Advertisement

ಸಿದ್ದು ವಿರುದ್ಧ ಮತ್ತೆ ಭೂಹಗರಣ ಆರೋಪ

12:02 PM Oct 08, 2017 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಷನ್‌ ಪ್ರಕರಣಗಳಿಗೆ ಮರುಜೀವ ನೀಡಲು ಆಡಳಿತಾರೂಢ ಕಾಂಗ್ರೆಸ್‌ ಮುತುವರ್ಜಿ ವಹಿಸುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ ಬಡಾವ ಣೆಗೆ ಸಂಬಂಧಿಸಿದಂತೆ ಈ ಹಿಂದೆ ಮಾಡಿದ್ದ ಭೂಹಗರಣ ಆರೋಪವನ್ನು ಬಿಜೆಪಿ ಮತ್ತೆ ಕೆದಕಿದೆ.
ಅಲ್ಲದೆ, ಈ ಪ್ರಕರಣ ಕುರಿತಂತೆ ಸಮಗ್ರ ದಾಖಲೆಗಳನ್ನು ಬಿಡುಗಡೆ ಮಾಡಿದೆ.

Advertisement

ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಹೆಬ್ಟಾಳ ಮೇಲುಸೇತುವೆಗೆ ಹೊಂದಿಕೊಂಡಂತಿರುವ 2 ಎಕರೆ 19.72 ಗುಂಟೆ ಜಮೀನನ್ನು ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ಸಿ.ಎಂ. ರಾಜೇಶ್‌ಗೌಡ ಪಾಲುದಾರರಾಗಿರುವ ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ಗೆ ಉಚಿತವಾಗಿ ನೀಡಿರುವ ಬಗ್ಗೆ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಹಾಗೂ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ದಾಖಲೆಗಳೊಂದಿಗೆ ಬಹಿರಂಗಪಡಿಸಿದ್ದಾರೆ. ಅದರಲ್ಲೂ ರಾಜೇಶ್‌ಗೌಡ ಅವರ ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸೊಲ್ಯೂಷನ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನಿರ್ದೇಶಕರಾದ ಮೇಲೆ (8.9.2014) ಈ ವ್ಯವಹಾರ ನಡೆದಿದೆ. ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ ನಿಂದ ಹಿಂದೆ ಭೂಸ್ವಾಧೀನ ಪಡಿಸಿಕೊಂಡು ಇತ್ಯರ್ಥವಾದ ಜಮೀನಿಗೆ ಬದಲಿಯಾಗಿ ಸುಮಾರು 200 ಕೋಟಿ ರೂ. ಮೌಲ್ಯದ ಜಮೀನನ್ನು ಉಚಿತವಾಗಿ ನೀಡಲಾಗಿದೆ. ಅಲ್ಲದೆ, ಮಾರ್ಗಸೂಚಿ ದರದನ್ವಯ ಅದರ ನೋಂದಣಿ ಮತ್ತು ಮುದ್ರಾಂಕ ಶುಲ್ಕ  ಸುಮಾರು 15 ಕೋಟಿ ರೂ.ಆದರೂ ಕೇವಲ 5 ಲಕ್ಷ ರೂ. ಮಾತ್ರ ಪಡೆದು ನೋಂದಣಿ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ
ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪುಟ್ಟಸ್ವಾಮಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಸ್ವಜನ ಪಕ್ಷಪಾತ ಎಸಗಿದ್ದು, ಅಧಿಕಾರ ದುರುಪಯೋಗಪಡಿಸಿ ಕೊಂಡಿದ್ದಾರೆ. ತಮ್ಮ ಪುತ್ರ ಪಾಲುದಾರ ನಾಗಿರುವ ಸಂಸ್ಥೆಯೊಂದರ ಪಾಲುದಾರನ ಮತ್ತೂಂದು ಸಂಸ್ಥೆಗೆ ಬೇನಾಮಿ ಆಸ್ತಿ ಮಾಡಿಕೊಡಲು ಸಹಕರಿಸಿರುವುದು ಸ್ಪಷ್ಟವಾಗಿದ್ದು, ಕೂಡಲೇ ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ಗೆ ನೀಡಿರುವ ಭೂಮಿಯನ್ನು ವಾಪಸ್‌ ಪಡೆದು ಅದನ್ನು ಅರ್ಕಾವತಿ ಬಡಾವಣೆ ಯಲ್ಲಿ ನಿವೇಶನಗಳಿಗಾಗಿ ಕಾಯುತ್ತಿರುವವರಿಗೆ
ಹಂಚಿಕೆ ಮಾಡಬೇಕು. ಇಲ್ಲದೆ, ಇದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ. ಏನಿದು ವಿವಾದ?: ಜಿ.ಕೆ.ಶ್ರೀನಿವಾಸ್‌, ಶಾಂತಾ ಮತ್ತು ಲೀಲಾ ಪಾಲುದಾರಿಕೆಯ ಕೈಗಾರಿಕಾ ಉದ್ದೇಶದ ಮೆ. ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ 1975ರ ಏ. 12ರಂದು ನೋಂದಣಿಯಾಗಿದೆ. ಇದಕ್ಕೆ ಸೇರಿದ 1,23,057 ಚದರ ಅಡಿ ಜಮೀನು ಸೇರಿ 26.25 ಎಕರೆ ಭೂಮಿಯನ್ನು 1977ರ ಜುಲೈ 15ರಂದು ಮಹಾಲಕ್ಷ್ಮಿ ಲೇಔಟ್‌ ಮುಂದುವರಿದ ಬಡಾವಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ 1987ರ, ಮಾ. 6ರಂದು ಪರಿಹಾರದ ಮೊತ್ತವಾಗಿ 29,09,335 ರೂ. ಮೊತ್ತದ ಚೆಕ್‌ನ್ನು ಸಿಟಿ ಸಿವಿಲ್‌  ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅಲ್ಲಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ.

