ಇದು ಜಾನಪದದಲ್ಲಿ ಬರುವ ತಾಯಿಯೊಬ್ಬಳು ಮನದಾಳದಿಂದ ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿಕೊಡುವಾಗಿನ ಹಿತನುಡಿ. ಹೆಣ್ಣು ಹುಟ್ಟಿದೊಡನೆ ಪ್ರತಿಯೊಬ್ಬ ಪಾಲಕರ ಮನದಲ್ಲೂ ಮಗಳ ಭವಿಷ್ಯದ ಬದುಕಿನ ಬಗೆಗೆ ಯೋಚನೆ ಆರಂಭವಾಗುತ್ತದೆ. ಅಂದರೆ ಮಗಳು ದೊಡ್ಡವಳಾದೊಡನೆ ಅವಳಿಗೆ ತಕ್ಕವನಾದ ಒಳ್ಳೆಯ ಗಂಡನನ್ನು , ಗಂಡನ ಮನೆಯನ್ನು ಸೇರಿ ನೆಮ್ಮದಿಯಿಂದ ಬದುಕಿದರೆ ಅಷ್ಟೇ ಸಾಕು ಎಂಬ ಮಹದಾಸೆ. ಅಂತೆಯೇ ಅವಳನ್ನು ಬಾಲ್ಯದಿಂದಲೇ ಪ್ರೀತಿ-ಮಮತೆಯ ಜತೆ ಎಚ್ಚರಿಕೆಯಿಂದ ನೈತಿಕತೆಯ ಚೌಕಟ್ಟಿನಲ್ಲಿ ಬೆಳೆಸಬೇಕಾದದ್ದು ಹೆತ್ತವರ ಜವಾಬ್ದಾರಿಯೂ ಹೌದು. ಹೀಗೆ ಹಿರಿಯರ ಮಾರ್ಗದರ್ಶನದಲ್ಲಿ ಸರಿಯಾದ ಹೆಜ್ಜೆಯಿಟ್ಟು ಬಾಲ್ಯ ಕಳೆದು, ತಾರುಣ್ಯದ ಉಗಮವಾಗಿ ಮುದ್ದಾದ ಮೊಗ್ಗೆ ಅರೆಬಿರಿಯುವ ಮೋಹಕತೆಯೊಂದಿಗೆ ಮಗಳು ಬೆಳೆದು ನಿಂತಾಗ ಇನ್ನಿಷ್ಟು ಜವಾಬ್ದಾರಿಯಿಂದ ಮುದ್ದು ಮಗಳಿಗೆ ಒಪ್ಪುವ ವರಾನ್ವೇಷಣೆಯಲ್ಲಿ ಪೋಷಕರು ತೊಡಗುತ್ತಾರೆ! ಇದು ಸಾಮಾನ್ಯವಾಗಿ ಹೆಣ್ಣು ಹೆತ್ತ ಎಲ್ಲ ತಂದೆ-ತಾಯಂದಿರ ಪ್ರಮುಖ ಕರ್ತವ್ಯವಾಗಿ ಅಂದಿನಿಂದ ಇಂದಿನವರೆಗೂ ಬೆಳೆದುಬಂದ ಒಂದು ಕೌಟುಂಬಿಕ ಪರಿಸ್ಥಿತಿ!
