Advertisement

ಮಿಲನ ನಂತರ‌ ಕಲಹ: ಉಗಾಂಡ ಯುವತಿ ಕೊಲೆ

11:41 AM Feb 03, 2017 | |

ಬೆಂಗಳೂರು: ಒಪ್ಪಿತ ಲೈಂಗಿಕ ಕ್ರಿಯೆ ನಂತರ ಹಣದ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಉಗಾಂಡ ಯುವತಿಯನ್ನು ಹಿಮಾಚಲ ಪ್ರದೇಶ ಮೂಲದ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೊತ್ತನೂರಿನಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

Advertisement

10 ಸಾವಿರ ರೂ.ಗೆ ಒಪ್ಪಂದದಂತೆ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಹಿಮಾಚಲ ಪ್ರದೇಶ ಮೂಲದ ಯುವಕ, ನಂತರ ಐದು ಸಾವಿರ ರೂ. ಮಾತ್ರ ನೀಡಲು ಮುಂದಾಗಿದ್ದ. ಇನ್ನೂ ಐದು ಸಾವಿರ ರೂ.ಗೆ ಉಗಾಂಡ ಯುವತಿ ಒತ್ತಾಯಿಸಿದಾಗ ಯುವಕ ನಿರಾಕರಿಸಿದ್ದ. ಹೀಗಾಗಿ ಯುವಕನ ಕೈಗೆ ಯುವತಿಯು ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಈ ವೇಳೆ ಯುವತಿಯಿಂದ ಚಾಕು ಕಸಿದುಕೊಂಡ ಯುವಕ ಆಕೆಯ ಕುತ್ತಿಗೆ ಸೇರಿದಂತೆ 18 ಕಡೆ ಇರಿದು ಕೊಲೆ ಮಾಡಿದ್ದಾನೆ. 

ಕೊತ್ತನೂರಿನ ತಿಮ್ಮೇಗೌಡ ಲೇಔಟ್‌ನಲ್ಲಿ ವಾಸವಿದ್ದ ಉಗಾಂಡದ ನಕಾಯಕಿ ಫ್ಲಾರೆನ್ಸ್‌ (25) ಕೊಲೆಯಾದ ಯುವತಿ. ಹಿಮಾಚಲ ಪ್ರದೇಶ ಮೂಲದ ಇಶಾನ್‌ (30) ಬಂಧಿತ ಯುವಕ. ಕೊಲೆಯಾದ ಯುವತಿ ನಡೆಸಿದ ಹಲ್ಲೆಯಿಂದ ಇಶಾನ್‌ ಕೈಗೆ ಗಾಯವಾಗಿದೆ. ಒಪ್ಪಂದವಾಗಿದ್ದೇ ಐದು ಸಾವಿರ ರೂ.ಗೆ ಆದರೆ, ಆಕೆ ಹತ್ತು ಸಾವಿರ ರೂ.ಗೆ ಒತ್ತಾಯಿಸಿ ಚಾಕುವಿನಿಂದ ಹಲ್ಲೆ ನಡೆಸಿದಳು. ನನ್ನನ್ನು ಕೊಲ್ಲಬಹುದು ಎಂದು ಹೆದರಿ ಕೊಲೆ ಮಾಡಿದೆ ಎಂದು ಆತ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. 

ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಉಗಾಂಡದ ಯುವತಿ ಫ್ಲಾರೆನ್ಸ್‌ ಕೊತ್ತನೂರಿನ ತಿಮ್ಮೇಗೌಡ ಲೇಔಟ್‌ನಲ್ಲಿ ವಾಸವಿದ್ದಳು. ಹೆಣ್ಣೂರಿನ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಅದೇ ರೀತಿ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಹಿಮಾಚಲ ಪ್ರದೇಶ ಮೂಲದ ಇಶಾನ್‌ ಬಿಟಿಎಂ ಲೇಔಟ್‌ನಲ್ಲಿ ವಾಸವಿದ್ದು ಮನೆ ಪಾಠ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ. 