2010ರ ಏ.30ರಂದು ಸಿ.ಎಂ.ರಾಜೇಶ್‌ಗೌಡ ಅವರು ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ನ ಪಾಲುದಾರರಾಗಿ ಸೇರಿಕೊಂಡಿದ್ದು, ಅದೇ ದಿನ ಸಂಸ್ಥೆಯನ್ನು ಲ್ಯಾಂಡ್‌ ಡೆವಲಪರ್ ಆ್ಯಂಡ್‌ ಬಿಲ್ಡರ್ ಆಗಿ ಪರಿವರ್ತನೆ ಮಾಡಲಾಗಿತ್ತು. ನಂತರ 2011ರ ಮಾ.4 ಮತ್ತು ಸೆ.15ರಂದು ರಾಜೇಶ್‌ಗೌಡ ಅವರು ಬದಲಿ ಜಮೀನಿಗಾಗಿ ಮುಖ್ಯಮಂತ್ರಿಗೆ ಅರ್ಜಿ
ಸಲ್ಲಿಸಿದ್ದರು. ಆದರೆ, ಈ ಸಂಸ್ಥೆಗೆ ಸೇರಿದ ಜಮೀನನ್ನು ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡು ಭೂಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿಯಾಗಿಟ್ಟ ಮೇಲೆ ಬದಲಿ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ಬಿಡಿಎ ಹೇಳಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌
ಪ್ರೈಸಸ್‌ಗೆ ಭೂಮಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಬದಲಿ ಭೂಮಿ ನೀಡಲು ಸಾಧ್ಯವಿಲ್ಲವೆಂದು ಬಿಡಿಎ ಕಾನೂನು ಕೋಶ ಸೇರಿ ಎಲ್ಲಾ ಅಧಿಕಾರಿಗಳು ತಿಳಿಸಿದ್ದರೂ ಅದೆಲ್ಲವನ್ನೂ ಬದಿಗಿಟ್ಟು ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಿವೃತ್ತ ನ್ಯಾ. ಡಾ.ಎ.ಆರ್‌.ಲಕ್ಷ್ಮಣನ್‌ ಅವರ ಅಭಿಪ್ರಾಯ ಪಡೆಯಲಾಗಿತ್ತು. ಅವರು,
ಬದಲಿ ಭೂಮಿ ನೀಡುವ ಬಗ್ಗೆ ಬಿಡಿಎ ಮುಕ್ತವಾಗಿದ್ದು, ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ವಹಿಸಬಹುದು ಎಂದು ಹೇಳಿದ್ದರು. ಅದಕ್ಕಾಗಿ ನ್ಯಾ. ಲಕ್ಷ್ಮಣನ್‌ ಅವರಿಗೆ 2.25 ಲಕ್ಷ ರೂ. ಶುಲ್ಕವನ್ನೂ ನೀಡಲಾಗಿತ್ತು. ಆದರೆ, ಈ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಶೇಷ ಭೂಸ್ವಾಧೀನಾಧಿಕಾರಿ, ಮತ್ತೂಮ್ಮೆ ಕಾನೂನು ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಹೇಳಿದ್ದರು. ಆದರೂ ಕಾನೂನು ಕೋಶ ಮತ್ತು ಭೂಸ್ವಾಧೀನಾಧಿಕಾರಿಗಳು ಮಂಡಿಸಿದ ಅಭಿಪ್ರಾಯ ಕಡೆಗಣಿಸಿ, ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ ಪ್ರೈಸಸ್‌ ಗೆ 1,23,057 ಚದರ ಅಡಿ ವಿಸ್ತೀರ್ಣದ ಬದಲಿ
ಜಮೀನು ನೀಡಲು ಬಿಡಿಎ ಆಯುಕ್ತರು ಅನುಮೋದಿಸಿದ್ದರು.