Advertisement
ಅಂತೂ ಕುಲ-ಗೋತ್ರಗಳ ಹೊಂದಾಣಿಕೆಯೊಂದಿಗೆ ಎರಡೂ ಕಡೆಯಿಂದ ಜಾತಕ ಕೂಡಿಬರುತ್ತದೆಂದು ಜ್ಯೋತಿಷಿಗಳು, ಪುರೋಹಿತರು ಒಪ್ಪಿಗೆ ಕೊಟ್ಟಾಗ ಗಂಡು-ಹೆಣ್ಣಿನ ಕಡೆಯವರೆಲ್ಲರೂ ಮದುವೆಯ ಏರ್ಪಾಡಿನಲ್ಲಿ ಬಿಡುವಿಲ್ಲದವರಾಗುತ್ತಾರೆ. ನಂತರ ತಮ್ಮ ಶಕಾöನುಸಾರ ಶುಭಮುಹೂರ್ತದಲ್ಲಿ ಬಂಧುಬಾಂಧವರೆಲ್ಲರ ಸಮ್ಮುಖದಲ್ಲಿ ಮದುವೆಯೂ ನಡೆಯುತ್ತದೆ. ಆಮೇಲೆ ಹೆಣ್ಣನ್ನು ಗಂಡಿಗೆ ಒಪ್ಪಿಸಿ ಗಂಡನಮನೆಗೆ ಕಳಿಸಿಕೊಡುವಾಗಿನ ದುಃಖ ಹೇಳತೀರದು. “ಮನೆಯಂಗಳದಲ್ಲಿ ಬೆಳೆದ ಸುಂದರ ಹೂವನ್ನು ಮತ್ತೂಬ್ಬರಿಗೊಪ್ಪಿಸುವಾಗಿನ’ ನೋವನ್ನು ಅನೇಕ ಕವಿವಾಣಿಯಲ್ಲಿಯೂ ಗಮನಿಸಬಹುದು. ಹೆಣ್ಣಿಗೂ ಅಷ್ಟೇ ಅಪ್ಪ-ಅಮ್ಮನನ್ನು, ಒಡಹುಟ್ಟಿದವರನ್ನು ಅಗಲಿ ಇನ್ನೊಂದು ಮನೆಯನ್ನು ತನ್ನ ಬಾಳಸಂಗಾತಿಯೊಡನೆ ಪ್ರವೇಶಿಸಲು ಹೊರಟಾಗಿನ ಹೆಣ್ಣುಮಗಳ ದುಃಖ ಅನಿವಾರ್ಯತೆಯೊಂದಿಗೆ ಬೆಸೆದುಕೊಂಡು ಉಮ್ಮಳಿಸುತ್ತದೆ.
Related Articles
ಇತ್ತೀಚೆಗೆ ತನ್ನ ಮದುವೆಗೆ ಕರೆಯಲು ತನ್ನ ತಾಯಿಯೊಂದಿಗೆ ಬಂದ ನನ್ನ ಪ್ರೀತಿಯ ರಾಧಿಕಾ ಹೇಳುತ್ತಿದ್ದುದನ್ನು ಕೇಳಿ ತುಂಬಾ ಖುಷಿಯಾಯಿತು. “”ಆಂಟೀ, ನನಗೆ ಅತ್ತೆ-ಮಾವ ಎಲ್ಲರೂ ಇದ್ದಾರೆ.