ಫ್ಲಾರೆನ್ಸ್‌ ಹಾಗೂ ಇಶಾನ್‌ ನಡುವೆ ಪರಿಚಯವಿತ್ತು. ಬುಧವಾರ ಫ್ಲಾರೆನ್ಸ್‌ ಕೆಲಸದ ನಿಮಿತ್ತ ಕಮ್ಮನಹಳ್ಳಿಗೆ ಹೋಗಿದ್ದಾಗ ಅದೇ ವೇಳೆ ಅಲ್ಲಿಗೆ ಇಶಾನ್‌ ಬಂದಿದ್ದ. ಬಳಿಕ ಒಪ್ಪಿತ ಲೈಂಗಿಕ ಕ್ರಿಯೆಗೆ ಮಾತುಕತೆಯಾಗಿದ್ದು, ಬುಧವಾರ ರಾತ್ರಿ 11.30ರ ಸುಮಾರಿಗೆ ಇಶಾನ್‌ ಎಂ.ಜಿ.ರಸ್ತೆಯಿಂದ ಫ್ಲಾರೆನ್ಸ್‌ಳನ್ನು ಆಕೆಯ ಮನೆಗೆ ಕರೆದೊಯ್ದಿದ್ದ. ಲೈಂಗಿಕ ಕ್ರಿಯೆ ಮುಗಿದ ನಂತರ ಇಶಾನ್‌ ಆಕೆಗೆ 5 ಸಾವಿರ ರೂ.ಹಣ ಕೊಟ್ಟಿದ್ದಾನೆ.

Advertisement

ಆಗ ಆಕೆ, 10 ಸಾವಿರ ರೂ.ಕೊಡುವಂತೆ ಒತ್ತಾಯಿಸಿದ್ದಳು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಒಂದು ಹಂತದಲ್ಲಿ ಕುಪಿತಗೊಂಡ ಫ್ಲಾರೆನ್ಸ್‌ ಚಾಕುವಿನಿಂದ ನಿಶಾನ್‌ ಮೇಲೆ ಹಲ್ಲೆ ಮಾಡಿದ್ದಾಳೆ.  ಇದರಿಂದ ವಿಚಲಿತನಾದ ಇಶಾನ್‌ ಕೂಡಲೇ ಅದೇ ಚಾಕುವನ್ನು ಕಸಿದುಕೊಂಡು ಆಕೆಯ ಕುತ್ತಿಗೆ ಸೇರಿದಂತೆ ಹಲವು ಕಡೆ ಇರಿದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಫ್ಲಾರೆನ್ಸ್‌ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆ ತಿಳಿದು ಬಾಗಲೂರು ಠಾಣೆ ಇನ್ಸ್‌ಪೆಕ್ಟರ್‌ ಅಂಜನ್‌ಕುಮಾರ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಆಕೆಯ ಮನೆಯವರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ. 

ಠಾಣೆ ಎದುರು ಉಗಾಂಡದವರ ದಾಂಧಲೆ 
ಫ್ಲಾರೆನ್ಸ್‌ ಕೊಲೆಯಾದ ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿದ್ದ ಆಕೆಯ ಉಗಾಂಡ ಮೂಲದ ಸ್ನೇಹಿತರು ಕೊಲೆ ಆರೋಪಿ ಇಶಾನ್‌ನನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನು ನಿರಾಕರಿಸಿದ ಬಾಗಲೂರು ಠಾಣೆ ಇನ್ಸ್‌ಪೆಕ್ಟರ್‌ ಅಂಜನ್‌ಕುಮಾರ್‌ ಮತ್ತು ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನಿಸಿ ದಾಂಧಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇದನ್ನು ವಿರೋಧಿಸಿದ ಸ್ಥಳೀಯರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಉಗಾಂಡದ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next