Advertisement

ಟೋಲ್ ಸಂಗ್ರಹಣೆಗೆ ಭಾರೀ ವಿರೋಧ

12:02 PM May 12, 2019 | Team Udayavani |

ಧಾರವಾಡ: ತಾಲೂಕಿನ ಮರೇವಾಡ ಗ್ರಾಮದ ಬಳಿ ನಿರ್ಮಿಸಿರುವ ಟೋಲ್ ಗೇಟ್ದಲ್ಲಿ ನಿತ್ಯ ಸಂಚರಿಸುವ ಗ್ರಾಮೀಣ ಕೆಎಸ್‌ಆರ್‌ಟಿಸಿ(ಸರಕಾರಿ) ಬಸ್‌ಗಳಿಂದ ಟೋಲ್ ಸಂಗ್ರಹಣೆಗೆ ವಿರೋಧ ವ್ಯಕ್ತವಾಗಿದ್ದು, ಇದರಿಂದ ಬಸ್‌ ದರ ಏರಿಸುವ ಮೂಲಕ ಸಾರಿಗೆ ಇಲಾಖೆ ಕೂಡ ಗ್ರಾಹಕರ ಮೇಲೆ ಹೊರೆ ಹಾಕಿದೆ.

Advertisement

ನಗರದಿಂದ ಕೇವಲ 10-12 ಕಿ.ಮೀ. ಅಂತರದಲ್ಲಿರುವ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ ಮುಂತಾದ ಸಮೀಪದ ಗ್ರಾಮಗಳಿಗೆ ಸಂಚರಿಸುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಟಿ ಬಸ್‌ಗಳಿಗೆ ಅಧಿಕ ಟೋಲ್ ಸಂಗ್ರಹಿಸಲಾಗುತ್ತಿದೆ. ಅಮ್ಮಿನಬಾವಿ ಗ್ರಾಮಕ್ಕೆ ನಿತ್ಯವೂ 4 ಬಸ್‌ಗಳ 44 ಟ್ರಿಪ್‌ಗ್ಳ ಸಂಚಾರದಲ್ಲಿ ಪ್ರತಿ ಟ್ರಿಪ್‌ಗೆ 115 ರೂ.ಗಳಂತೆ ಒಂದು ದಿನಕ್ಕೆ ಒಟ್ಟು ಸುಮಾರು 5060 ರೂ.ಗಳನ್ನು ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳ ಮೂಲಕವೇ ಟೋಲ್ ಸಂಗ್ರಹಿಸಲಾಗುತ್ತಿದೆ. ಇದರಂತೆ ಇತರೇ ಹಳ್ಳಿಗಳ ಬಸ್‌ಗಳಿಂದಲೂ ಅಧಿಕ ಟೋಲ್ ಸಂಗ್ರಹ ನಡೆದಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಹಣವನ್ನು ಪ್ರಯಾಣಿಕರ ಮೇಲೆಯೇ ವಿಧಿಸುತ್ತಿದ್ದು, ಈಗ ಧಾರವಾಡ-ಅಮ್ಮಿನಬಾವಿ ಮಧ್ಯೆ ಬಸ್‌ ಪ್ರಯಾಣ ದರವನ್ನು 15 ರೂ.ಗಳಿಂದ 18 ರೂ.ಗಳಿಗೆ ಹೆಚ್ಚಿಸಲಾಗಿದೆ.

ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ ಮುಂತಾದ ಸಮೀಪದ ಗ್ರಾಮಗಳಿಂದ ನಿತ್ಯವೂ ಸಂಚರಿಸುವ ಖಾಸಗಿ ಸ್ವಾಮ್ಯದ ಎಲ್ಲ ತರಹದ ವಾಹನಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪನಗರ (ಗ್ರಾಮೀಣ) ಬಸ್‌ಗಳಿಗೂ ಟೋಲ್ ಸಂಗ್ರಹದಿಂದ ವಿನಾಯತಿ ನೀಡಬೇಕೆಂಬುದು ಗ್ರಾಹಕರ ಆಗ್ರಹವಾಗಿದೆ.

ಧಾರವಾಡ-ಗೋವಾ ರಸ್ತೆಯಲ್ಲೂ ಟೋಲ್ ಗೇಟ್ ಇದ್ದು, ಅಲ್ಲಿಯ ರಸ್ತೆಯಲ್ಲಿ ತಾಲೂಕಿನ ಮುಗದ, ಮಂಡೀಹಾಳ ಮುಂತಾದ ಸಮೀಪದ ಗ್ರಾಮಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಮರೇವಾಡ ಟೋಲ್ ಗೇಟ್ದಲ್ಲೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡಬೇಕೆಂಬುದು ಈ ಭಾಗದ ಜನರ ಆಗ್ರಹವಾಗಿದೆ.

ತಾಪಂ ಸದಸ್ಯರ ವಿರೋಧ: ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅಮ್ಮಿನಬಾವಿ ತಾಪಂ ಸದಸ್ಯ ಸುರೇಂದ್ರ ದೇಸಾಯಿ, ಈ ಕುರಿತು ಶಾಸಕ ಅಮೃತ ದೇಸಾಯಿ, ಡಿಸಿ ದೀಪಾ ಚೋಳನ್‌ ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗೂ ಸಹ ಪ್ರತ್ಯೇಕವಾಗಿ ಪತ್ರ ಬರೆದು ಗಮನ ಸೆಳೆದಿದ್ದಾರೆ.

Advertisement

ಫೆ.25ರಂದು ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದಲ್ಲದೇ ಉಪ್ಪಿನಬೆಟಗೇರಿ, ಹಾರೋಬೆಳವಡಿ ಮುಂತಾದ ಹಳ್ಳಿಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡುವಂತೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳಿಂದ ನೂರಾರು ಕಟ್ಟಡ ಕಾರ್ಮಿಕರು ಹಾಗೂ ಇತರೇ ಕ್ಷೇತ್ರಗಳ ಬಡ ಕೂಲಿಕಾರರಿಗೆ 3 ರೂ. ಪ್ರಯಾಣ ದರದಲ್ಲಾದ ಹೆಚ್ಚಳದಿಂದ ದಿನಕ್ಕೆ 6 ರೂ. ಹೊರೆಯಾಗಿದ್ದು, ಕೂಡಲೇ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡುವಲ್ಲಿ ಹಾಗೂ ಬಸ್‌ ಪ್ರಯಾಣ ದರ ಇಳಿಕೆ ಮಾಡುವಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಆದೇಶ ನೀಡಬೇಕು.
•ಸುರೇಂದ್ರ ದೇಸಾಯಿ, ತಾಪಂ ಸದಸ್ಯ, ಅಮ್ಮಿನಬಾವಿ

Advertisement

Udayavani is now on Telegram. Click here to join our channel and stay updated with the latest news.

Next