Advertisement
ಜಿಎಸ್‌ಟಿಯಲ್ಲಿನ ಕೆಲವು ನಿಯಮಗಳಿಂದ ತಿಂಡಿ-ತಿನಿಸಿನ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರ ಸಂಖ್ಯೆ ಸಹಜವಾಗಿ ಕ್ಷೀಣಿಸುತ್ತಿದೆ. ಇದು ವ್ಯಾಪಾರ- ವಹಿವಾಟು ಇಳಿಮುಖವಾಗಲು ಕಾರಣವಾಗಿದೆ. ಹೋಟೆಲ್ ಅಥವಾ ರೆಸ್ಟೋರೆಂಟ್ ಕಟ್ಟಡದ ಯಾವುದೇ ಭಾಗದಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಿದ್ದರೂ ಆ ಕಟ್ಟಡದಲ್ಲಿನ ಹವಾನಿಯಂತ್ರಣವ್ಯವಸ್ಥೆಯಿಲ್ಲದ ಆವರಣ ಹಾಗೂ ದರ್ಶಿನಿಯ ತಿಂಡಿ- ತಿನಿಸಿಗೆ ಶೇ.18ರಷ್ಟು ತೆರಿಗೆ ವಿಧಿಸುವ ವ್ಯವಸ್ಥೆಯಿದೆ. ಇದರಿಂದ ಒಂದೆಡೆ ಗ್ರಾಹಕರಿಗೆ ಹೊರೆಯಾಗುತ್ತಿದ್ದರೆ, ಮತ್ತೂಂದೆಡೆ ಹೋಟೆಲ್ ಮಾಲೀಕರು ಸಂದಿಗಟಛಿ ಸ್ಥಿತಿಗೆ ಸಿಲುಕುವಂತಾಗಿದೆ.
ಸರಕು ಮತ್ತು ಸೇವಾ ತೆರಿಗೆ ದೇಶಾದ್ಯಂತ ಜುಲೈ 1ರಿಂದ ಜಾರಿಯಾಗಿದ್ದು, ಈಗಾಗಲೇ 50 ದಿನ ಕಳೆದಿದೆ. ನೂತನ ವ್ಯವಸ್ಥೆಯಡಿ ವ್ಯವಹಾರ ನಡೆಸಲು ಕೆಲ ತಾಂತ್ರಿಕ ಅಡಚಣೆ, ಗೊಂದಲ ಸೇರಿ ತೆರಿಗೆ ಪ್ರಮಾಣದ ಬಗ್ಗೆ ವ್ಯಾಪಾರ- ವಹಿವಾಟುದಾರರಲ್ಲೂ ಅಸ್ಪಷ್ಟತೆ ಮುಂದುವರಿದೆ. ಇನ್ನೊಂದೆಡೆ ಜುಲೈ ವಹಿವಾಟು ವಿವರ, ತೆರಿಗೆ ಪಾವತಿ
ಪ್ರಕ್ರಿಯೆಯಲ್ಲೂ ಕೆಲ ಸಮಸ್ಯೆಗಳು ನಿವಾರಣೆಯಾಗಿಲ್ಲ. ಇದೆಲ್ಲ ವ್ಯಾಪಾರ- ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಜಿಎಸ್‌ಟಿಯಿಂದ ತೊಂದರೆಯುಂಟಾಗಿರುವುದು ಒಂದು ಭಾಗ. ಶೇ.30 ವಹಿವಾಟು ಕುಸಿತ: ಜಿಎಸ್‌ಟಿ ಜಾರಿ ಬಳಿಕ ಕೆಲ ವ್ಯವಹಾರ ಉದ್ಯಮಗಳಿಗೆ ಭಾರಿ ಹೊಡೆತ ಬಿದ್ದಿದ್ದು, ಇದರಲ್ಲಿ ಹೋಟೆಲ್ ಉದ್ಯಮವೂ ಒಂದಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಸಸ್ಯಾಹಾರಿ, ಮಾಂಸಾಹಾರಿ ಹೋಟೆಲ್,
ರೆಸ್ಟೋರೆಂಟ್‌ಗಳ ವಹಿವಾಟಿನಲ್ಲಿ ಶೇ.30ರಷ್ಟು ಕುಸಿತ ಉಂಟಾಗಿದೆ ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ನೋಟು ಅಮಾನ್ಯದ ಬಳಿಕ ಶೇ.10ರಷ್ಟು ವಹಿವಾಟು ಕುಸಿತ ಉಂಟಾಗಿತ್ತು.
