ಅಫಜಲಪುರ: ಭಾರಿ ಮಳೆಯಾಗಿ ಮುಂಗಾರು ಬಿತ್ತನೆ ಜೋರಾಗಿ ಬಂಪರ್ ಬೆಳೆ ಬೆಳೆಯಬಹುದು ಎಂದು ರೈತರು ಕನಸು ಹೊತ್ತು ಕೂತಿದ್ದರು. ಈಗ ರೈತರ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಮಳೆ ಕೊರತೆ ನಡುವೆಯೂ ಬಿತ್ತನೆಗೆ ಸಜ್ಜಾಗಿದ್ದಾನೆ.
ತಾಲೂಕಿನ ಕರ್ಜಗಿ, ಅಫಜಲಪುರ ಮತ್ತು ಅತನೂರ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತ ಮಳೆಯಾಗಿಲ್ಲ. ಬಿತ್ತನೆಗೆ ಬೇಕಾದಷ್ಟು ನೆಲ ಹಸಿಯಾಗಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಮುಂಗಾರು ಮಳೆ ಆರಂಭದಲ್ಲಿ ಅಬ್ಬರಿಸಿ ನಂತರ ತಣ್ಣಗಾಯಿತು. ಇಂದು ಮಳೆಯಾಗಬಹುದು ನಾಳೆ ಆಗಬಹುದು ಎಂದು ಆಶಾಭಾವನೆಯಿಂದ ಇದ್ದಾರೆ. ಆದರೆ ಮಳೆ ಬಾರದೆ ಕೇವಲ ಗಾಳಿ ಬೀಸುತ್ತಿದೆ. ಇದು ರೈತರ ಚಿಂತೆ ಹೆಚ್ಚಾಗಲು ಕಾರಣವಾಗಿದೆ.
ಮಳೆ ಬಾರದಿದ್ದರು ಸಹ ಅನೇಕ ಕಡೆ ರೈತರು ಬಿತ್ತನೆ ಮಾಡುತ್ತಿದ್ದಾರೆ. ಒಣ ಮಣ್ಣಲ್ಲಿಯೇ ಬಿತ್ತನೆ ಮಾಡಿ ಮಳೆರಾಯನ ದಾರಿ ಕಾಯುತ್ತಿದ್ದಾರೆ. ಹೊಲದಲ್ಲಿನ ಕಸ ಕಡ್ಡಿ ತೆಗೆಸಿ ಹೊಲಗಳನ್ನು ಚೊಕ್ಕವಾಗಿಟ್ಟುಕೊಳ್ಳುತ್ತಿದ್ದಾರೆ. ಬಾಡಿಗೆ ಯಂತ್ರಗಳು ದುಬಾರಿ: ಇನ್ನೂ ಜಮೀನುಗಳಲ್ಲಿ ಕೂಲಿ ಮಾಡಲು ಕಾರ್ಮಿಕರು ಸಿಗದ ಕಾರಣ ಯಂತ್ರಗಳಿಂದ ಬಿತ್ತನೆ ಮಾಡಲಾಗುತ್ತಿದೆ. ಟ್ರ್ಯಾಕ್ಟರ್ ಮೂಲಕ ಬಿತ್ತನೆಗೆ ಭಾರಿ ಬಾಡಿಗೆ ನೀಡಬೇಕಾದ ಅನಿವಾರ್ಯತೆ ಬಂದಿದೆ.