ಅದರಂತೆ ಶಾಂತಾ ಇಡಸ್ಟ್ರಿಯಲ್‌ ಎಂಟರ್‌ ಪ್ರೈಸಸ್‌ಗೆ 2015ರ ಫೆ. 24ರಂದು ಬಾಣಸವಾಡಿ ಗ್ರಾಮದಲ್ಲಿ 28 ಗುಂಟೆ ಮತ್ತು 2015ರ ಮೇ 30ರಂದು ಎಚ್‌ಬಿಆರ್‌ ಬಡಾವಣೆಯಲ್ಲಿ 32.67 ಗುಂಟೆ ಜಮೀನು ಹಂಚಿಕೆ ಮಾಡಿ ಶುದ್ಧ ಕ್ರಯಪತ್ರ ನೋಂದಾಯಿಸಲಾಗಿತ್ತು. ಆದರೆ, ಈ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದೆ ಎಂಬ ಮಾಹಿತಿ ತಿಳಿದು
ಶುದ್ಧ ಕ್ರಯಪತ್ರ ರದ್ದುಗೊಳಿಸಲಾಯಿತು. ನಂತರ ರಾಜೇಶ್‌ಗೌಡ ಮನವಿಯಂತೆ ಆಯುಕ್ತರು ನೀಡಿದ ಆದೇಶದ ಮೇಲೆ ಹೆಬ್ಟಾಳ ಮೇಲ್ಸೇತುವೆಗೆ ಹೊಂದಿಕೊಂಡಂತೆ ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಪೈಕಿ ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ಗೆ 10,091.91 ಚದರ ಮೀಟರ್‌ (2 ಎಕರೆ 19.72 ಗುಂಟೆ)
ಜಮೀನನ್ನು ಉಚಿತವಾಗಿ ಮಂಜೂರು ಮಾಡಲಾಗಿದೆ ಎಂಬುದು ಬಿಜೆಪಿಯ ಆರೋಪ.