Advertisement
ನಾನು ಬಯಸಿದ್ದೂ ಅದನ್ನೇ. ಅತ್ತೆ ಇದ್ದ ಮನೆಯೇ ನನಗೆ ಗಂಡನ ಮನೆಯಾಗಿ ಸಿಗಲಪ್ಪಾ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ” ಎಂದಾಗ ಅವಳ ಒಳ್ಳೆಯತನ ಅರಿವಾಗಿ ಅವಳನ್ನು ಅಪ್ಪಿ ಮುದ್ದಾಡುವಷ್ಟು ಪ್ರೀತಿ ಉಕ್ಕಿತು. ಅಂತೆಯೇ ನಮ್ಮೂರಿನ ಶಶಿಕಲಾ, ಅಂತೂ ಯಾವಾಗಲೂ “”ನನ್ನ ಅತ್ತೆ ಎಷ್ಟು ಒಳ್ಳೆಯವರು ಗೊತ್ತಾ? ನನ್ನ ತಾಯಿಯಂತೆ ನನ್ನನ್ನು ಪ್ರೀತಿಸುತ್ತಾರೆ” ಎಂದು ಹೇಳುವುದನ್ನು ಎಂದೂ ಮರೆಯುವುದಿಲ್ಲ! ಪಕ್ಕದ ಮನೆಯ ಶ್ಯಾಮ್ ಭಟ್ಟರ ತಾಯಿಯಂತೂ “”ನನ್ನ ಸೊಸೆಯೆಂದರೆ ನಮ್ಮ ಮನೆಯ ಮಹಾಲಕ್ಷ್ಮಿ. ಅವಳು ಹೊರಗೂ ದುಡಿಯುತ್ತ ಮನೆಕೆಲಸವನ್ನೂ ಪೂರೈಸಿ ನನ್ನ ಆರೋಗ್ಯದ ಬಗೆಗೂ ಜಾಗ್ರತೆ ವಹಿಸುತ್ತಾಳೆ” ಎಂದು ಸೊಸೆಯನ್ನು ಅವರು ಹೊಗಳಿಕೊಳ್ಳದ ದಿನವೇ ಇಲ್ಲ.ಇನ್ನು ನನ್ನ ಮಗಳ ಅತ್ತೆಯಂತೂ ನನಗಿಂತಲೂ ಹೆಚ್ಚಾಗಿ ಸೊಸೆಯನ್ನು ನೋಡಿಕೊಂಡವರು. ಒಂದು ದಿನವೂ ಅತ್ತೆ-ಸೊಸೆಯರ ನಡುವೆ ಮನಸ್ತಾಪವಾಗಲಿ, ಹಂಗಿಸುವ ನಡವಳಿಕೆಯಾಗಲಿ ನಡೆದದ್ದನ್ನು ನಾನಂತೂ ಕಂಡಿಲ್ಲ. ಅದೇ ರೀತಿ ಈಗ ನನ್ನ ಸೊಸೆಯೂ ನನ್ನನ್ನು ಅತ್ಯಂತ ಗೌರವಪೂರ್ವಕ ಪ್ರೀತಿಯನ್ನು ತೋರಿಸುತ್ತಾಳೆ.
ವಿದೇಶದಲ್ಲಿ ವಿಜ್ಞಾನಿಯಾಗಿ ಸಂಶೋಧನೆಯಲ್ಲಿ ತೊಡಗಿರುವ ಗಂಡನೊಡನೆ ತಾನೂ ಕೈಜೋಡಿಸಿ ವೈಜ್ಞಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕೈಂಕರ್ಯದಲ್ಲಿ ದಿನವಿಡೀ ದುಡಿಯುತ್ತಿದ್ದರೂ, ಮನೆಕೆಲಸಗಳನ್ನು ನಿಭಾಯಿಸಿಕೊಂಡು ಪ್ರತಿನಿತ್ಯ ನನ್ನ ಕ್ಷೇಮ ಸಮಾಚಾರವನ್ನು ದೂರವಾಣಿ ಮೂಲಕ ವಿಚಾರಿಸುತ್ತ ಸವಿ ಮಾತನ್ನಾಡುವ ಸೊಸೆಯ ಬಗೆಗೆ ತಾನೇ ತಾನಾಗಿ ಪ್ರೀತಿ ಹುಟ್ಟುತ್ತದೆ.