ಬಿತ್ತನೆ ಕ್ಷೇತ್ರ: ತಾಲೂಕಿನ ಕರ್ಜಗಿ, ಗೊಬ್ಬೂರ, ಅತನೂರ ಹಾಗೂ ಅಫಜಲಪುರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 1,30,000 ಹೆಕ್ಟೇರ್ ಭೂ ಪ್ರದೇಶವಿದ್ದು ಈ ಪೈಕಿ ಮುಂಗಾರು ಬಿತ್ತನೆ ಕ್ಷೇತ್ರ 96,350 ಹೆಕ್ಟೇರ್ ಇದೆ. ಕಳೆದ ವರ್ಷ ಮುಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರ 73,879 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ 22,471 ಹೆಕ್ಟೇರ್ ಬಿತ್ತನೆಯಾಗಬಹುದು ಎಂದು ಕೃಷಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಇದರಲ್ಲಿ 16,450 ಹೆಕ್ಟೇರ್ ನೀರಾವರಿ, 79,900 ಹೆಕ್ಟೇರ್ ಮಳೆಯಾಶ್ರಿತ ಬೇಸಾಯ ಭೂಮಿ ಇದೆ. ಏಕದಳ ಕ್ಷೇತ್ರ 3015 ಹೆಕ್ಟರ್, ದ್ವಿದಳ 67,635 ಹೆಕ್ಟರ್, ಎಣ್ಣೆ ಕಾಳು 3490 ಹೆಕ್ಟೇರ್,
ವಾಣಿಜ್ಯ ಬೆಳೆಗಳ ಕ್ಷೇತ್ರ 22,210 ಹೆಕ್ಟೇರ್ ಬಿತ್ತನೆ ಕ್ಷೇತ್ರವಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ಅಲ್ಪಸ್ವಲ್ಪ ಭೂಮಿ ಹಸಿಯಾಗಿದೆ. ಬಿತ್ತನೆಗೆ ಬೇಕಾದಷ್ಟು ಹಸಿಯಾಗಿಲ್ಲ. ಆದರೂ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಅನೇಕ ಕಡೆ ಹಸಿ ಕೊರತೆ ಇದ್ದರೂ ಬಿತ್ತನೆ ಮಾಡುತ್ತಿದ್ದಾರೆ.
ದಾಸ್ತಾನು: ಏಕದಳ ಧಾನ್ಯಗಳಾದ ಮೆಕ್ಕೆಜೋಳ 50.8 ಕ್ವಿಂಟಲ್, ಸಜ್ಜೆ 15.6 ಕ್ವಿಂಟಲ್, ತೊಗರಿ 120.4 ಕ್ವಿಂಟಲ್, ಉದ್ದು 14.4 ಕ್ವಿಂಟಲ್, ಹೆಸರು 23 ಕ್ವಿಂಟಲ್, ಸೋಯಾಬೀನ್ 266.6 ಕ್ವಿಂಟಲ್, ಸೂರ್ಯಕಾಂತಿ 24.3 ಕ್ವಿಂಟಲ್ ದಾಸ್ತಾನು ಬಂದಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಎರೆಹುಳು ಗೊಬ್ಬರ, ಝಿಪ್ಸ್‌ಂ, ಝೀಂಕ್ ದಾಸ್ತಾನು ಸಹ ಇದ್ದು, ರಿಯಾಯಿತಿ ದರದಲ್ಲಿ ರೈತರು ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ಬಾರಿಯೂ ಮುಂಗಾರು ಮಳೆ ಕೊರತೆ ಕಾಡುತ್ತಿದೆ. ಸರ್ಕಾರ ರೈತರಿಗೆ ಉಚಿತ ಬಿತ್ತನೆ ಬೀಜ, ಗೊಬ್ಬರ ನೀಡುವುದರ ಜತೆಗೆ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರೈತರ ಹಿತಕ್ಕಾಗಿ ಯೋಜನೆ ರೂಪಿಸಿದರೆ ಸಾಲದು ಅವುಗಳು ಸಮರ್ಪಕವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು.
ಶ್ರೀಮಂತ ಬಿರಾದಾರ, ಪ್ರಾಂತ ರೈತ ಸಂಘದ ಅಧ್ಯಕ್ಷ ಅಫಜಲಪುರ
ಮಲ್ಲಿಕಾರ್ಜುನ ಹಿರೇಮಠ