Advertisement

ಬಳ್ಳಾರಿಯಲ್ಲಿ ಮತ್ತೆ ಡಿಕೆಶಿ, ರಾಮುಲು ಅಸ್ತಿತ್ವದ ಕಾದಾಟ

11:15 PM Apr 15, 2019 | Lakshmi GovindaRaju |

ಬಳ್ಳಾರಿ: ಗಣಿನಾಡು, ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಸಿಲು ಏರಿದಂತೆ ಚುನಾವಣಾ ಕಾವು ಸಹ ಏರುತ್ತಿದೆ. ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳಿದ್ದರೂ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌-ಬಿಜೆಪಿ ನಡುವೆಯೇ ನೇರ ಫೈಟ್‌ ಏರ್ಪಟ್ಟಿದೆ.

Advertisement

ಕಣ ಚಿತ್ರಣ: ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಕೆಲ ತಿಂಗಳುಗಳ ಹಿಂದೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕಂಡ ಅಬ್ಬರ, ಆರ್ಭಟ, ವಾಕ್ಸಮರ ಈ ಸಾರ್ವತ್ರಿಕ ಚುನಾವಣೆಯಲ್ಲಿ ಅಷ್ಟಾಗಿ ಕಾಣುತ್ತಿಲ್ಲ.

ಕಳೆದ ಉಪಚುನಾವಣೆಯಲ್ಲಿ 2.43 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ, ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ವಲಸೆ ಬಂದ ಜಿಲ್ಲೆಯವರೇ ಆದ ವೈ.ದೇವೇಂದ್ರಪ್ಪ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ.

ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕಡೆ ಕಾಂಗ್ರೆಸ್‌ ಶಾಸಕರಿರುವುದು ಉಗ್ರಪ್ಪಗೆ ಒಂದೆಡೆ ಸಮಾಧಾನ ಮೂಡಿಸಿದರೆ, ಸಚಿವ ಸ್ಥಾನಕ್ಕಾಗಿ ಮುನಿಸಿಕೊಂಡಿದ್ದ ಶಾಸಕರಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ ಚುನಾವಣೆಯಲ್ಲಿ ಪರಿಣಾಮ ಬೀರುವುದೇ ಎಂಬ ಆತಂಕವೂ ಕಾಡುತ್ತಿದೆ.

ಶಾಸಕರ ನಡುವಿನ ಗಲಾಟೆಯಿಂದಾಗಿ ಜೈಲು ಸೇರಿರುವ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಅವರನ್ನು ಹೊರ ತರುವಂತೆ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರಲ್ಲಿನ ಮುಸುಕಿನ ಗುದ್ದಾಟ ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಅಲ್ಲದೆ, ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ಮೇಲಿನ ದಾಳಿಯಿಂದಾಗಿ ಮೊದಲ ಬಾರಿಗೆ ಹಕ್ಕು ಚಲಾಯಿಸುತ್ತಿರುವ ಯುವ ಮತದಾರರು ಮೋದಿ ಬೆನ್ನಿಗೆ ನಿಂತಿದ್ದು, ಬಿಜೆಪಿಗೆ ಗೆಲುವಿನ ದಡ ಸುಲಭವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ

Advertisement

ಶ್ರೀರಾಮುಲು-ಡಿಕೆಶಿ ನಡುವೆ ಫೈಟ್‌: ಕಳೆದ ಉಪಚುನಾವಣೆಯಂತೆ ಸಾರ್ವತ್ರಿಕ ಚುನಾವಣೆಯಲ್ಲೂ ಅಭ್ಯರ್ಥಿಗಳ ಜಿದ್ದಾಜಿದ್ದಿಗಿಂತ, ಚುನಾವಣಾ ಸಾರಥ್ಯ ವಹಿಸಿಕೊಂಡ ಬಿಜೆಪಿಯ ಶಾಸಕ ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನಡುವಿನ ಕದನ ಎಂದೇ ಕ್ಷೇತ್ರದಲ್ಲಿ ಬಿಂಬಿತಗೊಂಡಿದೆ.

ಉಪಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿರುವ ಶ್ರೀರಾಮುಲುಗೆ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರನ್ನು ಗೆಲ್ಲಿಸುವ ಅನಿವಾರ್ಯತೆ ಇದೆ. ಉಪಚುನಾವಣೆಯ ಗೆಲುವಿನಿಂದ ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸು ರೂಪಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್‌, ಈ ಚುನಾವಣೆಯಲ್ಲೂ ಉಗ್ರಪ್ಪ ಗೆದ್ದರೆ ಜಿಲ್ಲೆಯ ಮೇಲೆ ತಮಗಿರುವ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ನಿರ್ಣಾಯಕ ಅಂಶ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವೀರಶೈವ ಲಿಂಗಾಯತ, ಕುರುಬ, ಅಲ್ಪಸಂಖ್ಯಾತ ಮತಗಳು ಪ್ರಮುಖವಾಗಿವೆ. ಪರಿಶಿಷ್ಟ ಜಾತಿ, ಕುರುಬ, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ ಕಡೆ ವಾಲುವ ಸಾಧ್ಯತೆಯಿದೆ.

ಪರಿಶಿಷ್ಟ ಪಂಗಡದ ಮತಗಳು ಚದುರುವ ಸಾಧ್ಯತೆಯಿದ್ದು, ಶ್ರೀರಾಮುಲು ವರ್ಚಸ್ಸಿನಿಂದಾಗಿ ಒಂದಷ್ಟು ಹೆಚ್ಚು ಮತಗಳು ಬಿಜೆಪಿ ಕಡೆ ವಾಲುವ ನಿರೀಕ್ಷೆಯಿದೆ. ಇನ್ನು ಬ್ರಾಹ್ಮಣ, ವೈಶ್ಯ ಸೇರಿದಂತೆ ಇತರ ಬಹುತೇಕ ಸಮುದಾಯಗಳು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

ಕ್ಷೇತ್ರವ್ಯಾಪ್ತಿ: ಕ್ಷೇತ್ರವ್ಯಾಪ್ತಿಯಲ್ಲಿ ಹಗರಿಬೊಮ್ಮನಹಳ್ಳಿ, ಹಡಗಲಿ, ಬಳ್ಳಾರಿ ನಗರ, ಕೂಡ್ಲಿಗಿ, ಕಂಪ್ಲಿ, ಬಳ್ಳಾರಿ, ಸಂಡೂರು, ವಿಜಯನಗರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಮತದಾರರು
ಒಟ್ಟು – 19,34,669
ಮಹಿಳೆಯರು – 9,71,459
ಪುರುಷರು – 9,62,950
ಇತರರು – 260

ಜಾತಿವಾರು ಲೆಕ್ಕಾಚಾರ
ಪರಿಶಿಷ್ಟ ಪಂಗಡ – 3,30,000
ವೀರಶೈವ ಲಿಂಗಾಯತ – 3,80,000
ಪರಿಶಿಷ್ಟ ಜಾತಿ – 3,50,000
ಕುರುಬರು – 1,90,000
ಮುಸ್ಲಿಂ – 2,00,000
ಗಂಗಾಮತ – 45,000
ಉಪ್ಪಾರ – 28,000
ಬಲಿಜ – 40,000
ನೇಕಾರ – 30,000
ಯಾದವ – 35,000
ಮಡಿವಾಳ – 30,000
ಬ್ರಾಹ್ಮಣ – 25,000
ರೆಡ್ಡಿ – 33,000
ಕಮ್ಮಾ – 28,000
ವೈಶ್ಯ – 25,000
ಇತರರು – 2,00,000

* ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next