ಮಿತ್ರ ನಿರ್ಮಿಸಿ, ನಟಿಸಿರುವ “ರಾಗ’ ಚಿತ್ರಕ್ಕೆ ಎರಡನೇ ವಾರದಲ್ಲಿ ಚಿತ್ರಮಂದಿರಗಳ ಸಮಸ್ಯೆ ಎದುರಾಗಿತ್ತು. ಇದರಿಂದ ಮಿತ್ರ ಕೊಂಚ ವಿಚಲಿತರಾಗಿದ್ದರು. ಅಷ್ಟೇ ಅಲ್ಲ, ಒಳ್ಳೇ ಸಿನಿಮಾಗೆ ಚಿತ್ರಮಂದಿರದ ಕೊರತೆ ಉಂಟು ಮಾಡಿದ್ದರಿಂದ ತಮ್ಮ ಅಳಲು ತೋಡಿಕೊಂಡಿದ್ದರು. ಆ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್ ನವರು ಒಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, “ರಾಗ’ಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕರೆ ಮುಂದುವರೆಸಬೇಕು ಎಂದು ಮನವಿ ಮಾಡಿದ್ದರು ಮಿತ್ರ.
ಅವರ ಮನವಿಗೆ ಸ್ಪಂದಿಸಿ, ಮಲ್ಟಿಪ್ಲೆಕ್ಸ್ ನಲ್ಲಿ ಶುಕ್ರವಾರ ಒಂದೊಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಯಾವಾಗ, ಜನರು “ರಾಗ’ ಚಿತ್ರ ನೋಡಿ ಬೆಂಬಲಿಸಿದರೋ, ಶುಕ್ರವಾರ, ಶನಿವಾರ, ಭಾನುವಾರ ಮತ್ತು ಸೋಮವಾರದವರೆಗೆ “ರಾಗ’ಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ಹಾಗಾಗಿ “ರಾಗ’ ಈಗ ಮಲ್ಟಿಪ್ಲೆಕ್ಸ್ ಗಳಲ್ಲಿ ನಾಲ್ಕು ಪ್ರದರ್ಶನಗಳನ್ನು ಕಾಣುತ್ತಿದೆ.
ಕಳೆದ ಶುಕ್ರವಾರ ಮೈಸೂರು ರಸ್ತೆ ಹಾಗೂ ಓಲ್ಡ್ ಮಡ್ರಾಸ್ ರಸ್ತೆಯಲ್ಲಿರುವ ಗೋಪಾಲನ್‌ಮಾಲ್‌ನಲ್ಲಿ ಪ್ರದರ್ಶನ ಕಂಡಿರುವ “ರಾಗ’ ಶೇ. 75, ಶನಿವಾರ ಶೇ.85 ರಷ್ಟು ಜನ ಕಂಡರೆ, ಭಾನುವಾರ ಹೌಸ್‌ಫುಲ್ ಆಗಿದೆ. ಜತೆಗೆ ರಾಕ್‌ಲೈನ್ ಮಾಲ್‌ನಲ್ಲೂ ಶೇ.90 ರಷ್ಟು ಜನ ವೀಕ್ಷಿಸಿದ್ದಾರೆ. ಇನ್ನು, ಓರಿಯನ್‌ಮಾಲ್‌ನ ಪಿವಿಆರ್‌ನಲ್ಲಿ ರಾತ್ರಿ 10 ಗಂಟೆಯ ಪ್ರದರ್ಶನ ಮಾತ್ರ ಇತ್ತು. ಶೇ.50 ರಷ್ಟು ಜನ ಕಂಡಿದ್ದ ಪಿವಿಆರ್ ಭಾನುವಾರಕ್ಕೆ ಶೇ.85 ರಷ್ಟಾಗಿದೆ.
ಸೋಮವಾರ ಶೇ.90 ಆಗಿದೆ. ಇನ್ನು, ಐನಾಕ್ಸ್ ನಲ್ಲಿ ಒಂದು ಸಿನಿಮಾ ಎತ್ತಿದರೆ ಪುನಃ ಹಾಕಿದ ಉದಾಹರಣೆಗಳಿಲ್ಲ. ಆದರೆ, ಐನಾಕ್ಸ್ ಕರೆದು ಮತ್ತೂಂದು ಪ್ರದರ್ಶನಕ್ಕೆ ಅವಕಾಶ ಕೊಟ್ಟಿದ್ದರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದು “ರಾಗ’ಕ್ಕೆ ಪ್ಲಸ್ ಆಗಿದೆಯಂತೆ. ಈಗ ವಿತರಕ ಜಯಣ್ಣ ಅವರು, ರಾಜ್ಯಾದ್ಯಂತ ಕೆಲ ಚಿತ್ರಮಂದಿರಗಳಲ್ಲಿ “ರಾಗ’ಕ್ಕೆ ಜಾಗ ಮಾಡಿಕೊಟ್ಟರೆ, ಖಂಡಿತವಾಗಿಯೂ “ರಾಗ’ ಚಿತ್ರಕ್ಕೆ ಉತ್ತಮ ಮೆಚ್ಚುಗೆ ಸಿಗಲಿದೆ ಎನ್ನುತ್ತಾರೆ ಮಿತ್ರ.