ಒಟ್ಟಾರೆ ಇಂದು ಆಡುನುಡಿಯಾಗಿ ಬೆಳೆದುಬಂದ “ಅತ್ತೆ-ಸೊಸೆ ಕದನ’ ಅಸ್ತಮಾನದತ್ತ ಸರಿದು ಪ್ರೀತಿಯ ಹೊಂದಾಣಿಕೆಯ ನೆಲೆಯಲ್ಲಿ ಸಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆಲ್ಲ ಪರಸ್ಪರ ಅರಿವೇ ಕಾರಣ! ಅತ್ತೆ-ಸೊಸೆ ಈರ್ವರೂ ತಮ್ಮನ್ನು ತಾವು ತಿದ್ದಿಕೊಂಡು ವಿರಸಕ್ಕೆ ಎಡೆಯಿಲ್ಲದಂತೆ ಪ್ರೀತಿಯ ಸಹಬಾಳ್ವೆಗೆ ಒತ್ತು ನೀಡುತ್ತಾ ವಿವೇಕದಿಂದ ಮುನ್ನಡೆವ ಹೊಸ ಹಾದಿಯತ್ತ ಇಂದಿನ ಅತ್ತೆ-ಸೊಸೆಯರ ಸಂಬಂಧವು ಬೆಳೆಯುತ್ತಿರುವುದು ನಿಜಕ್ಕೂ ಮಹಿಳೆಯರ ಬೌದ್ಧಿಕ ಪಕ್ವತೆಯನ್ನು ಪ್ರತಿಬಿಂಬಿಸುವುದಂತೂ ಸತ್ಯ. ಇದು ಅವಶ್ಯ ಕೂಡಾ. ಯಾಕೆಂದರೆ, ಇಂದಿನ ಸೊಸೆಯೇ ಮುಂದಿನ ಅತ್ತೆಯಾಗುವವಳಲ್ಲವೆ?
ಹೀಗಾಗಿಯೇ, ಇಂದು ಅತ್ತೆಗೆ ಸೊಸೆಯ ಪ್ರೀತಿಯ ಆರೈಕೆಯೂ, ಸೊಸೆಗೆ ಅತ್ತೆಯ ವಾತ್ಸಲ್ಯಮಯ ಮಾರ್ಗದರ್ಶನವೂ ಅವಶ್ಯವಾಗಿ ಬೇಕೆನಿಸುತ್ತಿದೆಯೇನೋ? ಆದುದರಿಂದ ಇಂತಹ ಸನ್ನಿವೇಶದಲ್ಲಿ ಅತ್ತೆ-ಮಾವ ಇದ್ದ ಮನೆಯ ಗಂಡ ಬೇಡ ಎಂಬ ಹೆಣ್ಣಿನ “ಅಹಂ’ಗೆ ಜಾಗವಿಲ್ಲವೆಂಬುದಂತೂ ಸುಳ್ಳಲ್ಲ. ಒಟ್ಟಾರೆ ತನ್ನ ತಂದೆ-ತಾಯಿಯಂತೆ ಮಾವ-ಅತ್ತೆಯರನ್ನೂ , ತನ್ನ ಮಗಳಂತೆ ಸೊಸೆಯನ್ನೂ ನಡೆಸಿಕೊಂಡು ಬಿಟ್ಟರೆ ಅಂತಹ ಸಂಸಾರವೇ ನಂದನವನವಾಗಬಹುದಲ್ಲವೆ? ಅಷ್ಟೇ ಅಲ್ಲ, ಆಗ ಸಂಸಾರದ ಹೊಣೆಹೊತ್ತ ಪುರುಷನೂ ನಿರಾಳವಾಗಿ ಮನಃಶಾಂತಿಯನ್ನು ಪಡೆದು ನೆಮ್ಮದಿಯ ಬದುಕನ್ನು ಮುನ್ನಡೆಸಬಹುದೆಂಬುದೇ ನನ್ನ ಅನಿಸಿಕೆ. “ಕೂಡಿ ಬಾಳುವುದೇ ಸ್ವರ್ಗಸುಖ’, “ಹೃದಯ ವೈಶಾಲ್ಯವೇ ಬಾಳಿನ ದೀಪ’ ಎಂಬುದನ್ನು ಎಂದಿಗೂ ಮರೆಯದೆ ಮುನ್ನಡಿ ಇಡುತ್ತಾ ಸಾಗಲಿ ಅತ್ತೆ-ಸೊಸೆಯರ ಆಪ್ತ ಬಾಂಧವ್ಯ!
– ಪರಮೇಶ್ವರಿ ಲೋಕೇಶ್ವರ್