Advertisement

ಸಚಿವ ಸ್ಥಾನಕ್ಕೆ ತೃಪ್ತಿ ಪಟ್ಟ ನಿರಾಣಿ|ಸವದಿ-ದೊಡ್ಡನಗೌಡ-ಚರಂತಿಮಠ ಬೆಂಬಲಿಗರಲ್ಲಿ ನಿರಾಶೆ  

04:13 PM Aug 05, 2021 | Team Udayavani |

ವರದಿ: ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಬೀಳಗಿಯ ಮುರುಗೇಶ ನಿರಾಣಿ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುರುಗೇಶ ನಿರಾಣಿ ಅವರಿಗೆ ಈ ಬಾರಿ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂಬ ದೊಡ್ಡ ನಿರೀಕ್ಷೆ ಅವರ ಬೆಂಬಲಿಗರಲ್ಲಿತ್ತು. ಬಹುತೇಕ ಉತ್ತರ ಕರ್ನಾಟಕವೂ ಸೇರಿದಂತೆ ವಿವಿಧ ಜಿಲ್ಲೆಗಳ ಪಕ್ಷದ ಶಾಸಕರೂ ಅವರ ಪರವಾಗಿ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಕೊನೆ ಗಳಿಗೆಯಲ್ಲಿ ಬಿಜೆಪಿಯ ಶ್ರೀಕೃಷ್ಣನ ಚಾಣಾಕ್ಷತನ ರಾಜಕೀಯದಲ್ಲಿ ಉತ್ತರ ಕರ್ನಾಟಕದವರೇ ಆಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅದೃಷ್ಟ ಒಲಿದಿದೆ.

ನಿರಾಣಿಗೆ 3ನೇ ಬಾರಿ ಸಚಿವ ಸ್ಥಾನ: ಸಿಕ್ಕ ಅವಕಾಶ ಅತ್ಯಂತ ಕ್ರಿಯಾಶೀಲವಾಗಿ ಸದ್ಬಳಕೆ ಮಾಡಿಕೊಳ್ಳುವ ಮುರುಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ದೊರೆತಿದೆ. ಈ ಹಿಂದೆ ಬೃಹತ್‌ ಮತ್ತು ಕೈಗಾರಿಕೆ ಸಚಿವರಾಗಿ, ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಅವರು, ಪಕ್ಷದ ಕೇಂದ್ರ ನಾಯಕರ ಮಟ್ಟದಲ್ಲೂ ಪ್ರಭಾವ ಹೊಂದಿದ್ದಾರೆ. ಪ್ರಬಲ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಹಲವು ಬಾರಿ ದೆಹಲಿ ನಾಯಕರು ಸ್ವತಃ ನಿರಾಣಿ ಅವರನ್ನು ಕರೆಸಿ ಮಾತುಕತೆ ಕೂಡ ಮಾಡಿದ್ದರು. ಕೊನೆ ಗಳಿಗೆಯಲ್ಲಿ ರಾಜ್ಯದ ದೊರೆಯ ಸ್ಥಾನ ತಪ್ಪಿದ್ದರ ಕಾರಣ ನಿಗೂಢವಾಗಿ ಉಳಿದಿಲ್ಲ. ಆದರೂ, ನಿರಾಣಿ ಅಸಮಾಧಾನಗೊಳ್ಳದೇ ಪಕ್ಷದ ನಾಯಕರು ವಹಿಸುವ ಜವಾಬ್ದಾರಿ ನಿಭಾಯಿಸುವುದಾಗಿ ಹೇಳುವ ಮೂಲಕ ಪಕ್ಷನಿಷ್ಠೆ ಪ್ರದರ್ಶಿಸಿದ್ದರು. ಅವರ ಆ ನಿಷ್ಠೆಯ ಈ ಬಾರಿಯೂ ಸಚಿವರಾಗಿ ಆಯ್ಕೆಗೊಳ್ಳಲು ಕಾರಣ ಎಂಬ ಮಾತು ಕೇಳಿ ಬಂದಿದೆ. ನಿರಾಣಿ ಇದೀಗ 3ನೇ ಬಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಕಾರಜೋಳ ಸೌಮ್ಯ ಸ್ವಭಾವದ ಚಾಣಾಕ್ಷ ನಾಯಕ: ಕಳೆದ 2006 ರಿಂದ 13ರ ಅವಧಿ, 2019ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಈ ವರೆಗೆ ಅವರು ನಾಲ್ಕು ಬಾರಿ ಸಚಿವರಾಗಿದ್ದಾರೆ. ನಿಕಟಪೂರ್ವ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಆಗಿಯೂ ಪ್ರಮುಖ ಇಲಾಖೆಗಳ ಜವಾಬ್ದಾರಿ ನಿಭಾಯಿಸಿ ಕಾರಜೋಳ, ಸೌಮ್ಯ ಸ್ವಭಾವದ ಚಾಣಾಕ್ಷ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ಎಲ್ಲ ಪಕ್ಷ, ಎಲ್ಲ ಸಮಾಜದ ವ್ಯಕ್ತಿಗಳೊಂದಿಗೆ ಅವಿನಾಭಾವ ಸಂಪರ್ಕ ಹೊಂದಿರುವ ಕಾರಜೋಳರು, ಯಾವುದೇ ಪ್ರಭಾವ-ಒತ್ತಡ ಇಲ್ಲದೇ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಅವರ ಬೆಂಬಲಿಗರ ವಿಶ್ವಾಸದ ಮಾತು.

