ನವದೆಹಲಿ: ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿ ಮರಾಠ ಸೇನಾ ನಾಯಕನಾಗಿದ್ದ ತಾನಾಜಿ ಮಾಲುಸರೆ ಕೊಂಢಾನ ಕೋಟೆಯನ್ನು ಮೊಗಲಿರಿಂದ ಮರುವಶಪಡಿಸಿಕೊಳ್ಳುವ ಕಥಾ ಹಂದರವನ್ನು ಹೊಂದಿರುವ ‘ತಾನಾಜಿ-ದಿ ಅನ್ ಸಂಗ್ ವಾರಿಯರ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ಅಜಯ್ ದೇವಗನ್ ಇದೀಗ ದಕ್ಷಿಣದತ್ತ ಮುಖ ಮಾಡಿದ್ದಾರೆ.
ಹೌದು ಅಜಯ್ ದೇವಗನ್ ಅವರು ಸೂಪರ್ ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ಆರ್.ಆರ್.ಆರ್.ನಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ತಾನಾಜಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿರುವುದರಿಂದ ಅಜಯ್ ದೇವಗನ್ ಅವರು ನಿರ್ಮಾಪಕರಾಗಿಯೂ ಗೆದ್ದಂತಾಗಿದೆ.
ಈ ಖುಷಿಯಲ್ಲಿಯೇ ದೇವಗನ್ ಅವರು ‘ಆರ್.ಆರ್.ಆರ್.’ ಚಿತ್ರದ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮೊದಲ ದಿನದ ಸೆಟ್ ನ ಚಿತ್ರವನ್ನು ಚಿತ್ರೋದ್ಯಮ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆರ್.ಆರ್.ಆರ್. ಚಿತ್ರ ಜುಲೈ 30ರಂದು 10 ಭಾರತೀಯ ಭಾಷೆಗಳಲ್ಲಿ ತೆರಕಾಣಲಿದೆ. ಈ ಚಿತ್ರದ ಫರ್ಸ್ಟ್ ಲುಕ್ ಕಳೆದ ವರ್ಷದ ಮೇ ತಿಂಗಳಿನಲ್ಲಿ ಬಿಡುಗಡೆಗೊಂಡಿತ್ತು.
ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಬಾಹುಬಲಿ ಚಿತ್ರ ಸರಣಿ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಬದುಕಿದ್ದ ಇಬ್ಬರು ಮಹಾನ್ ಕ್ರಾಂತಿಕಾರಿ ನಾಯಕರಾಗಿದ್ದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಮ್ ಭೀಮ್ ಅವರ ಬದುಕು ಹಾಗೂ ಹೋರಾಟವನ್ನು ಸ್ಪೂರ್ತಿಯಾಗಿರಿಸಿಕೊಂಡು ರಾಜಮೌಳಿ ತಯಾರಿಸುತ್ತಿರುವ ಈ ಫಿಕ್ಷನ್ ಚಿತ್ರದಲ್ಲಿ ಟಾಲಿವುಡ್ ನ ಘಟಾನುಘಟಿ ನಟರಾದ ಜೂನಿಯರ್ ಎನ್.ಟಿ.ಆರ್. ಮತ್ತು ರಾಂ ಚರಣ್ ತೇಜ ಅವರು ಕ್ರಮವಾಗಿ ಕೋಮರಮ್ ಭೀಮ್ ಹಾಗೂ ಅಲ್ಲುರಿ ಸೀತಾರಾಮ ರಾಜು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.