Advertisement

ಮಾಡಾವು 110 ಕೆ.ವಿ. ಸಬ್‌ಸ್ಟೇಷನ್‌ ಕಾಮಗಾರಿಗೆ ಮತ್ತೆ ವಿಘ್ನ

10:32 AM Aug 11, 2018 | |

ಸವಣೂರು : ಒಂಬತ್ತು ವರ್ಷಗಳ ಹಿಂದೆ ಆರಂಭವಾದ ಮಾಡಾವು 110 ಕೆ.ವಿ. ವಿದ್ಯುತ್‌ ಸಬ್‌ಸ್ಟೇಷನ್‌ಗೆ ಮತ್ತೆ ತೊಂದರೆ ಎದುರಾಗಿದೆ. ಮೂರು ಮಂದಿ ಪಟ್ಟಾ ಭೂಮಿಯ ಮಾಲಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರಿಂದಾಗಿ ಕಾಮಗಾರಿಗೆ ಹಿನ್ನಡೆಯುಂಟಾಗಿದೆ.

Advertisement

ನೆಟ್ಲಮುಟ್ನೂರಿನಿಂದ ಕಬಕ ಮೂಲಕ ಮಾಡಾವಿಗೆ 110 ಕೆ.ವಿ. ವಿದ್ಯುತ್‌ ಸರಬರಾಜು ಮಾಡುವ ಮಾಡಾವು ಸಬ್‌ ಸ್ಟೇಷನ್‌ ಕಾಮಗಾರಿಯು 2009ರಲ್ಲಿ ಪ್ರಾರಂಭಗೊಂಡಿತ್ತು. 9 ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ವಿದ್ಯುತ್‌ ಲೈನ್‌ ಎಳೆಯಲಾಗುತ್ತಿದ್ದು, ತಿಂಗಳ ಹಿಂದೆ ಮಾಡಾವು ಬೊಳಿಕಲದಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ಸಬ್‌ಸ್ಟೇಷನ್‌ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ ಭೂಮಾಲಕರು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಕಾಮಗಾರಿಗೆ ತೊಂದರೆಯುಂಟಾಗಿದೆ.

ಹೀಗಿದೆ ಯೋಜನೆ
ನೆಟ್ಲಮುಟ್ನೂರಿನಿಂದ ಮಾಡಾವಿಗೆ 110 ಕೆ.ವಿ. ವಿದ್ಯುತ್‌ ಲೈನ್‌ ಎಳೆಯುವ ಮೂಲಕ ಮಾಡಾವಿನಲ್ಲಿ ಸಬ್‌ಸ್ಟೇಷನ್‌ ಆರಂಭವಾಗಬೇಕಿದೆ. ಮಾಡಾವಿನಿಂದ ಸುಳ್ಯಕ್ಕೆ- ಕಡಬ, ಆಲಂಕಾರಿಗೆ ವಿದ್ಯುತ್‌ ಸರಬರಾಜು ಮಾಡುವ ಬೃಹತ್‌ ಯೋಜನೆ ಇದಾಗಿದೆ. ಕಬಕದಿಂದ ಮಾಡಾವು ತನಕ ಒಟ್ಟು 27 ಕಿ.ಮೀ. ದೂರ ಲೈನ್‌ ಎಳೆಯಬೇಕಾಗುತ್ತದೆ. ನಿರ್ಮಾಣವಾಗಬೇಕಿದ್ದ ಒಟ್ಟು 107 ವಿದ್ಯುತ್‌ ಲೈನ್‌ ಟವರ್‌ಗಳ ಪೈಕಿ 104 ಟವರ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 14 ಕಿ.ಮೀ. ತಂತಿ ಎಳೆಯುವ ಕೆಲಸವೂ ಆಗಿದೆ. ಮಾಡಾವಿನಲ್ಲಿ ಸಬ್‌ ಸ್ಟೇಷನ್‌ ಆರಂಭವಾದಲ್ಲಿ ಸುಳ್ಯ, ಆಲಂಕಾರು, ಕುಂಬ್ರ ಮತ್ತು ಕಡಬ ಭಾಗದಲ್ಲಿ ಅವಕಾಶ ದೊರೆಯುತ್ತದೆ. 

ಆನಂತರ ದಿನದ 24 ಗಂಟೆಯೂ ವಿದ್ಯುತ್‌ ಪೂರೈಸಲು ಇದು ಸಹಕಾರಿಯಾಗಲಿದೆ. ಯೋಜನೆಯ ನಿಧಾನಗತಿಯಿಂದಾಗಿ ಮೊದಲು ಗುತ್ತಿಗೆ ಪಡೆದುಕೊಂಡವರು ಯೋಜನೆಯಿಂದ ಹಿಂದೆ ಸರಿದಿದ್ದಾರೆ. ಈಗ ಮಂಗಳೂರಿನ ರೂಪಾ ಎಲೆಕ್ಟ್ರಿಕಲ್‌ ಸಂಸ್ಥೆಯವರು ಕಾಮಗಾರಿ ಗುತ್ತಿಗೆಯನ್ನು ವಹಿಸಿಕೊಂಡಿದ್ದಾರೆ.

