Advertisement

ಭೀಮಾಗೆ ನಿತ್ಯ ಒಂದು ಟಿಎಂಸಿ ಮಹಾ ನೀರು

12:54 PM Aug 05, 2019 | Naveen |

ಅಫಜಲಪುರ: ತಾಲೂಕಿನಾದ್ಯಂತ ಹೇಳಿಕೊಳ್ಳುವ ರೀತಿಯಲ್ಲಿ ಮಳೆಯಾಗದೇ ಇದ್ದರೂ, ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಮಾ ನದಿಗೆ ಭಾರಿ ಪ್ರಮಾಣದ ನೀರು ಬರುವ ಸಾಧ್ಯತೆ ಇದೆ. ಸದ್ಯ ಮಹಾರಾಷ್ಟ್ರದ ವೀರಾ ಜಲಾಶಯದಿಂದ ನಿತ್ಯ ಒಂದು ಟಿಎಂಸಿ ಅಡಿ ನೀರು ಹರಿದು ಬರುತ್ತಿದೆ ಎಂದು ಕೆಎನ್‌ಎನ್‌ಎಲ್ ಎಇಇ ಲಕ್ಷ್ಮೀಕಾಂತ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಅಲ್ಲಿನ ಜಲಾಶಯಗಳಲ್ಲಿ ನೀರು ತುಂಬಿ ಹೆಚ್ಚಾದ ನೀರನ್ನು ಭೀಮಾ ನಿದಿಗೆ ಹರಿಸಲಾಗುತ್ತಿದೆ. ಜುಲೈ 27ರಿಂದ ವೀರಾ ಜಲಾಶಯದಿಂದ ನಿತ್ಯ ಒಂದು ಟಿಎಂಸಿ ಅಡಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಭೀಮಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಎಂದು ತಿಳಿಸಿದರು.

ಆಗಸ್ಟ್‌ 4ರ ರಾತ್ರಿವರೆಗೆ ಭೀಮಾ ನದಿಗೆ ಸೊನ್ನ ಗ್ರಾಮದಲ್ಲಿ ನಿರ್ಮಿಸಿರುವ ಭೀಮಾ ಏತ ನೀರಾವರಿ ಜಲಾಶಯ ತುಂಬುವ ಸಾಧ್ಯತೆ ಇದೆ. ಹೀಗಾಗಿ ರಾತ್ರಿಯಿಂದ ಒಂದು ಸಾವಿರ ಕ್ಯೂಸೆಕ್‌ ನೀರು ಹೊರ ಬಿಡುವ ಯೋಚನೆ ಮಾಡಲಾಗಿದೆ ಎಂದು ಹೇಳಿದರು. ಭೀಮಾ ಜಲಾಶಯದ ಕೆಳಭಾಗದ ಗ್ರಾಮಗಳ ಸಾರ್ವಜನಿಕರು ಜಾಗೃತವಾಗಿರಬೇಕು. ದನ, ಕುರಿಗಾಹಿಗಳು, ಮೀನುಗಾರರು ನದಿ ದಡಕ್ಕೆ ಹೋಗಬಾರದು. ರೈತರು ನದಿ ದಡದಲ್ಲಿರುವ ತಮ್ಮ ಮೋಟರ್‌ ಪಂಪಸೆಟ್‌ಗಳನ್ನು ತಕ್ಷಣಕ್ಕೆ ತೆಗೆದಿಟ್ಟುಕೊಳ್ಳುವುದು ಒಳ್ಳೆಯದು. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಹರಿದು ಬಂದರೆ ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಹೀಗಾಗಿ ನದಿ ದಡದ ಗ್ರಾಮಗಳ ಜನ ಜಾಗೃತವಾಗಿರಬೇಕು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next