Related Articles
Advertisement
ಬೆಲೆ ಏರಿಕೆ ಎಫೆಕ್ಟ್: ಹೋಟೆಲ್ ಉದ್ಯಮ ವಹಿವಾಟು ಕುಸಿತಕ್ಕೆ ಪ್ರಮುಖ ಕಾರಣ ಬೆಲೆ ಏರಿಕೆ ಎನ್ನಲಾಗಿದೆ.ಹೋಟೆಲ್, ರೆಸ್ಟೋರೆಂಟ್‌ಗಳು ಪ್ರಮುಖವಾಗಿ ಬಳಸುವ ಆಹಾರ ಪದಾರ್ಥಗಳಿಗೆ (ಬ್ರಾಂಡೆಡ್, ಪ್ಯಾಕೇಜ್x ಪದಾರ್ಥ ಹೊರತುಪಡಿಸಿ) ಜಿಎಸ್‌ಟಿ ತೆರಿಗೆಯಿಲ್ಲದ ಕಾರಣ ಹೋಟೆಲ್ ಉಪಾಹಾರ, ಊಟ, ತಿಂಡಿ, ತಿನಿಸಿನ ಬೆಲೆ ಇಳಿಕೆಯಾಗುವ ನಿರೀಕ್ಷೆಯಿತ್ತು. ಆದರೆ ಜಿಎಸ್‌ಟಿ ಜಾರಿ ಬಳಿಕ ಬೆಲೆ ಏರಿಕೆಯಾಗಿತ್ತು. ಆರ್ಥಿಕ ತಜ್ಞರು, ವಾಣಿಜ್ಯ ತೆರಿಗೆಇಲಾಖೆ ಅಧಿಕಾರಿಗಳು ಹೋಟೆಲ್ ತಿಂಡಿ, ತಿನಿಸಿನ ಬೆಲೆ ವಾಸ್ತವದಲ್ಲಿ ಬೆಲೆ ಇಳಿಕೆಯಾಗಬೇಕು ಎಂದು
ಪ್ರತಿಪಾದಿಸುತ್ತಿರುವುದರಿಂದ ಗ್ರಾಹಕರು ಹೋಟೆಲ್‌ಗಳಿಂದ ವಿಮುಖವಾಗುವಂತೆ ಮಾಡಿತು. ಜಿಎಸ್‌ಟಿ ನಿಯಮದಿಂದ ಗ್ರಾಹಕರಿಗೆ ಹೊರೆ:
ಹೋಟೆಲ್ ಗ್ರಾಹಕರ ಸಂಖ್ಯೆ ಇಳಿಕೆಯಾಗಲು ಜಿಎಸ್‌ಟಿ ನಿಯಮ ಕೂಡ ಕಾರಣ ಎಂದು ಮಾಲೀಕರು ದೂರುತ್ತಾರೆ. ಒಂದು ಕಟ್ಟಡದಲ್ಲಿನ ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಿದ್ದರೆ ಅಲ್ಲಿ ವಿತರಿಸುವ ತಿಂಡಿ- ತಿನಿಸಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅದೇ ಕಟ್ಟಡದಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿಲ್ಲದ ಆವರಣ ಹಾಗೂ ದರ್ಶಿನಿಯಲ್ಲಿ ವಿತರಿಸುವ ತಿಂಡಿ- ತಿನಿಸಿಗೆ ಶೇ.18ರಷ್ಟು ತೆರಿಗೆ ವಿಧಿಸುವುದು ಕಡ್ಡಾಯವಾಗಿದೆ. ಫ್ಯಾನ್, ಕುರ್ಚಿ ಸೌಲಭ್ಯವಿಲ್ಲದ ದರ್ಶಿನಿಯಲ್ಲೂ ಶೇ.18ರಷ್ಟು ತೆರಿಗೆ ವಿಧಿಸುತ್ತಿರುವುದಕ್ಕೆ ಗ್ರಾಹಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹವಾನಿಯಂತ್ರಿತ ವ್ಯವಸ್ಥೆಯಿಲ್ಲದ ಪ್ರತ್ಯೇಕ ದರ್ಶಿನಿ, ಹೋಟೆಲ್‌ಗಳಲ್ಲಿ ಶೇ.12ರಷ್ಟು ತೆರಿಗೆ ವಿಧಿಸುವುದರಿಂದ ಅವುಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಮಾಲೀಕರು ಅಳಲು ತೋಡಿಕೊಳ್ಳುತ್ತಾರೆ. ಶೇ.30ರಿಂದ ಶೇ.35ರಷ್ಟು ವಹಿವಾಟು ಕುಸಿತ:
ಜಿಎಸ್‌ಟಿ ಜಾರಿ ಬಳಿಕ ಹೋಟೆಲ್ ಉದ್ಯಮದ ವ್ಯವಹಾರ ಶೇ.30ರಿಂದ ಶೇ.35ರಷ್ಟು ಕುಸಿತವಾಗಿದೆ. ಒಬ್ಬರೇ ಮಾಲೀಕರು ಒಂದೇ ಕಟ್ಟಡದಲ್ಲಿ ನಡೆಸುವ ಹೋಟೆಲ್‌ನ ಯಾವುದೇ ಮೂಲೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಿದ್ದರೆ ಆ ಕಟ್ಟಡದಲ್ಲಿನ ದರ್ಶಿನಿ, ಹವಾನಿಯಂತ್ರಣರಹಿತ ವಿಭಾಗ ಹಾಗೂ ಹವಾನಿಯಂತ್ರಿತ ವಿಭಾಗದಲ್ಲಿ ವಿತರಿಸುವ ಆಹಾರಕ್ಕೆ
ಸಮಾನವಾಗಿ ಶೇ.18ರಷ್ಟು ತೆರಿಗೆ ವಿಧಿಸಬೇಕು ಎಂದು ನಿಯಮದಲ್ಲಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಅದರ ಪರಿಣಾಮ ಉದ್ಯಮದ ಮೇಲೆ ಬೀಳುತ್ತಿದೆ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಖಜಾಂಜಿ ಪಿ.ಸಿ.ರಾವ್ ತಿಳಿಸಿದರು. ಮುಖ್ಯವಾಗಿ ಹವಾನಿಯಂತ್ರಿತ ವ್ಯವಸ್ಥೆಯಿರುವ ಆವರಣಕ್ಕಷ್ಟೇ ಶೇ.18ರಷ್ಟು ತೆರಿಗೆ ವಿಧಿಸಿ ಉಳಿದ ಆವರಣದಲ್ಲಿ ವಿತರಿಸುವ ಆಹಾರಕ್ಕೆ ಶೇ.12ರಷ್ಟು ತೆರಿಗೆಯನ್ನಷ್ಟೇ ವಿತರಿಸುವ ವ್ಯವಸ್ಥೆ ತರುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸದಿದ್ದರೆ ಹೋಟೆಲ್ ಉದ್ಯಮದವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದರು. ಉದ್ಯಮ ನಡೆಸೋದೆ ಕಷ್ಟ
ನೋಟು ಅಮಾನ್ಯವಾದಾಗ ಶೇ.10ರಷ್ಟು ವ್ಯವಹಾರ ಕುಸಿದಿತ್ತು. ಜಿಎಸ್‌ಟಿಯಿಂದಾಗಿ ಶೇ.30ರಷ್ಟು ವ್ಯವಹಾರ ಇಳಿಕೆಯಾಗಿದೆ. ಇದೇ ರೀತಿ ಮುಂದುವರಿದರೆ ಉದ್ಯಮ ನಡೆಸುವುದೇ ಕಷ್ಟಕರವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಟಾರ್ ತಿಳಿಸಿದರು. ರಸೀದಿಯಿಲ್ಲದ ವ್ಯವಹಾರಕ್ಕೆ ಪ್ರೇರಣೆ:
ಹೋಟೆಲ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಜಿಎಸ್‌ಟಿಯಡಿ ಕೆಲ ನಿಯಮಾವಳಿಗಳು ವಿಚಿತ್ರವಾಗಿವೆ. ಫ್ಯಾನು, ಕುರ್ಚಿ
ಸೌಲಭ್ಯವಿಲ್ಲದ ದರ್ಶಿನಿಯಲ್ಲೂ ಶೇ.18ರಷ್ಟು ತೆರಿಗೆ ವಿಧಿಸುವುದು ನ್ಯಾಯಸಮ್ಮತವಲ್ಲ. ಇದರಿಂದ ಹೋಟೆಲ್ ಉದ್ಯಮದವರು ರಸೀದಿಯಿಲ್ಲದೆ ವ್ಯವಹಾರ ನಡೆಸಲು ಪ್ರೇರಣೆ ನೀಡಿದಂತಾಗುತ್ತದೆ. ಇದರಿಂದ ಸರ್ಕಾರಕ್ಕೆ ತೆರಿಗೆ ನಷ್ಟ ಉಂಟಾಗಲಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.