Advertisement

ಮೂವರು ಬೆಂಬಲಿಗರಿಗೆ ನಿರಾಶೆ: ಈ ಬಾರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಬಹುತೇಕ ಹೊಸಬರಿಂದ ಕೂಡಿರುತ್ತದೆ. ಅದರಲ್ಲಿ ನಮ್ಮ ಸಾಹೇಬರಿಗೂ ಅವಕಾಶ ದೊರೆಯಲಿದೆ ಎಂಬ ವಿಶ್ವಾಸ ತೇರದಾಳದ ಸಿದ್ದು ಸವದಿ, ಹುನಗುಂದದ ದೊಡ್ಡನಗೌಡ ಪಾಟೀಲ ಹಾಗೂ ಬಾಗಲಕೋಟೆಯ ಶಾಸಕ ಡಾ| ವೀರಣ್ಣ ಚರಂತಿಮಠ ಅವರ ಬೆಂಬಲಿಗರಲ್ಲಿತ್ತು. ಬುಧವಾರ ಸಚಿವ ಸಂಪುಟ ರಚನೆಯ ಕಸರತ್ತು ನಡೆದಾಗಲೂ ಈ ಮೂವರಲ್ಲಿ ಇಬ್ಬರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಅದರಲ್ಲೂ ತಾವಾಯಿತು, ತಮ್ಮ ಕ್ಷೇತ್ರದ ಕೆಲಸವಾಯಿತು ಎಂದು ಸ್ವ ಕ್ಷೇತ್ರದಲ್ಲೇ ಉಳಿದಿರುವ ಶಾಸಕ ಡಾ| ಚರಂತಿಮಠ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಬಹುತೇಕರಲ್ಲಿತ್ತು. ಮಧ್ಯಾಹ್ನ ನೂತನ ಸಚಿವರ ಪಟ್ಟಿ ಸಿದ್ಧಗೊಳ್ಳುತ್ತಲೇ ಈ ಮೂವರು ನಾಯಕರ ಬೆಂಬಲಿಗರಲ್ಲಿ ಕೊಂಚ ನಿರಾಶೆ ಮೂಡಿಸಿದ್ದು ಸತ್ಯ. ಆದರೆ, ಅವರೆಲ್ಲ ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎಂಬ ನೀತಿಯಲ್ಲಿದ್ದಾರೆ.

ಬೆಂಗಳೂರಿಗೂ ಹೋಗಿತ್ತು ನಿಯೋಗ: ಈ ಬಾರಿ ಸಚಿವ ಸ್ಥಾನ ದೊರೆಯುತ್ತದೆ ಎಂಬ ಅತಿಯಾದ ಭರವಸೆ ಹೊಂದಿದ್ದ ತೇರದಾಳ ಸಿದ್ದು ಸವದಿ ಹಾಗೂ ಹುನಗುಂದದ ದೊಡ್ಡನಗೌಡ ಪಾಟೀಲರ ಬೆಂಬಲಿಗರ ತಂಡ ಬೆಂಗಳೂರಿಗೆ ನಿಯೋಗದ ಮೂಲಕ ತೆರಳಿ ಸ್ವತಃ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸಚಿವ ಸ್ಥಾನಕ್ಕಾಗಿ ಮನವಿ ಮಾಡಿತ್ತು. ಈ ನಿಯೋಗಕ್ಕೆ ಬಿಎಸ್‌ವೈ ಯಾವುದೇ ಸ್ಪಷ್ಟ ಭರವಸೆ ನೀಡದಿದ್ದರೂ, ಅವಕಾಶ ದೊರೆಯುವ ಆಶಾಭಾವನೆ ಈ ಇಬ್ಬರು ಶಾಸಕರ ಬೆಂಬಲಿಗರಲ್ಲಿತ್ತು. ಅಲ್ಲದೇ ಪದೇ ಪದೇ ಸಚಿವ ಸ್ಥಾನ ನೀಡಿದವರಿಗೇ ಕೊಡುವ ಬದಲು ಹೊಸಬರಿಗೆ ಅವಕಾಶ ಕೊಡಲಿ. ನಾವೂ ನಮ್ಮ ಸಾಮರ್ಥ್ಯ, ಆಡಳಿತಾತ್ಮಕ ಅನುಭವದಿಂದ ಕೆಲಸ ಮಾಡುತ್ತೇವೆ. ನಮ್ಮ ಕಾರ್ಯವೈಖರಿಯೂ ನೋಡಲಿ ಎಂದು ಶಾಸಕ ಸಿದ್ದು ಸವದಿ ಹೇಳಿಕೊಂಡಿದ್ದರು. ಆದರೆ, ಅವರಿಗೂ ಅವಕಾಶ ಕೈ ತಪ್ಪಿದೆ. ಒಟ್ಟಾರೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಿಲ್ಲೆಯ ಗೋವಿಂದ ಕಾರಜೋಳ ಮತ್ತು ಮುರುಗೇಶ ನಿರಾಣಿ ಸ್ಥಾನ ಪಡೆದಿದ್ದಾರೆ. ಇದೀಗ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಆಗಲಿದ್ದಾರೆ? ಎಂಬ ಕುತೂಹಲ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next