ಚೆನ್ನೈ : ತನ್ನ ದುಬಾರಿ ಕಾರಿನ ಮೇಲಿನ ಆಮದು ಸುಂಕ ವಿನಾಯಿತಿ ಕೇಳಿದ್ದ ಕಾಲಿವುಡ್ ನಟ ರಾಷ್ಟ್ರಪ್ರಶಸ್ತಿ ವಿಜೇತ ಧನುಷ್ ಅವರನ್ನು ಮದ್ರಾಸ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
‘ತೆರಿಗೆದಾರರ ಹಣವನ್ನು ಬಳಸಿಕೊಂಡು ನೀವು ರಸ್ತೆಗಳಲ್ಲಿ ಐಷಾರಾಮಿ ಕಾರನ್ನು ಓಡಿಸುತ್ತೀರಿ. ಹಾಲು ಮಾರಾಟಗಾರ ಮತ್ತು ದಿನಗೂಲಿ ಕಾರ್ಮಿಕರು ಕೂಡ ತಾವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯಕ್ತಿಗಳು ತೆರಿಗೆ ವಿನಾಯಿತಿ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ’ ಎಂದು ಕೋರ್ಟ್ ಛಿಮಾರಿ ಹಾಕಿದೆ.
ನಟ ಧನುಷ್ ತನ್ನ ಆಮದು ಮಾಡಿದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಆಮದು ತೆರಿಗೆಯನ್ನು ಪ್ರಶ್ನಿಸಿ 2015ರಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ನಟರು ಜವಾಬ್ದಾರಿಯುತ ನಾಗರೀಕರಂತೆ ವರ್ತಿಸಬೇಕು. ಸಂಪೂರ್ಣವಾಗಿ ತೆರಿಗೆ ಪಾವತಿಸದೆ ತಮ್ಮ ಕಾರುಗಳನ್ನು ಚಲಾಯಿಸಬಾರದು ಎಂದು ಹೇಳಿದೆ.
2015ರಲ್ಲಿ ಧನುಷ್ ರೋಲ್ಸ್ ರಾಯ್ಸ್ ಕಾರನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದರು. ಇದಕ್ಕೆ ಅವರು 60 ಲಕ್ಷ ರೂಪಾಯಿ ಎಂಟ್ರಿ ಟ್ಯಾಕ್ಸ್ ಪಾವತಿ ಮಾಡಬೇಕಿತ್ತು. ಧನುಷ್ ಅರ್ಧದಷ್ಟು ತೆರಿಗೆ ಪಾವತಿಸಿ ಉಳಿದಿದ್ದಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಮ್ ಅವರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ತೆರಿಗೆ ವಿನಾಯಿತಿ ನೀಡೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇಂದು ಧನುಷ್ ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ ಕೋರ್ಟ್‌ಗೆ ಧನುಷ್ ಪರ ವಕೀಲರು ಮನವಿ ಒಂದನ್ನು ಮಾಡಿಕೊಂಡರು. ‘ಧನುಷ್ ಶೇ.50 ತೆರಿಗೆಯನ್ನು ತುಂಬಿದ್ದಾರೆ. ಉಳಿದ ತೆರಿಗೆಯನ್ನು ಪಾವತಿಸೋಕೆ ಅವರು ಇಚ್ಛಿಸಿದ್ದಾರೆ. ಹೀಗಾಗಿ, ಅರ್ಜಿ ಹಿಂಪಡೆಯೋಕೆ ಅವಕಾಶ ನೀಡಬೇಕು’ ಎಂದು ವಕೀಲರು ಕೋರಿದರು. ಆದರೆ, ಕೋರ್ಟ್ ಇದನ್ನು ನಿರಾಕರಿಸಿದೆ.
ಇನ್ನು ಇತ್ತೀಚಿಗಷ್ಟೆ ಇಂತಹದೆ ಪ್ರಕರಣದಲ್ಲಿ ತಮಿಳು ನಟ ವಿಜಯ್ ಧಳಪತಿ ಅವರಿಗೂ ಮದ್ರಾಸ್ ಹೈಕೋರ್ಟ್ ಬುದ್ಧಿವಾದ ಹೇಳಿತ್ತು. ಇತರರಿಗೆ ನೀವು ಮಾದರಿಯಾಗಬೇಕು. ಕೇವಲ ತೆರೆಯ ಮೇಲಷ್ಟೆ ಹೀರೋ ಆದರೆ ಸಾಲದು ಎಂದು ತರಾಟೆ ತೆಗೆದುಕೊಂಡಿದ್ದ ನ್ಯಾಯಾಲಯ 1 ಲಕ್ಷ ರೂ. ದಂಡವನ್ನೂ ವಿಧಿಸಿತ್ತು.