ಜಗಳೂರು: 3.32 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಹೋಗುತ್ತಿದ್ದು, ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಗುರುಸಿದ್ದಪುರ ಗ್ರಾಮಸ್ಥರು ಆರೋಪಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ವತಿಯಿಂದ ಸಿಎಂಆರ್‌ಜಿವೈ 2.61 ಕೋಟಿ ಮತ್ತು 5054 ಬಜೆಟ್ ಯೋಜನೆಯಡಿ 1.16 ಕೋಟಿ ಸೇರಿದಂತೆ ಒಟ್ಟು 3 ಕೋಟಿ 32 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಹೊಸಕೆರೆ ಗ್ರಾಮದಿಂದ ಗುರುಸಿದ್ದಪುರ ಮಾರ್ಗವಾಗಿ ಬಸವನ ಕೋಟೆ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.
ಕಾಮಗಾರಿ ಪ್ರಾರಂಭವಾಗಿ ಕೆಲವು ದಿನಗಳಾಗಿದ್ದು, ಇನ್ನೂ ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ಆಗಲೇ ಗುರುಸಿದ್ದಪುರ ಗ್ರಾಮದ ಸಮೀಪ ರಸ್ತೆಗೆ ಹಾಕಿರುವ ಡಾಂಬರು ಕಿತ್ತು ಹೋಗಿದೆ. ಅಧಿ ಕಾರಿಗಳು ಮತ್ತು ಗುತ್ತಿಗೆದಾರರರನ್ನು ಕೇಳಿದರೆ ಇಲ್ಲ ಸಲ್ಲದ ಸಾಬೂಬು ಹೇಳುತ್ತಾರೆ ಎನ್ನುತ್ತಾರೆ ಗ್ರಾಮದ ಶಿವು.
ಸಂಸದರ ಮಾತಿಗೂ ಬೆಲೆಕೊಡದ ಗುತ್ತಿಗೆದಾರ: ಕಾಮಗಾರಿ ಭೂಮಿಪೂಜೆಗೆ ಬಂದಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್.ವಿ. ರಾಮಚಂದ್ರ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆ ದಾರರಿಗೆ ಸೂಚನೆ ನೀಡಿದ್ದರು. ಆದರೂ ಗುತ್ತಿಗೆದಾರರು ಗುಣಮಟ್ಟ ಕಾಪಾಡುವಲ್ಲಿ ವಿಫಲರಾಗಿದ್ದಾರೆ.
ರಸ್ತೆ ಪಕ್ಕದಲ್ಲಿ ಪೈಪ್‌ಲೈನ್ ಹೋಗಿರುವುದರಿಂದ ರಸ್ತೆ ಈ ರೀತಿಯಾಗಿದೆ. ಸರಿಪಡಿಸುವಂತೆ
ಗುತ್ತಿಗೆದಾರನಿಗೆ ಸೂಚನೆ ನೀಡಲಾಗುವುದು.
ರುದ್ರಪ್ಪ,
ಎಎಇ, ಲೋಕೋಪಯೋಗಿ ಇಲಾಖೆ.
ಪೈಪ್‌ಲೈನ್ ಹೋಗಿರುವುದರಿಂದ ಡಾಂಬರು ಕಿತ್ತು ಹೋಗುತ್ತಿದೆ. ಅದನ್ನು ಸರಿಪಡಿಸುತ್ತೇವೆ.
ರಾಜೇಂದ್ರ ಪ್ರಸಾದ್,
ಗುತ್ತಿಗೆದಾರ.