಿಗೆ ತಾನೇ ಭಾಗವತಿಕೆ ಮಾಡುವುದು , ತುಳು ಪ್ರಸಂಗಗಳು ಇದ್ದ ದಿನ ತನ್ನ ಮಗನಾದ ಅಗರಿ ರಘುರಾಮ ಭಾಗವತರನ್ನು ಬರ ಹೇಳುವುದು , ಹೀಗೆ ಆರು ತಿಂಗಳ ಕಾಲ ರಘುರಾಮರು ವೃತ್ತಿಗೆ ರಜೆ ಹಾಕಿ ಸುರತ್ಕಲ್ ಮೇಳದ ತಿರುಗಾಟ ನಡೆಸಿದರು . ಮುಂದಿನ ವರ್ಷ ಅಗರಿಯವರು ಕೂಡ್ಲು ಮೇಳ ಸೇರಿದಾಗ , ರಘುರಾಮ ಭಾಗವತರು ಪೈಗಳ ಒತ್ತಾಯಕ್ಕೆ ಮಣಿದು , ಸರಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಸುರತ್ಕಲ್ ಮೇಳಕ್ಕೆ ಪ್ರಧಾನ ಭಾಗವತರಾಗಬೇಕಾಯಿತು . ಹೀಗೆ ತೆಂಕು ತಿಟ್ಟಿಗೆ ಒಬ್ಬ ಪ್ರತಿಭಾವಂತ , ದಕ್ಷ ಭಾಗವತರ ಪ್ರವೇಶ ಮುಂದೆ ಯಕ್ಷರಂಗಕ್ಕೆ ದೊಡ್ಡ ಲಾಭ ತಂದು ಕೊಟ್ಟಿತು .
ಅಗರಿ ರಘುರಾಮ ಭಾಗವತರು ಶುದ್ಧ ಅಗರಿ ಶೈಲಿಯ , ಪರಂಪರೆಯ ಭಾಗವತರು . ತಂದೆಯವರಂತೆಯೇ ಆಶು ಕವಿಗಳು . ಹೆಚ್ಚಿನ ಎಲ್ಲಾ ಪ್ರಸಂಗಗಳ ಪದ್ಯ ಕಂಠಪಾಠವಿದ್ದ ಕಾರಣ ಪ್ರಸಂಗ ನೋಡದೇ ಪದ್ಯ ಹೇಳುವುದು ರಘರಾಮರಿಗೆ ಸಿದ್ದಿಸಿತ್ತು. ಹೊಸ ಪ್ರಸಂಗಗಳ ರಂಗ ನಡೆ , ಪಾತ್ರ ಚಿತ್ರಣ , ನಿರ್ದೇಶನ ಇವೆಲ್ಲದರಲ್ಲಿ ರಘುರಾಮರು ಅಗ್ರಗಣ್ಯರಾಗಿದ್ದರು .
ರಘುರಾಮರ ಭಾಗವತಿಕೆಯು ಅಗರಿ ಶ್ರೀನಿವಾಸ ಭಾಗವತರದ್ದೇ ಶೈಲಿ . ಸತ್ಯ ಹರಿಶ್ಚಂದ್ರ , ನಳದಮಯಂತಿ , ಶನೀಶ್ವರ ಮಹಾತೆ¾ ಮುಂತಾದ ಪೌರಾಣಿಕ ಪ್ರಸಂಗಗಳನ್ನು ರಘುರಾಮರ ನಿರ್ದೇಶನದಲ್ಲಿ ಪ್ರಥಮವಾಗಿ ತುಳು ಭಾಷೆಯಲ್ಲಿ ಆಡಿಸಿದಾಗ ಇದೊಂದು ಹೊಸತನದ ಪ್ರಯೋಗ ಎನಿಸಿತ್ತು . ಕಲಾವಿದರ ಮನೋಧರ್ಮವನ್ನರಿತು , ಪಾತ್ರಗಳ ಸಂದರ್ಭಕ್ಕನುಗುಣವಾಗಿ ,ರಸೋತ್ಕರ್ಷವಾಗುವ ವಾತಾವರಣ ನಿರ್ಮಿಸುವಲ್ಲಿ ರಘುರಾಮರು ಪರಿಣತರಾಗಿದ್ದರು . ರಘುರಾಮರು ಶೃಂಗಾರ , ಕರುಣ , ಶಾಂತ , ಹಾಸ್ಯರಸಗಳಲ್ಲಿ ಹಾಡುವಾಗ ಒಂದು ಅಲೌಕಿಕ ವಾತಾವರಣವೇ ಸೃಷ್ಟಿಯಾಗುತ್ತಿತ್ತು . ರಂಗದ ನಡೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಘುರಾಮರು , ಈ ವಿಚಾರದಲ್ಲಿ ಮಾತ್ರ ತಂದೆಯವರಂತೆ ಬಿಗು ನಿರ್ಧಾರ ತಾಳುತ್ತಿದ್ದರು . ಅಗರಿ ರಘುರಾಮ ಭಾಗವತರು ಶುದ್ಧ ಅಗರಿ ಶೈಲಿಯ , ಪರಂಪರೆಯ ಭಾಗವತರು . ತಮ್ಮ ತಂದೆಯವರಂತೆಯೇ ಆಶು ಕವಿಗಳು . ಹೆಚ್ಚಿನ ಎಲ್ಲಾ ಪ್ರಸಂಗಗಳ ಪದ್ಯ ಕಂಠ ಪಾಟವಿದ್ದ ಕಾರಣ ಪ್ರಸಂಗ ನೋಡದೇ ಪದ್ಯ ಹೇಳುವುದು ರಘರಾಮರಿಗೆ ಸಿದ್ದಿಸಿತ್ತು. ಉತ್ತಮ ಸ್ಮರಣ ಶಕ್ತಿ , ಕವಿತಾ ಶಕ್ತಿ ಹೊಂದಿದ್ದು , ಛಂದಸ್ಸು , ರಾಗ – ತಾಳಗಳ ಕುರಿತು ಆಳವಾದ ಜ್ಞಾನ ಹೊಂದಿದ್ದರು . ಹೊಸ ಪ್ರಸಂಗಗಳ ರಂಗ ನಡೆ , ಪಾತ್ರ ಚಿತ್ರಣ , ನಿರ್ದೇಶನ ಇವೆಲ್ಲದರಲ್ಲಿ ರಘುರಾಮರು ಅಗ್ರಗಣ್ಯರಾಗಿದ್ದರು .
ಅಗರಿ ರಘುರಾಮ ಭಾಗವತರ ವಿದ್ವತ್ತನ್ನು ಲಕ್ಷಿಸಿ ನೂರಾರು ಕಡೆ ಸಮ್ಮಾನ ನಡೆದಿವೆ . ವಿಟ್ಲ ಜೋಷಿ ಪ್ರಶಸ್ತಿ , ಕುರಿಯ ಪ್ರಶಸ್ತಿ , ಉಳ್ಳಾಲ ಶ್ರೀನಿವಾಸ ಮಲ್ಯ ಪ್ರಶಸ್ತಿ , ತ್ರಿಕಣ್ಣೇಶ್ವರ ಪ್ರಶಸ್ತಿ ,ಪದ್ಯಾಣ ಪ್ರಶಸ್ತಿ , ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ , ಯಕ್ಷಸಂಗಮ ಮೂಡುಬಿದಿರೆ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ .
ಎಂ.ಶಾಂತರಾಮ ಕುಡ್ವ