Advertisement

ಬಿಜೆಪಿ ಹೇಳುವುದೇನು?
ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸಸ್‌ನಿಂದ ಮಹಾಲಕ್ಷ್ಮೀಪುರದಲ್ಲಿ 1977ರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಪ್ರಸ್ತುತ ಮಾರ್ಗಸೂಚಿ ದರ 67.61 ಕೋಟಿ ರೂ. ಆದರೆ, ಹೆಬ್ಟಾಳದಲ್ಲಿ ನೀಡಿರುವ ಬದಲಿ ನಿವೇಶನದ ಮಾರ್ಗಸೂಚಿ ದರ 131.19 ಕೋಟಿ ರೂ. ಹೀಗಿರುವಾಗ ಭೂಸ್ವಾಧೀನ ಪ್ರಕ್ರಿಯೆ ಇತ್ಯರ್ಥಗೊಂಡ ಬಳಿಕವೂ ದುಪ್ಪಟ್ಟು ಮೊತ್ತದ ಭೂಮಿಯನ್ನು ಉಚಿತವಾಗಿ ಬದಲಿ ನಿವೇಶನ ಎಂದು ನೀಡಲು ಕಾರಣವೇನು? ಜತೆಗೆ ಇದರ 
ನೋಂದಣಿಗಾಗಿ ಸುಮಾರು 15 ಕೋಟಿ ರೂ.ನೀಡಬೇಕಿತ್ತಾದರೂ ನೆಪ ಮಾತ್ರಕ್ಕೆ 5 ಲಕ್ಷ ರೂ. ಪಡೆದು ನೋಂದಣಿ ಮಾಡಿಕೊಡುವ ಮೂಲಕ ಸರ್ಕಾರಕ್ಕೆ 15 ಕೋಟಿ ರೂ. ಮುದ್ರಾಂಕ ಶುಲ್ಕ ನಷ್ಟ ಉಂಟಾಗುವಂತೆ ಮಾಡಲು ಕಾರಣವೇನು? ಎಂಬುದು ಬಿ.ಜೆ.ಪುಟ್ಟಸ್ವಾಮಿ ಅವರ ಪ್ರಶ್ನೆ. ಅಲ್ಲದೆ, ಈ ಪ್ರಕರಣದಲ್ಲಿ ಭೂಮಿ ಹಂಚಿಕೆ, ಕ್ರಯಪತ್ರ ನೀಡುವುದು ಹಾಗೂ ಖಾತಾ ನೋಂದಣಿ ಪ್ರಕ್ರಿಯೆಗಳು ಕೇವಲ 21 ದಿನಗಳಲ್ಲಿ ಪೂರ್ಣಗೊಂಡಿವೆ. ಜತೆಗೆ, ಇದು ವಸತಿ ಪ್ರದೇಶಕ್ಕೆ ಸೀಮಿತವಾದ ಜಾಗವಾಗಿದ್ದು, ಅದನ್ನು ಕೈಗಾರಿಕಾ ಉದ್ದೇಶ ಮತ್ತು ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ
ನೀಡಲಾಗಿದೆ. ಇದು ಕಾನೂನು ಬಾಹಿರ ಎಂಬುದು ಅವರ ಆರೋಪ. 

ಬೆದರಿಕೆ ಭಂಡತನದ ಪರಮಾವಧಿ: ಕೆಎಸ್‌ಈ
ಚಿತ್ರದುರ್ಗ: ಕಳ್ಳನಿಗೆ ಕಳ್ಳ ಎಂದರೆ ಸಿಟ್ಟು ಬರುತ್ತದೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಕಥೆಯೂ ಇದೇ ಆಗಿದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ, ಲೇವಡಿ ಮಾಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪುತ್ರ ಡಾ.ಯತೀಂದ್ರ ವಿಚಾರದಲ್ಲಿ ಬಿಜೆಪಿ
ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿರುವುದು ಭಂಡತನದ ಪರಮಾವಧಿ. ಒಂದೊಮ್ಮೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದರೆ ಅದು ಸಿದ್ದರಾಮಯ್ಯ ಅವರಿಗೇ ತಿರುಗು
ಬಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next