ನವದೆಹಲಿ:ಸರಬರಾಜಿನಲ್ಲಿ ಉಂಟಾದ ಅಡಚಣೆಯಿಂದಾಗಿ ಅಕ್ಕಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರತೀ ಕೆ.ಜಿ. ಅಕ್ಕಿಗೆ ಶೇ.6.31ರಷ್ಟು ಬೆಲೆಯೇರಿಕೆಯಾಗಿದ್ದು, ಸರಾಸರಿ 37.7 ರೂ. ಇದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಪ್ರತಿ ಕೆ.ಜಿ. ಗೋಧಿಯ ಸರಾಸರಿ ಚಿಲ್ಲರೆ ಬೆಲೆ ಆ.22ರಂದು ಕಳೆದ ವರ್ಷಕ್ಕಿಂತ ಶೇ.22ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಅದು 25.41 ರೂ. ಇದ್ದರೆ, ಈಗ 31.04 ರೂ.ಗೆ ಏರಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಗೋಧಿ ಪುಡಿ (ಅಟ್ಟಾ)ದ ಬೆಲೆ ಕೂಡ ಪ್ರತೀ ಕೆ.ಜಿ.ಗೆ ಶೇ.17ರಷ್ಟು ಹೆಚ್ಚಿದೆ. ಇದು ಕಳೆದ ವರ್ಷ 30.04 ರೂ. ಇದ್ದರೆ ಈ ವರ್ಷ 35.17 ರೂ.ಗಳಿಗೆ ಹೆಚ್ಚಿದೆ.
ದೇಶದಲ್ಲಿ ಕಳೆದ ವಾರದವರೆಗಿನ ಅವಧಿಯಲ್ಲಿ ಭತ್ತ ಬಿತ್ತನೆಯಲ್ಲಿ ಶೇ.8.25ರಷ್ಟು ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಉತ್ಪಾದನೆಯೂ ಕಡಿಮೆ ಆಗಬಹುದು ಎಂಬ ವರದಿಗಳು ಕೂಡ ಅಕ್ಕಿ ಬೆಲೆಯೇರಿಕೆಗೆ ಕಾರಣ ಎನ್ನಲಾಗಿದೆ. 2022-23ರ ಖಾರಿಫ್ ಋತುವಿನಲ್ಲಿ 112 ದಶಲಕ್ಷ ಟನ್ ಭತ್ತ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ.
ಭತ್ತ ಬಿತ್ತನೆ (ಆ. 18ರ ವರೆಗೆ)
ಈ ವರ್ಷ: 343.70 ಲಕ್ಷ ಹೆಕ್ಟೇರ್
ಕಳೆದ ವರ್ಷ: 374.63 ಹೆಕ್ಟೇರ್
ಎಲ್ಲೆಲ್ಲಿ ಕಡಿಮೆ?
ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಉ. ಪ್ರದೇಶ, ಛತ್ತೀಸ್‌ಗಡ, ಮಧ್ಯಪ್ರದೇಶ, ತೆಲಂಗಾಣ
ಕಾರಣ: ಮುಂಗಾರು ಮಳೆ ಕೊರತೆ