ಯಳಂದೂರು: ತಾಲೂಕಿನ ಅಗರ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಗರ ಗ್ರಾಮದ ರಾಜಮ್ಮ ಬಸವರಾಜು ಅವಿರೋಧವಾಗಿ ಆಯ್ಕೆಯಾದರು.
12 ಸದಸ್ಯರಿರುವ ಈ ಪಂಚಾಯ್ತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಅನ್ನಪೂರ್ಣ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿಯಾಗಿತ್ತು. ಅದರಂತೆ ಚುನಾವಣೆ ನಿಗದಿಯಾಗಿದ್ದು ರಾಜಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಸರಿತಾ ಕುಮಾರಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಗ್ರಾಪಂ ಕಚೇರಿಗೆ ಭೇಟಿ ನೀಡಿ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಗರ ಗ್ರಾಪಂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 31 ಗ್ರಾಮ ಪಂಚಾಯಿತಿಗಳಿದ್ದು ಇಲ್ಲಿ ಪ್ರತಿ ಬಾರಿಯೂ ಕಾಂಗ್ರೆಸ್ ಪರವಾದ ಅಲೆ ಇರುತ್ತದೆ. ಈ ಬಾರಿಯೂ ಪಕ್ಷದ ಬೆಂಬಲಿತ ಅಭ್ಯರ್ಥಿಯಾದ ರಾಜಮ್ಮ ಆಯ್ಕೆಯಾಗಿದ್ದಾರೆ.
ಸರ್ಕಾರದಿಂದ ಬರುವ ಅನುದಾನಗಳನ್ನು ಸದ್ಭಳಕೆ ಮಾಡಿಕೊಂಡು, ನರೇಗಾ ಯೋಜನೆಯ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಇದೊಂದು ಮಾದರಿ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಸಲಹೆ ನೀಡಿದರು. ನೂತನ ಅಧ್ಯಕ್ಷೆ ರಾಜಮ್ಮ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗುವುದು. ಇದನ್ನು ಮಾದರಿ ಗ್ರಾಮ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಸರ್ವ ಸದಸ್ಯರ ಬೆಂಬಲವನ್ನೂ ಪಡೆದುಕೊಳ್ಳಲಾಗುವುದು ಎಂದರು.
ಉಪಾಧ್ಯಕ್ಷ ಎಚ್. ಕುಮಾರ್, ಸದಸ್ಯರಾದ ಸುರೇಶ್, ಮುದ್ದುನಾಯಕ, ವೆಂಕಟಾಚಲ, ನಾಗ ರಾಜು, ಸ್ವಾಮಿ, ನಳಿನಾಕುಮಾರಿ, ಅನ್ನಪೂರ್ಣ, ನಿರ್ಮಲ, ರಾಣಿ, ಶೋಭಾ ಜಿಪಂ ಮಾಜಿ ಸದಸ್ಯ ಸಿದ್ದ ರಾಜು, ಮುಖಂಡರಾದ ನಾಗರಾಜು, ಪ್ರಭುಪ್ರಸಾದ್, ವಿಜಯಲಕ್ಷ್ಮೀನಂಜುಂಡ, ಸುಬ್ಬಣ್ಣ, ಶಂಕರಪ್ಪ ಇದ್ದರು.