Advertisement

ಅಫ‌ಜಲಪುರ: ಹನಿ ನೀರಿಗೂ ಬರ

10:26 AM Mar 17, 2019 | |

ಅಫಜಲಪುರ: ನೀರಿಲ್ಲದೆ ತಾಲೂಕಿನ ಕರೆ ಕಟ್ಟೆಗಳು ಬತ್ತಿ ಹೋಗಿವೆ. ನೀರಿಗಾಗಿ ಜನರು ಪರದಾಡುತ್ತಿದ್ದರೆ, ಜಾನುವಾರುಗಳು ಪರಿತಪಿಸುತ್ತಿವೆ. ಎಲ್ಲಿ ನೋಡಿದರೂ ಹಾಹಾಕಾರ ಶುರುವಾಗಿದೆ. 

Advertisement

ತಗ್ಗಿದ ಅಂತರ್ಜಲ: ಮಳೆ ಕೊರತೆಯಿಂದಾಗಿ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಅಂತರ್ಜಲ ಇಲ್ಲದ್ದರಿಂದ ಕೆರೆ, ಬಾವಿ, ಕೊಳವೆ ಬಾವಿಗಳ ನೀರು ಬತ್ತಿ ಹೋಗಿವೆ. ಅಲ್ಲದೇ ಹೊಸದಾಗಿ ಎಷ್ಟು ಕೊಳವೆ ಬಾವಿ ಕೊರೆದರೂ ಹನಿ ನೀರಿನ ಅಂಶವೂ ಕಾಣುತ್ತಿಲ್ಲ. ಎಲ್ಲಿ ನೋಡಿದರೂ ನೀರಿಗಾಗಿ ಹಾಹಾಕಾರ ಶುರುವಾಗಿದ್ದರಿಂದ ಜನ ಸಾಮಾನ್ಯರು ಬಿಂದಿಗೆ ನೀರು ತರಲು ಕಿಲೋ ಮಿಟರ್‌ಗಟ್ಟಲೇ ಅಲೆದಾಡುವಂತೆ ಆಗಿದೆ.

ಖಾಸಗಿಯವರ ಹೊಲ ಗದ್ದೆಗಳಲ್ಲಿ ಮಾಲೀಕರಿಂದ ನೂರು ಮಾತು ಆಡಿಸಿಕೊಂಡು ಕೊಡ ನೀರು ತರಬೇಕಾದ ಪರಿಸ್ಥಿತಿ ಇದೆ. ಅಲ್ಲದೇ ಅವರು ನೀರು ಕೊಟ್ಟರೆ ಪುಣ್ಯ ಎನ್ನುವಂತಾಗಿದೆ ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ.

ನೀರಿಗಾಗಿ ಬಾಯಿ ತೆರೆಯುತ್ತಿರುವ ಜನ: ಕಳೆದ ವರ್ಷವೂ ತಾಲೂಕಿನಲ್ಲಿ ಬರ ಆವರಿಸಿತ್ತು. ಆದರೆ ಈ ವರ್ಷ ಕಳೆದ ವರ್ಷಕ್ಕಿಂತ ಭೀಕರ ಬರಗಾಲ ಆವರಿಸಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ಬಾಯ್ತೆರೆದು ಮುಗಿಲ ಕಡೆ ಮುಖ ಮಾಡುವಂತಾಗಿದೆ. ಎಲ್ಲಿ ನೋಡಿದರೂ ಹನಿ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಕೆರೆಗಳ ಮಾಹಿತಿ: ಅಫಜಲಪುರ ತಾಲೂಕಿನಲ್ಲಿ ಒಟ್ಟು 12 ಕೆರೆಗಳಿವೆ. ಅದರಲ್ಲಿ ಐದು ದೊಡ್ಡ ಕೆರೆಗಳು, ಜಿನುಗು ಕೆರೆ, ಸಣ್ಣ ಕೆರೆಗಳ ಸಂಖ್ಯೆ ಒಟ್ಟು ಏಳು. ಈ ಪೈಕಿ ಗೊಬ್ಬೂರ (ಕೆ) ಗ್ರಾಮದಲ್ಲಿ ಅತಿ ದೊಡ್ಡ ಕೆರೆ ಇದೆ. ಇದರ ವಿಸ್ತೀರ್ಣ 415 ಎಕರೆ ಪ್ರದೇಶವಾಗಿದ್ದು, 84.40 ಕ್ಯೂಸೆಕ್‌ ನೀರು ಸಂಗ್ರಹವಾಗುತ್ತದೆ. 

