Advertisement

ಅಗರಬತ್ತಿಯಿಂದ ಬಾಳ ಬುತ್ತಿ

10:08 AM Oct 17, 2019 | mahesh |

ಮಹಿಳೆಯರು ಇಂದು ಸ್ವಾವಲಂಬಿಗಳಾಗುತ್ತಿದ್ದಾರೆ. ಉನ್ನತ ಮಟ್ಟದ ವಿದ್ಯಾಭ್ಯಾಸ ಸಿಗದಿದ್ದರೂ, ತಮಗಿರುವ ಕೌಶಲಗಳನ್ನು ಬಳಸಿಕೊಂಡು, ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಿದ್ದಾರೆ. ಬೇರೆಯವರ ಕೈಕೆಳಗೆ ಕೆಲಸ ಮಾಡುವ ಬದಲು, ಸ್ವಂತ ಉದ್ಯೋಗ ಪ್ರಾರಂಭಿಸಿ, ಇತರರಿಗೂ ನೆರವಾದ ಮಹಿಳೆಯರ ಸಂಖ್ಯೆಯೂ ಕಡಿಮೇನಿಲ್ಲ.

Advertisement

ಅಂಥವರಲ್ಲಿ ಸಾಲಿಗೆ, ವಿಜಯಪುರದ ನಿಂಬರಗಿ ಕಾಲೊನಿಯ ಅನಿತಾ ಪವಾರ ಮತ್ತು ರೇಣುಕಾ ಝಳಕಿ ಅವರನ್ನೂ ಸೇರಿಸಬಹುದು. ಎರಡು ಜಡೆ, ಒಂದೆಡೆ ಸೇರುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಿರುವ ಇವರಿಬ್ಬರು, ಪಾಲುಗಾರಿಕೆಯಲ್ಲಿ ಅಗರಬತ್ತಿ ತಯಾರಿಸುವ ಸ್ವಉದ್ಯೋಗವನ್ನು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಮೂವರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.

ಮೈಸೂರಿನಲ್ಲಿ ಅಗರಬತ್ತಿ ತಯಾರಿಕೆಯ ತರಬೇತಿ ಪಡೆದ ಅನಿತಾ ಮತ್ತು ರೇಣುಕಾ, ಸ್ವಂತವಾಗಿ ಉದ್ದಿಮೆ ಶುರುಮಾಡುವ ಕನಸು ಕಂಡರು. ಅವರ ಕನಸಿಗೆ, ಎರಡೂ ಕುಟುಂಬದಿಂದ ಸಹಕಾರವೂ ದೊರೆಯಿತು. ಅದೇ ಧೈರ್ಯದಲ್ಲಿ, ಒಂದು ವರ್ಷದ ಹಿಂದೆ 6 ಲಕ್ಷ ರೂ. ಬಂಡವಾಳದೊಂದಿಗೆ ಅಗರಬತ್ತಿ ತಯಾರಿಕಾ ಘಟಕವನ್ನು ತೆರೆಯಲಾಯ್ತು. ಈಗ ಮೈಸೂರಿನ ಸೈಕಲ್‌ ಪ್ಯೂರ್‌ ಅಗರಬತ್ತಿ ಕಂಪನಿಯಿಂದ, ಕಚ್ಚಾವಸ್ತುಗಳಾದ ರೆಡಿಮಿಕ್ಸ್‌, ಅಗಬತ್ತಿ ಪೌಡರ್‌, ಬಿದಿರನ್ನು ಖರೀದಿಸುವ ಇವರು, ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೂ ದುಡಿಯುತ್ತಾರೆ. ದಿನವೊಂದಕ್ಕೆ 160 ಕೆ.ಜಿ. ಅಗರಬತ್ತಿಗಳನ್ನು ತಯಾರಿಸುವ ಈ ಮಹಿಳೆಯರ ಬಳಿ, ಅಗರಬತ್ತಿ ತಯಾರಿಕೆಗೆ ಬೇಕಾದ, ಅಗರಬತ್ತಿ ಪುಡಿಗಳನ್ನು ಬೆರೆಸುವ, ಅಗರಬತ್ತಿ ಮಾಡುವ ಮತ್ತು ತಯಾರಿಸಿದ ಅಗರಬತ್ತಿಗಳನ್ನು ಒಣಗಿಸುವ 3 ಮಷಿನ್‌ಗಳಿವೆ. 2 ಟನ್‌ ಕಚ್ಚಾ ವಸ್ತುಗಳಿಗೆ 1.10 ಲಕ್ಷ ರೂ. ಕೊಟ್ಟು ಖರೀದಿಸುತ್ತಾರೆ. ಎಲ್ಲ ಖರ್ಚುಗಳನ್ನು ಕಳೆದ ನಂತರ, 1 ಟನ್‌ಗೆ 10 ಸಾವಿರ ರೂ. ಉಳಿತಾಯವಾಗುತ್ತದೆ ಎನ್ನುತ್ತಾರೆ ಇವರು.

ತಯಾರಿಸಿದ ಅಗರಬತ್ತಿಗಳನ್ನು ಎನ್‌.ಆರ್‌.ರಂಗರಾವ್‌ ಅಂಡ್‌ ಸನ್ಸ್‌ ಕಂಪನಿಗೆ ಪ್ಯಾಕಿಂಗ್‌ಗಾಗಿ ರವಾನಿಸುತ್ತಾರೆ. ನಂತರ ಅವುಗಳನ್ನು ಮೈಸೂರಿಗೆ ತಲುಪಿಸಲಾಗುತ್ತದೆ.

ಸುಮ್ಮನೆ ಮನೆಯಲ್ಲಿ ಕುಳಿತರೆ ಏನೂ ಸಾಧಿಸಲಾಗುವುದಿಲ್ಲ. ಮನಸ್ಸಿದ್ದರಷ್ಟೇ ಮಾರ್ಗ. ಮೊದಮೊದಲು ಮನೆ, ಉದ್ಯೋಗ ಎರಡನ್ನೂ ಸರಿದೂಗಿಸಲು ಕಷ್ಟವಾಗುತ್ತಿತ್ತು. ದಿನಕಳೆದಂತೆ ಎಲ್ಲವೂ ಸುಲಭವಾಗಿದೆ.
-ಅನಿತಾ ಪವಾರ

Advertisement

ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕು ಅಂತ ಕನಸು ಕಂಡಿದ್ದೆ. ಅಗರಬತ್ತಿ ತಯಾರಿಕೆಯಿಂದ ಕೇವಲ ನಾನು ಮಾತ್ರ ಅಲ್ಲ, ಸುತ್ತಮುತ್ತಲಿನ ಒಂದಿಬ್ಬರು ಮಹಿಳೆಯರೂ ನಾಲ್ಕು ಕಾಸು ಸಂಪಾದಿಸುವಂತಾಗಿದೆ. ಈ ಕೆಲಸ ಖುಷಿ ಕೊಡುತ್ತಿದೆ.
-ರೇಣುಕಾ. ಝಳಕಿ

-ಬಸಮ್ಮ ಭಜಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next