ಕಿನ್ನಿಗೋಳಿ: ತಾಂತ್ರಿ ಕಾರಣಗಳಿಂದ ಹಿನ್ನಡೆಯಾಗಿದ್ದ 14. 8 ಕೋಟಿ ರೂ. ವೆಚ್ಚದ ಕಿನ್ನಿಗೋಳಿಯಿಂದ ಮೂಲ್ಕಿ- ಕಾರ್ನಾಡು ತನಕದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಈಗ ಮತ್ತೆ ಆರಂಭಗೊಂಡಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಿನ್ನಿಗೋಳಿ ಮೂರು ಕಾವೇರಿಯ ಮಾರಿ ಗುಡಿಯಿಂದ ಕಾರ್ನಾಡು ಜಂಕ್ಷನ್ ತನಕ ಹೆದ್ದಾರಿಯ ಎರಡು ಬದಿಗಳಲ್ಲಿ ಈಗ ಇದ್ದ 5.5 ಡಾಮರು ರಸ್ತೆಯನ್ನು ಏಳು ಮೀಟರ್ ವಿಸ್ತರಿಸುವ ಕೆಲಸ ನಡೆಯುತ್ತಿದೆ.
ಚರಂಡಿ ಕೆಲಸ ಪ್ರಗತಿಯಲ್ಲಿ
ಕಿನ್ನಿಗೋಳಿ ಚರ್ಚ್ ಸಮೀಪದ ಕೆಳಭಾಗದಿಂದ ಭಟ್ಟಕೋಡಿಯ ತನಕ ಸುಮಾರು 500 ಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಿ ಕಾಂಕ್ರೀಟ್ ಚಪ್ಪಡಿ ಹಾಸಿ ಫುಟ್‌ಪಾತ್ ನಿರ್ಮಾಣ ಕೆಲಸ ಭಾಗಶಃ ಮುಗಿದಿದೆ. ಬಸ್ ನಿಲ್ದಾಣ ತಿರುಗುವ ಹಾಗೂ ಭಟ್ಟಕೋಡಿಯ ತನಕ ಕೆಲಸ ಆಗಬೇಕಾಗಿದೆ. ಕಿನ್ನಿಗೋಳಿ ಮುಖ್ಯ ಪೇಟೆಯು ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ.
ಮುಖ್ಯ ರಸ್ತೆಯ ಎರಡು ಬದಿಯ ಇಕ್ಕೆಲಗಳನ್ನು ಎರಡು ಗ್ರಾಮ ಪಂಚಾಯತ್ ಹಂಚಿಕೊಂಡಿದೆ. ಟ್ರಾಫಿಕ್‌ಗೆ ಪೂರಕವಾಗಿ ಪೇಟೆ ಭಾಗದಲ್ಲಿ ಸುಗಮ ಸಂಚಾರಕ್ಕೆ ಎರಡು ಅಥವಾ ಮೂರು ಕಡೆಗಳ ಬಸ್ ಬೇ ನಿರ್ಮಾಣ ಮಾಡುವ ಉದ್ದೇಶ ಇದೆ. ಕಾರ್ನಾಡು, ಎಸ್. ಕೋಡಿ ಜಂಕ್ಷನ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್‌ಬೇ ನಿರ್ಮಾಣ ಮಾಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ವಿದ್ಯುತ್ ಕಂಬಗಳ ತೆರವು
ಮೂರು ಕಾವೇರಿಯಿಂದ ಕಾರ್ನಾಡು ತನಕ ರಸ್ತೆಯ ಅಂಚಿನಲ್ಲಿದ್ದ 160 ವಿದ್ಯುತ್ ಕಂಬಗಳ ತೆರವು, 60 ಮರಗಳಿಗೆ ಕೊಡಲಿಏಟು ಬೀಳಲಿದೆ. 100 ಕ್ಕೂ ಮಿಕ್ಕಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಸರ್ವೇ ನಡೆದಿದೆ. ಅದರಲ್ಲಿ ಕೆಲವು ಮರಗಳು ರಸ್ತೆಯ ಅಂಚಿನಲ್ಲಿದ್ದು ಅಂತಹ ಮರಗಳನ್ನು ಕಡಿಯಬೇಕಾಗಿದೆ.