Advertisement
ಗಡಿ ಭಾಗದ ನದಿಗಳ ನೀರಿನ ಹರಿವು ದಿಢೀರ್ ಹೆಚ್ಚಳಗೊಂಡಿದ್ದರಿಂದ ಚಿಕ್ಕೋಡಿ ತಾಲೂಕಿನ ಮೂರು ಸೇತುವೆಗಳು ರವಿವಾರ ಮುಳುಗಡೆಯಾಗಿ ಸಂಚಾರ ಕಡಿತಗೊಂಡಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ, ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ ಸೇತುವೆ ರವಿವಾರ ನಸುಕಿನ ಜಾವ ಮುಳುಗಡೆಗೊಂಡಿವೆ.
Related Articles
Advertisement
ಮಹಾರಾಷ್ಟ್ರ ರಾಜಾಪೂರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 81,286 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ದೂದಗಂಗಾ ಮತ್ತು ವೇದಗಂಗಾ ನದಿಗಳಿಂದ 11,968 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 93,254 ಕ್ಯೂಸೆಕ್ ನೀರು ಹರಿದು ಹಿಪ್ಪರಗಿ ಬ್ಯಾರೇಜ್‌ಗೆ ಹೋಗುತ್ತಿದೆ. ಹಿಪ್ಪರಗಿ ಬ್ಯಾರೇಜ್‌ದಿಂದ 8 ಗೇಟ್‌ಗಳ ಮೂಲಕ 65 ಸಾವಿರ ಕ್ಯೂಸೆಕ್ ನೀರು ಹರಿದು ಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ಡಾ|ಸಂತೋಷ ಬಿರಾದಾರ ಮಾಹಿತಿ ನೀಡಿದರು.
ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ಪ್ರದೇಶಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದೆ.