Advertisement

ಮತ್ತೆ ಲಾಕ್‌ಡೌನ್‌ ಕೂಗು : 10 ಸಾವಿರ ಮೀರಿದ ಸೋಂಕು ಪೀಡಿತರ ಸಂಖ್ಯೆ

02:57 AM Jun 25, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆಯ ಬಳಿಕ ಕೋವಿಡ್ 19 ಸೋಂಕು ಪೀಡಿತರ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್‌ ಸೂಕ್ತ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

Advertisement

ಗುರುವಾರದ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನವಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೋವಿಡ್ 19 ಬಾಧಿತರ ಸಂಖ್ಯೆ 10,118ಕ್ಕೆ ಏರಿದ್ದು ಸಾವಿನ ಸಂಖ್ಯೆಯೂ 165ಕ್ಕೆ ತಲುಪಿದೆ.

ಬುಧವಾರ ಪ್ರಕರಣಗಳ ಸಂಖ್ಯೆ 397, ಸಾವಿನ ಸಂಖ್ಯೆ 15 ವರದಿಯಾಗಿರುವುದು ಸರಕಾರಕ್ಕೂ ಆತಂಕ ಮೂಡಿಸಿದೆ.

ಹಲವು ಕಾರಣಗಳು
ಈ ಮಧ್ಯೆ ಪೊಲೀಸ್‌ ಠಾಣೆಗಳು, ಮಾರುಕಟ್ಟೆ, ವ್ಯಾಪಾರಿ ಸ್ಥಳಗಳು ಸೀಲ್‌ಡೌನ್‌ ಆಗಿರುವುದು; ಕೆಪಿಸಿಸಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕರೂ ಆದ ಡಿ.ಕೆ. ಶಿವಕುಮಾರ್‌ ಸಭೆ ನಡೆಸಿ ಕನಕಪುರ ಸ್ವಯಂ ಲಾಕ್‌ಡೌನ್‌ ತೀರ್ಮಾನ ಕೈಗೊಂಡಿದ್ದು, ಬೆಂಗಳೂರು 20 ದಿನ ಲಾಕ್‌ಡೌನ್‌ಗೆ ಸಲಹೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಇದೀಗ ರಾಮನಗರ, ಚನ್ನಪಟ್ಟಣ ಲಾಕ್‌ಡೌನ್‌ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು, ಆಡಳಿತಾರೂಢ ಬಿಜೆಪಿಯ ಮತ್ತಷ್ಟು ಶಾಸಕರು ಇದೇ ಅಭಿಪ್ರಾಯ ಹೊಂದಿರುವುದು ಸರಕಾರ ಚಿಂತಿಸುವಂತೆ ಮಾಡಿದೆ.

ಎಸೆಸೆಲ್ಸಿ ಪರೀಕ್ಷೆ ಬಳಿಕ?
ಗುರುವಾರ ಎಸೆಸೆಲ್ಸಿ ಪರೀಕ್ಷೆ ಪ್ರಾರಂಭವಾಗುವುದರಿಂದ ಪರೀಕ್ಷೆ ಮುಗಿಯುವವರೆಗೆ ಲಾಕ್‌ಡೌನ್‌ ಸಾಧ್ಯವಾಗದು. ಅನಂತರ ಪರಿಸ್ಥಿತಿ ನೋಡಿ ತೀರ್ಮಾನಿಸಬಹುದು. ಆದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾ ಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.

Advertisement

ಜು. 31ರ ವರೆಗೆ ಲಾಕ್‌ ಡೌನ್‌
ಪಶ್ಚಿಮ ಬಂಗಾಲದಲ್ಲಿ ಜು. 31ರ ವರೆಗೆ ಲಾಕ್‌ ಡೌನ್‌ ವಿಸ್ತರಿಸಲಾಗಿದೆ. ಬುಧವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಸೋಂಕು ಹೆಚ್ಚುತ್ತಲೇ ಇದ್ದು, ಈ ನಿಟ್ಟಿನಲ್ಲಿ ಮತ್ತೆ ಲಾಕ್‌ ಡೌನ್‌ ಘೋಷಣೆ ಮಾಡಲಾಗಿದೆ.

ಸಂಪುಟದ ಸಚಿವರಲ್ಲೇ ಭಿನ್ನರಾಗ
ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ಸಚಿವರ ನಡುವೆ ಗೊಂದಲ ಉಂಟಾಗಿದೆ. ಕೆಲವರು ಬೇಕು ಎಂದರೆ ಮತ್ತೆ ಕೆಲವರು ಬೇಡ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಿಂದ ಜನರನ್ನು ರಾಜ್ಯದೊಳಗೆ ಆಗಮಿಸಲು ಅವಕಾಶ ಕೊಟ್ಟಿದ್ದರಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಕೋವಿಡ್ 19 ಸೋಂಕಿತರ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂದು ಕೆಲವು ಹಿರಿಯ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಎಸೆಸೆಲ್ಸಿ ಪರೀಕ್ಷೆ ಆರಂಭವಾಗಿರುವುದರಿಂದ ಪರೀಕ್ಷೆ ಮುಗಿಯುವ ಜುಲೈ 4ರವರೆಗೆ ಲಾಕ್‌ಡೌನ್‌ ಸಾಧ್ಯತೆ ಕಡಿಮೆ. ಅನಂತರವೇ ಲಾಕ್‌ಡೌನ್‌ ಮಾಡುವ ಬಗ್ಗೆ ಕೆಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಒಂದೇ ದಿನ ದಾಖಲೆಯ 15 ಸಾವು
ಈ ಹಿಂದೆ ಒಂದೇ ದಿನ 12 ಮಂದಿ ಸೋಂಕು ಬಾಧಿತರ ಸಾವು ವರದಿಯಾಗಿತ್ತು. ಆದರೆ ಬುಧವಾರ ಒಂದೇ ದಿನ ದಾಖಲೆಯ 15 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲರೂ ವಿಷಮ ಶೀತ ಜ್ವರ, ತೀವ್ರ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿ 5, ಬಳ್ಳಾರಿಯಲ್ಲಿ 4, ಕಲಬುರಗಿ- ರಾಮನಗರದಲ್ಲಿ ತಲಾ 2, ತುಮಕೂರು ಮತ್ತು ಮಂಗಳೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಉಳ್ಳಾಲ ಎಸ್‌ಐಗೆ ಸೋಂಕು
ಉಳ್ಳಾಲ ಪೊಲೀಸ್‌ ಠಾಣೆಯ ಎಸ್‌ಐ ಅವರಿಗೂ ಸೋಂಕು ದೃಢವಾಗುವುದರೊಂದಿಗೆ ಬುಧವಾರ ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ತಲಾ 14, ದ.ಕ.ದಲ್ಲಿ 12, ಕಾಸರಗೋಡಿನಲ್ಲಿ 6 ಪ್ರಕರಣ ವರದಿಯಾಗಿವೆ.

6 ಸಾವಿರ ದಾಟಿದ ಚೇತರಿಕೆ
ಆತಂಕಕಾರಿ ಬೆಳವಣಿಗೆ ಎಂಬಂತೆ ರಾಜ್ಯದಲ್ಲಿ ಕೋವಿಡ್ 19 ಬಾಧಿತರ ಸಂಖ್ಯೆ 10,118ಕ್ಕೆ ಏರಿಕೆಯಾಗಿದೆ. ಈ ಮೂಲಕ ಐದು ಡಿಜಿಟ್‌ ಅಂಕಿ ಪಡೆದ 12ನೇ ರಾಜ್ಯ ಕರ್ನಾಟಕವಾಗಿದೆ. ಒಂದು ಸಮಾಧಾನಕರ ಸಂಗತಿಯೆಂದರೆ ಗುಣಮುಖರಾದವರ ಸಂಖ್ಯೆಯೂ 6,153ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 3,797 ಸಕ್ರಿಯ ಪ್ರಕರಣಗಳು ಇವೆ. ಸಾವನ್ನಪ್ಪಿದವರ ಸಂಖ್ಯೆ 165ಕ್ಕೆ ಏರಿದೆ. ಅದರಲ್ಲೂ ಕಳೆದ ತಿಂಗಳಲ್ಲೇ 8 ಸಾವಿರ ಪ್ರಕರಣಗಳು ಕಾಣಿಸಿಕೊಂಡಿವೆ. ಜತೆಗೆ 122 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಒಂದೇ ದಿನ 15 ಮಂದಿ ಸಾವನ್ನಪ್ಪಿದ್ದಾರೆ. ಜತೆಗೆ 397 ಜನರಿಗೆ ವೈರಸ್‌ ತಗಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು 173 ಮಂದಿ ಸೋಂಕು ಪೀಡಿತರಾಗಿದ್ದಾರೆ.

ಜಾಗತಿಕ ಸೋಂಕು ಪೀಡಿತರ ಸಂಖ್ಯೆ : 94,30,755

ಒಟ್ಟು ಸಾವು (ಜಗತ್ತು): 4,81,662

ಭಾರತ (ಸೋಂಕು) : 4,73,170

ಸಾವು (ಭಾರತ): 15,276

ಕರ್ನಾಟಕ (ಸೋಂಕು): 10,118

ಚೇತರಿಕೆ : 2,71,364

Advertisement

Udayavani is now on Telegram. Click here to join our channel and stay updated with the latest news.

Next