Advertisement

ಭೂತ ಬಂಗಲೆಯಾದ ದೇವಲಗಾಣಗಾಪುರ ಯಾತ್ರಿ ನಿವಾಸ

12:30 PM Feb 14, 2020 | Naveen |

ಅಫಜಲಪುರ: ರಾಜ್ಯದ ಐತಿಹಾಸಿಕ ಯಾತ್ರಾ ಸ್ಥಳವಾಗಿರುವ ಸುಕ್ಷೇತ್ರ ದೇವಲ ಗಾಣಗಾಪುರದಲ್ಲಿ ನಿತ್ಯ ನೂರಾರು ಭಕ್ತರು ದತ್ತಾತ್ರೇಯ ಮಹಾರಾಜರ ದರ್ಶನ ಪಡೆಯಲು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಸಮಸ್ಯೆ ಆಗಬಾರದೆಂದು ಸರ್ಕಾರ ಯಾತ್ರಿ ನಿವಾಸವೊಂದನ್ನು ನಿರ್ಮಿಸಿದೆ.

Advertisement

ಅದೀಗ ಮೂಲ ಸೌಲಭ್ಯಗಳಿಲ್ಲದ್ದಕ್ಕೆ ಉದ್ಘಾಟನೆಯಾದರೂ ಉಪಯೋಗಕ್ಕೆ ಬಾರದೆ ಜನ ಪರದಾಡುವಂತಾಗಿದೆ. ವರ್ಷಗಳ ಕಾಲ ನನೆಗುದಿಗೆ ಬಿದ್ದು ಉದ್ಘಾಟನೆ: ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 2010-11ನೇ ಸಾಲಿನ ಧಾರ್ಮಿಕ ದತ್ತಿ ಇಲಾಖೆ ಯೋಜನೆ ಅಡಿಯಲ್ಲಿ 2.82 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ಕಾಮಗಾರಿಗೆ ಅಡಿಗಲ್ಲು ನೆರವೇರಿತ್ತು. 2011ರಿಂದ ಇಲ್ಲಿಯವರೆಗೆ ಕುಂಟುತ್ತಾ ಸಾಗಿದ್ದ ಕಾಮಗಾರಿಯನ್ನು ಮುಗಿಸಿ, ಕೊನೆಗೂ 2020ರ ಜನವರಿ 25ರಂದು ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಎಂ.ವೈ. ಪಾಟೀಲ ಉದ್ಘಾಟಿಸಿದ್ದರು. ಅನೇಕ ವರ್ಷಗಳ ಕಾಲ ನನೆಗುದಿಗೆ ಬಿದ್ದು ಕೊನೆಗೂ ಉದ್ಘಾಟನೆಯಾದ ಯಾತ್ರಿನಿವಾಸವೀಗ ಭಕ್ತರು, ಯಾತ್ರಿಕರಿಗೆ ತಂಗುದಾಣವಾಗಿ ಸಹಕಾರಿ ಆಗಬೇಕಾಗಿತ್ತು. ಆದರೆ ಅದು ಆಗುತ್ತಿಲ್ಲ.

ಭೂತ ಬಂಗಲೆಯಾದ ಯಾತ್ರಿ ನಿವಾಸ: ಕುಂಟುತ್ತಾ ಕಾಮಗಾರಿ ಸಾಗಿದರೂ ಕೊನೆಗೆ ಉದ್ಘಾಟನೆಯಾಗಿದೆ ಎಂದು ಅನೇಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ ದೊಡ್ಡದಾದ ಬಂಗಲೆ ಇದ್ದರೂ ಯಾರ ಉಪಯೋಗಕ್ಕೂ ಬಾರದಂತಾಗಿ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ.