ಸೂಕ್ತ ಪರಿಹಾರ ನೀಡಿ
ವಿದ್ಯುತ್‌ ಟವರ್‌ ಮತ್ತು ಲೈನ್‌ ಹಾದುಹೋಗುವಲ್ಲಿ ಪಟ್ಟಾ ಭೂಮಿ, ಸಾಮಾಜಿಕ ಅರಣ್ಯ ಮತ್ತು ಅರಣ್ಯ ಪ್ರದೇಶಗಳು ಒಳಪಡುತ್ತದೆ. ಈಗಾಗಲೇ ಕಬಕದಿಂದ 14 ಕಿ.ಮೀ. ಲೈನ್‌ ಎಳೆಯಲಾಗಿದೆ. ಈ ದಾರಿಯಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರವನ್ನೂ ನೀಡಲಾಗಿದೆ. 110 ಕೆ.ವಿ. ಲೈನ್‌ ಆಗಿರುವ ಕಾರಣ ಬೃಹತ್‌ ಟವರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಂದೊಂದು ಟವರ್‌ಗೆ 7ರಿಂದ 10 ಸೆಂಟ್ಸ್‌ ಭೂಮಿ ಬಳಕೆಯಾಗುತ್ತದೆ. ಲೈನ್‌ ನ ಅಡಿಯಲ್ಲಿ ಎರಡೂ ಬದಿಯಲ್ಲಿ 11 ಮೀಟರ್‌ ಭೂಮಿಯಲ್ಲಿ ಮನೆ ಅಥವಾ ಎತ್ತರಕ್ಕೆ ಬೆಳೆಯುವ ಯಾವುದೇ ಕೃಷಿ, ತೋಟವನ್ನು ಬೆಳೆಸುವಂತಿಲ್ಲ. ಸಾಮಾಜಿಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಹಾದು ಹೋಗುವ ಭೂಮಿಯಲ್ಲೂ ಆ ಇಲಾಖೆಗೆ ಸೂಕ್ತ ಪರಿಹಾರವನ್ನು ಕೆಪಿಟಿಸಿಎಲ್‌ ನೀಡಿದೆ. ಯೋಜನೆಗೆ ಬಳಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಅಥವಾ ನಮ್ಮ ಪಟ್ಟಾ ಜಾಗದಲ್ಲಿ ತಂತಿ ಎಳೆಯಬಾರದು ಎಂದು ಮೂವರು ಭೂಮಾಲಕರು ಹೈಕೋರ್ಟಿನ ಮೊರೆ ಹೋಗಿದ್ದಾರೆ.

Advertisement

20 ಎಕರೆ ಭೂಮಿ
ಯೋಜನೆಯ ಮುಂದುವರಿದ ಭಾಗವಾಗಿ ಮಾಡಾವಿನಿಂದ ಸುಳ್ಯಕ್ಕೆ ಮತ್ತು ಆಲಂಕಾರಿಗೆ ವಿದ್ಯುತ್‌ ಲೈನ್‌ ಹಾದು ಹೋಗಬೇಕಿದೆ. ಈ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಸುಳ್ಯ ಲೈನ್‌ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ವಲಯಕ್ಕೆ ಸೇರಿದ ಭೂಮಿ ಇರುವ ಕಾರಣ ಇಲಾಖೆಯ ತಕರಾರು ಇದೆ. ಈ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳು ಮಾತುಕತೆ ನಡೆಸಿ ಚಿತ್ರದುರ್ಗದಲ್ಲಿ 20 ಎಕರೆ ಭೂಮಿಯನ್ನು ಸಾಮಾಜಿಕ ಅರಣ್ಯ ಇಲಾಖೆಗೆ ನೀಡಿದ್ದಾರೆ. ಅದಕ್ಕೆ ಅರಣ್ಯ ಇಲಾಖೆ ಒಪ್ಪಿಗೆಯನ್ನು ಸೂಚಿಸಿದೆ ಎಂದು ಕೆಪಿಟಿಸಿಎಲ್‌ ಚೀಫ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಪಿ.ಡಿ.ಬಿ. ರಾವ್‌ ತಿಳಿಸಿದ್ದಾರೆ.

