Advertisement

ಭೂಸ್ವಾಧೀನ ಬಳಿಕ ತೋಕೂರು ಶಾಲೆ ಅತಂತ್ರ

01:55 PM Nov 22, 2017 | Team Udayavani |

ಬಜಪೆ: ಜೋಕಟ್ಟೆ ಗ್ರಾಮದ 62ನೇ ತೋಕೂರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಅಳಿವು-ಉಳಿವಿನ ಅಂಚಿನಲ್ಲಿದೆ. ಮಂಗಳೂರು ವಿಶೇಷ ಅರ್ಥಿಕ ವಲಯಕ್ಕಾಗಿ ಸುತ್ತಲಿನ ಭೂಮಿ, ಮನೆಗಳನ್ನು ಸ್ವಾಧೀನ ಮಾಡಿಕೊಂಡು, ಶಾಲೆಯನ್ನು ಮಾತ್ರ ಬಿಟ್ಟಿದ್ದು ಈ ದುಃ ಸ್ಥಿತಿಗೆ ಕಾರಣ. ರಸ್ತೆಗಳು ಹದಗೆಟ್ಟಿದ್ದು, ನಿರ್ಜನ ಪ್ರದೇಶದಲ್ಲಿರುವ ಶಾಲೆಗೆ ಬರಲು ವಿದ್ಯಾರ್ಥಿಗಳಿಗೂ ಕಷ್ಟವಾಗುತ್ತಿದೆ.

Advertisement

ಹಿಂದೆ ಇಲ್ಲಿ ಸುಮಾರು 200 ಮನೆಗಳಿದ್ದವು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಎಂಎಸ್‌ಇಝಡ್‌, ದ.ಕ.ಜಿ.ಪಂ. ಹಿ.ಪ್ರಾ. ಶಾಲೆ 62ನೇ ತೋಕೂರು ಶಾಲೆಯ ಸುಮಾರು 3 ಎಕರೆ ಜಾಗ ಬಿಟ್ಟು ಮನೆಯಿರುವ ಪ್ರದೇಶವನ್ನು ಸ್ವಾಧೀನಪಡಿಸಲಾಗಿತ್ತು. ಹದಗೆಟ್ಟ ರಸ್ತೆ ಹೊರತುಪಡಿಸಿ ಬೇರೆಲ್ಲ ಸವಲತ್ತುಗಳಿದ್ದರೂ ಶಾಲೆಯ ಪರಿಸರದಲ್ಲಿ ಮನೆಗಳಿಲ್ಲ. ವಿದ್ಯಾರ್ಥಿಗಳ ಕೊರತೆಯಿದ್ದು, ಮುಚ್ಚುವ ಪರಿಸ್ಥಿತಿಯಲ್ಲಿದೆ. ಇದನ್ನು ಸ್ಥಳಾಂತರಗೊಳಿಸಲು ಮನವಿ ಮಾಡಿದರೂ ಸ್ಪಂದನೆ ಇಲ್ಲ.

1959ರ ಆ. 19ರಂದು ಸ್ಥಾಪನೆಗೊಂಡ ಈ ಶಾಲೆ ಸುವರ್ಣ ಮಹೋತ್ಸವ ಆಚರಿಸಿದೆ. ಮೊದಲು 4 ತರಗತಿಗಳಿದ್ದು, 2011 ರಿಂದ 8ನೇ ತರಗತಿ ತನಕ ನಡೆಯುತ್ತಿದೆ. ಈಗ ಒಟ್ಟು 64 ವಿದ್ಯಾರ್ಥಿಗಳಿದ್ದಾರೆ.

ಕಾಡು, ಗುಡ್ಡಗಳು ಮಾತ್ರ
ಇಲ್ಲಿನ ಕೆಲವು ಕಂಪೆನಿಗಳು ಹೊರಸೂಸುವ ಹೊಗೆ ಪರಿಸರದಲ್ಲಿ ಉಸಿರಾಟಕ್ಕೆ, ಶಬ್ದ ಮಾಲಿನ್ಯದಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಶಾಲೆಗೆ ಬರುವ ಮಣ್ಣು ರಸ್ತೆಯೂ ಧೂಳುಮಯವಾಗಿದೆ. ಸಮೀಪವೇ ಕಾಡು ಇರುವುದರಿಂದ ಹಾವು, ಹೆಬ್ಟಾವು, ಕತ್ತೆ ಕಿರುಬಗಳ ಕಾಟವಿದ್ದು, ವಿದ್ಯಾರ್ಥಿಗಳಿಗೆ ಭಯದ ವಾತಾವರಣವಿದೆ.

ಮನವಿ ಬಂದಿಲ್ಲ
ಸ್ಥಳಾಂತರ, ಕಟ್ಟಡಕ್ಕೆ ಅನುದಾನದ ನೀಡುವ ಬಗ್ಗೆ ಯಾವುದೇ ಮನವಿ ಬಂದಿಲ್ಲ. ಈ ಪ್ರದೇಶದ ಜಿಲ್ಲಾ ಪಂಚಾಯತ್‌ ಸದಸ್ಯರು ಸಾಧನಾ ಸಾಮಗ್ರಿಗೆಂದು 70 ಸಾವಿರ ರೂ.ಅನುದಾನ ಮೀಸಲಿಟ್ಟಿದ್ದಾರೆ.
ಮಂಜುಳಾ,
   ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ 

Advertisement

ಮಕ್ಕಳಿಗೆ ಅನುಕೂಲ ಕಲ್ಪಿಸಿ
ಶಾಲೆ ಉಳಿಸಿಕೊಳ್ಳುವ ಜತೆಗೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. 58 ವರ್ಷಗಳನ್ನು ಕಂಡ ಶಾಲೆಯ ಪರಿಸರದಲ್ಲಿ ಭೂಸ್ವಾಧೀನದ ಪರಿಣಾಮ ಯಾವುದೇ ಮನೆಗಳು ಉಳಿದಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಶಾಲೆ ಸ್ಥಳಾಂತರವಾಗಿ, ಮೀಸಲಿಟ್ಟ ಜಾಗದಲ್ಲಿ ನಿರ್ಮಾಣವಾಗಬೇಕು. ಸರಕಾರಿ ಶಾಲೆಗೆ ಹೆಚ್ಚಾಗಿ ಬಡ ಮಕ್ಕಳು ಬರುವ ಕಾರಣ ಅವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಸರಕಾರ ಹಾಗೂ ಕಂಪೆನಿಗಳು ಶೀಘ್ರ ಕಾರ್ಯ ಪ್ರವೃತ್ತವಾಗಬೇಕು.
– ಸುರೇಂದ್ರ ಕುಲಾಲ್‌, ಸ್ಥಳೀಯ

 ಸುಬ್ರಾಯ ನಾಯಕ್‌ 

Advertisement

Udayavani is now on Telegram. Click here to join our channel and stay updated with the latest news.

Next