ಭಕ್ತರ ಪರದಾಟ: ದೇವಲ ಗಾಣಗಾಪುರಕ್ಕೆ ನಿತ್ಯ ಸೀಮಾಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ಸೇರಿದಂತೆ ರಾಜ್ಯದ, ದೇಶದ ಅನೇಕ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ಅದರಲ್ಲೂ ಹುಣ್ಣಿಮೆ, ಅಮವಾಸ್ಯೆ ಸಂದರ್ಭಗಳಲ್ಲಿ ದೇವಲ ಗಾಣಗಾಪುರದಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ದತ್ತ ಮಹಾರಾಜರ ದರ್ಶನಕ್ಕಾಗಿ ಎರಡು ಮೂರು ದಿನ ಮೊದಲೇ ಗಾಣಗಾಪುರಕ್ಕೆ ಬರುತ್ತಾರೆ. ಹೀಗೆ ಬರುವ ಜನರಿಗೆ ಯಾತ್ರಿ ನಿವಾಸ ವರದಾನ ಆಗಬೇಕಾಗಿತ್ತು. ಆದರೆ ಉದ್ಘಾಟನೆಯಾಗಿ ತಿಂಗಳು ಗತಿಸುತ್ತಾ ಬಂದರೂ ಭಕ್ತರಿಗೆ ಮಾತ್ರ ಯಾತ್ರಿ ನಿವಾಸ ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ಭಕ್ತರು ಪರದಾಡುವಂತಾಗಿದೆ. ಯಾತ್ರಿ ನಿವಾಸ ನಿರ್ಮಾಣವಾಗಿ ಸುಮಾರು ವರ್ಷಗಳ ಬಳಿಕ ಉದ್ಘಾಟನೆ ಭಾಗ್ಯ ಕಂಡಿದೆ.

ಇನ್ನು ಮುಂದೆ ದತ್ತನ ದರ್ಶನಕ್ಕೆ ಬಂದಾಗ ಯಾತ್ರಿ ನಿವಾಸದಲ್ಲಿ ಇರಬಹುದು ಎಂದು ನಿಟ್ಟುಸಿರು ಬಿಟ್ಟಿದ್ದೆವು. ಆದರೆ ಉದ್ಘಾಟನೆ ಆದರೂ ಅಲ್ಲಿರುವ ಭಾಗ್ಯ ಸಿಗದೇ ಇರುವುದಕ್ಕೆ ಬೇಸರವಾಗಿದೆ ಎನ್ನುತ್ತಾರೆ ದತ್ತನ ಭಕ್ತರು.

Advertisement

ಯಾತ್ರಿ ನಿವಾಸದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಹೀಗಾಗಿ ಜಿಲ್ಲಾ ಧಿಕಾರಿ ಜೊತೆಗೆ ಚರ್ಚೆ ನಡೆಸಿ ಮೂಲಭೂತ ಸೌಕರ್ಯ ಕಲ್ಪಿಸಿ ಅದರ ನಿರ್ವಹಣೆಯನ್ನು ದೇವಸ್ಥಾನದವರಿಗೆ ವಹಿಸಬೇಕೋ, ಖಾಸಗಿಯವರಿಗೆ ನೀಡಬೇಕೋ ಎಂದು ನಿರ್ಧರಿಸಲಾಗುವುದು.
ಎಂ.ವೈ. ಪಾಟೀಲ, ಶಾಸಕ

ಯಾತ್ರಿ ನಿವಾಸದಲ್ಲಿ ಇನ್ನೂ ಸಣ್ಣ ಪುಟ್ಟ ಕೆಲಸ ಬಾಕಿ ಇವೆ. ಅವುಗಳನ್ನು ಪೂರ್ಣಗೊಳಿಸಿ ಬಂದ ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಿಕೊಡಲಾಗುವುದು.
ಕೆ.ಜಿ. ಬಿರಾದಾರ,
ಕಾರ್ಯ ನಿರ್ವಾಹಕ ಅಧಿಕಾರಿ,
ದತ್ತ ದೇವಸ್ಥಾನ, ದೇವಲ ಗಾಣಗಾಪುರ

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next