ಸರ್ವೆ ನಡೆಸಲು ಬಿಡುತ್ತಿಲ್ಲ
ಮಾಡಾವಿನಿಂದ ಆಲಂಕಾರಿಗೆ ಲೈನ್‌ ಎಳೆಯುವ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಕೆಲವು ತಿಂಗಳ ಹಿಂದೆ ಸರ್ವೆ ನಡೆಸಲು ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಅಲ್ಲಿನ ಕೆಲ ಗ್ರಾಮಸ್ಥರು ಸರ್ವೆ ನಡೆಸಲು ಬಿಟ್ಟಿಲ್ಲ. ಲೈನ್‌ ಮತ್ತು ಟವರ್‌ ನಿರ್ಮಾಣ ಕಾಮಗಾರಿಯಿಂದ ನಾವು ಮನೆ ಮತ್ತು ಕೃಷಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಕಾರಣ ಮುಂದಿಟ್ಟು ಕಾಮಗಾರಿಗೆ ವಿರೋಧವನ್ನು ಮಾಡುತ್ತಿದ್ದಾರೆ. ಕುದ್ಮಾರು-ಬೆಳಂದೂರು ಭಾಗದಲ್ಲಿ ಅತೀ ಹೆಚ್ಚು ವಿರೋಧವನ್ನು ಕೆಪಿಟಿಸಿಎಲ್‌ ಎದುರಿಸಬೇಕಾಗಿ ಬಂದಿದೆ.

ಏನು ಪ್ರಯೋಜನ?
ಈ ಯೋಜನೆ ಯಶಸ್ವಿಯಾದಲ್ಲಿ ಮಾಡಾವು, ಸುಳ್ಯ, ಆಲಂಕಾರು, ಕಡಬ ಮತ್ತು ಕುಂಬ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ವಿದ್ಯುತ್‌ ವಿತರಣೆಯಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಲೋ ವೋಲ್ಟೇಜ್‌ ಸಮಸ್ಯೆ ಇದೆ. ಅದಕ್ಕೆ ಪರಿಹಾರ ಕಾಣಲಿದೆ. ದಿನದ 24 ಗಂಟೆಯೂ ವಿದ್ಯುತ್‌ ನೀಡುವಲ್ಲಿ ಸಹಕಾರಿಯಾಗಲಿದೆ.

ಮಾತುಕತೆ ನಡೆಸುತ್ತೇನೆ
ಯೋಜನೆಗಳಿಂದ ಕೆಲವು ಮಂದಿಗೆ ತೊಂದರೆಯಾಗಬಹುದು. ಆದರೆ ಇದರಿಂದ ಹೆಚ್ಚಿನ ಜನರಿಗೆ ಪ್ರಯೋಜನವಾಗಲಿದೆ. ದಾವೆ ಹೂಡಿರುವವರ ಜತೆ ಮಾತುಕತೆ ನಡೆಸಿ ರಾಜಿಯಲ್ಲಿ ಮುಗಿಸುವ ಯತ್ನವನ್ನು ಮಾಡುತ್ತೇನೆ. ಅಭಿವೃದ್ಧಿಗೆ ಜನ ಸಹಕರಿಸಬೇಕೆಂದು ನನ್ನ ಮನವಿ.
 - ಎಸ್‌. ಅಂಗಾರ ಶಾಸಕ 

ಪೂರ್ಣಗೊಳ್ಳಲಿದೆ
ಜನರ ಸಹಕಾರ ಬೇಕು. ಈಗಾಗಲೇ ಲೈನ್‌ ಮತ್ತು ಟವರ್‌ ನಿರ್ಮಿಸುವ ವೇಳೆ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ನೀಡಲಾಗಿದೆ. ಮೂರು ಮಂದಿ ಹೈಕೋರ್ಟಿನಲ್ಲಿ ದಾವೆ ಹೂಡಿರುವ ಕಾರಣ ಕಾಮಗಾರಿಗೆ ಸ್ವಲ್ಪ ಹಿನ್ನಡೆಯಾಗಿದೆ. ನ್ಯಾಯಾಲಯದ ತೀರ್ಪು ಏನು ಬರುತ್ತದೋ ಗೊತ್ತಿಲ್ಲ. ಅಂತೂ ಕಾಮಗಾರಿ ವಿಳಂಬವಾಗಿಯಾದರೂ ಪೂರ್ಣಗೊಳ್ಳಲಿದೆ.
– ಪಿ.ಡಿ.ಬಿ. ರಾವ್‌
ಸೀನಿಯರ್‌ ಎಂಜನಿಯರ್‌, ಕೆಪಿಟಿಸಿಎಲ್‌ ಮಂಗಳೂರು

 ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next