Advertisement

ಬಡದಾಳ ಗ್ರಾಮದಲ್ಲಿ 9.9 ಎಕರೆ ವಿಸ್ತೀರ್ಣದ ಅತೀ ಸಣ್ಣ ಕೆರೆ ಇದ್ದು, 1.25 ಕ್ಯೂಸೆಕ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ತಾಲೂಕಿನ 12 ಕೆರೆಗಳು 939.175 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಕೆರೆಗಳಲ್ಲಿ ಒಟ್ಟು 274.5 ಕ್ಯೂಸೆಕ್ಸ್‌ ನೀರು ಸಂಗ್ರಹವಾಗುತ್ತದೆ. ಆದರೆ ಮಳೆ ಕೊರತೆಯಿಂದಾಗಿ ಅಫಜಲಪುರ ಪಟ್ಟಣದ ಕೆರೆ ಹೊರತುಪಡಿಸಿ ಉಳಿದ ಎಲ್ಲ ಕೆರೆಗಳು ಬತ್ತಿ ಹೋಗಿವೆ.

ಅಫಜಲಪುರ ಕೆರೆಯಲ್ಲಿ ನೀರು ನಿಲ್ಲಲು ಭೀಮಾ ಬ್ಯಾರೇಜ್‌ ಕಾರಣವಾಗಿದ್ದು ಆಗಾಗ ಬ್ಯಾರೇಜ್‌ ನೀರನ್ನು ಕಾಲುವೆ ಮೂಲಕ ನೀರು ತುಂಬಿಸಲಾಗುತ್ತದೆ. ಹೀಗಾಗಿ ಅಫಜಲಪುರ ಕೆರೆಯಲ್ಲಿ ನೀರಿದೆ. ಉಳಿದ ಕೆರೆಗಳು ಹನಿ ನೀರಿಲ್ಲದೆ ಸೊರಗಿ ಹೋಗಿವೆ. 

ಮೇವು ಬ್ಯಾಂಕ್‌ ಸ್ಥಾಪಿಸಿ: ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ದನಕರುಗಳಿಗೆ ಮೇವಿಲ್ಲ. ಹಣ ನೀಡಿದರೂ ಮೇವು ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಮೇವು ಬ್ಯಾಂಕ್‌ ಸ್ಥಾಪಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಜಾನುವಾರುಗಳನ್ನು ಮಾರಿ ಗುಳೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಸಂಬಂಧಪಟ್ಟವರು ಎಚ್ಚೆತ್ತು ದನಕರುಗಳಿಗೆ ಮೇವು, ನೀರು ಪೂರೈಸುವ ಕೆಲಸ ಮಾಡಬೇಕಾಗಿದೆ.

ಬರಗಾಲ ಇರುವುದರಿಂದ ಜನ ಗುಳೆ ಹೋಗಲು ಮುಂದಾ ಗುತ್ತಿದ್ದಾರೆ. ಗುಳೆ ತಪ್ಪಿಸಲು ನರೇಗಾ ಅಡಿಯಲ್ಲಿ ಕೂಲಿ ಕೆಲಸ ನೀಡಲಾಗುತ್ತಿದೆ. ಕೆರೆ ಕುಂಟೆಗಳ ಹೂಳೆತ್ತುವುದರಿಂದ ಜನರಿಗೆ ಕೆಲಸ ಸಿಗುತ್ತಿದೆ. ಅಲ್ಲದೆ ಕೆರೆಯಲ್ಲಿನ ಹೂಳು ತೆಗೆಯುವುದರಿಂದ ಮಳೆಗಾಲದಲ್ಲಿ ನೀರು ನಿಂತು ಅಂತರ್ಜಲ ಹೆಚ್ಚಳವಾಗಲಿದೆ. 
 ಆನಂದಕುಮಾರ, ಪ್ರಭಾರಿ ಎಇ, ಸಣ್ಣ ನೀರಾವರಿ ಇಲಾಖೆ

 ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next