ಬೀದರ: ಸಾಲ ಮನ್ನಾ, ಇಸ್ರೇಲ್ ಮಾದರಿ ಕೃಷಿ ಬಳಿಕ ರೈತರ ಉತ್ತೇಜನಕ್ಕೆ ಸಮ್ಮಿಶ್ರ ಸರ್ಕಾರ ಮತ್ತೂಂದು ಹೆಜ್ಜೆ ಇರಿಸಿದೆ. ಸಹಕಾರ ಇಲಾಖೆ ಅಡಿಯಲ್ಲಿ ಗುಂಪು ಕೃಷಿ ಯೋಜನೆ (ಕೋ ಆಪರೇಟಿವ್ ಫಾರ್ಮಿಂಗ್) ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದು, ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾಗೊಳಿಸಲು ಸಜ್ಜಾಗಿದೆ.
ಬರ ಮತ್ತು ಅತಿವೃಷ್ಟಿಯಿಂದ ಕೃಷಿ ಕ್ಷೇತ್ರ ಈಗ ಆಕರ್ಷಣೆ ಕಸುಬಾಗಿ ಉಳಿದಿಲ್ಲ. ರೈತ ಹೊಂದಿದ ಸ್ವಲ್ಪ ಜಮೀನು ಬಿಟ್ಟು ಆತನ ಮಕ್ಕಳು ಕೃಷಿಯಿಂದ ವಿಮುಖರಾಗಿ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ರೈತರು ಕೃಷಿ ಕಾರ್ಯ ಕೈಗೊಂಡು ಕೈ ಸುಟ್ಟುಕೊಳ್ಳುವುದಕ್ಕಿಂತ ಪಾಳು ಬಿಡುವುದೇ ಉತ್ತಮವೆಂದು ಭಾವಿಸುತ್ತಿರುವ ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹೊಸ ನೀತಿ ಜಾರಿಗೊಳಿಸಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹಕ್ಕೆ ಸಿದ್ಧತೆ ನಡೆಸಿದೆ.
ಏನಿದು ಗುಂಪು ಕೃಷಿ ಯೋಜನೆ?: ಸ್ವಸಹಾಯ ಸಂಘದ ಮಾದರಿಯಲ್ಲಿಯೇ ರೈತರ ಗುಂಪು ರಚಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶ ಇದಾಗಿದೆ. ಒಂದು ಗ್ರಾಮದ 50ರಿಂದ 100 ಜನ ರೈತರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ, ಗುಂಪು ರಚಿಸಲಾಗುತ್ತದೆ. ರೈತರ ಭೂಮಿಯ ಮಣ್ಣು ಪರೀಕ್ಷೆ ನಡೆಸಿ, ಯಾವ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬೇಕು ಎಂದು ಕೃಷಿ ವಿಜ್ಞಾನಿಗಳಿಂದ ರೈತರಿಗೆ ಸಲಹೆ ನೀಡಲಾಗುತ್ತದೆ. ನಂತರ ಆ ಬೆಳೆಗಳನ್ನು ಯಾವ ಪದ್ಧತಿಯಲ್ಲಿ ಬೆಳೆಸಬೇಕು ಎಂದು ಕೃಷಿ ತಜ್ಞರು ಮಾರ್ಗದರ್ಶನ ನೀಡುತ್ತಾರೆ. ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಯಂತ್ರೋಪಕರಣ, ಕೃಷಿ ಸಲಕರಣೆಗಳು, ಉಳುಮೆಗೆ ಬೇಕಾಗುವ ಅನುದಾನವನ್ನು ರೈತರಿಗೆ ಸಾಲದ ರೂಪದಲ್ಲಿ ಆಯಾ ಗುಂಪುಗಳಿಗೆ ನೀಡಲಾಗುತ್ತದೆ. ಬಿತ್ತನೆ ಬೀಜದಿಂದ ಮಾರಾಟದ ವಿವಿಧ ಹಂತದವರೆಗೆ ಎಲ್ಲ ಬಗೆಯ ಮೌಲ್ಯವ ರ್ಧಿತ ನೆರವನ್ನು ಗುಂಪುಗಳಿಗೆ ಸರ್ಕಾರ ನೀಡುತ್ತದೆ.
ಸರ್ಕಾರಗಳು ಸಾಲ ಮನ್ನಾದಂಥ ತಾತ್ಕಾಲಿಕ ಉಪಶಮನಕ್ಕೆ ಕೊಟ್ಟಷ್ಟು ಆದ್ಯತೆಯನ್ನು ಸಮಗ್ರ ಕೃಷಿ ಪದ್ಧತಿ ಬದಲಾಯಿಸಲು ನೀಡಿಲ್ಲ ಎಂದು ರೈತರು ಆರೋಪಿಸುವುದು ಸಾಮಾನ್ಯ. ಕೃಷಿ ಈಗಲೂ ಮಳೆಯನ್ನೇ ಅವಲಂಬಿಸಿದೆ. ಬರ ಬಂದ ಸಂದರ್ಭದಲ್ಲಿ ಹಾಕಿದ ಬಂಡವಾಳವೂ ಕೈಗೆ ಬಾರದೆ ಹತಾಶರಾಗುತ್ತಿರುವ ರೈತರು ಸಾಲ ತೀರಿಸುವ ದಾರಿ ಕಾಣದೆ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರದ ಈ ಹೊಸ ಯೋಜನೆ ರೈತರ ಜೀವನ ಬದಲಿಸುತ್ತದೆಯೇ ಎಂದು ಕಾಯ್ದು ನೋಡಬೇಕಿದೆ.
ರೈತರ ಅಭಿವೃದ್ಧಿ ಹಿನ್ನೆಲೆಯಲ್ಲಿ ಗುಂಪು ಕೃಷಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ನೆರವು ನೀಡುವಂತೆ ಈಗಾಗಲೇ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರು ಯೋಜನೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಅಲ್ಲದೇ, ಎನ್‌ಸಿಡಿಎಕ್ಸ್ ಅಧ್ಯಕ್ಷರನ್ನು ಭೇಟಿಯಾಗಿದ್ದು, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಯೋಜನೆ ದೇಶದಲ್ಲಿಯೇ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ರೈತರೇ ಸರ್ಕಾರಕ್ಕೆ ಸಾಲ ನೀಡುವಂತಾಗುತ್ತದೆ.
– ಬಂಡೆಪ್ಪ ಖಾಶೆಂಪೂರ, ಸಹಕಾರ ಸಚಿವ