ಮಣಿಪಾಲ: ದಿಯಾ ಸಿನಿಮಾ ನನಗೆ ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ ದಿಯಾ ಹಿಂದಿ ರಿಮೇಕ್ ನಲ್ಲೂ ನಾನೇ ನಾಯಕ ನಟನ ಪಾತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಗೂ ಕಾಲಿಟ್ಟಂತಾಗಿದೆ ಎಂದು ತುಳು ಚಿತ್ರರಂಗದ ಯುವ ನಟ ಪ್ರಥ್ವಿ ಅಂಬಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ದಿಯಾ ಚಿತ್ರದ ನಾಯಕ, ರೇಡಿಯೋ ಜಾಕಿ ಪ್ರಥ್ವಿ ಅಂಬಾರ್ ಬುಧವಾರ ಉದಯವಾಣಿ ಕಚೇರಿಗೆ ಭೇಟಿ ನೀಡಿ, ತಮ್ಮ ಸಿನಿ ಪಯಣದ ಬಗ್ಗೆ ಅನುಭವವನ್ನು ಉದಯವಾಣಿ ಡಾಟ್ ಕಾಮ್ ನ “ತೆರದಿದೆ ಮನೆ ಬಾ ಅತಿಥಿ” ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಹಲವು ಮಂದಿ ಅಭಿಮಾನಿಗಳ ಪ್ರಶ್ನೆಗಳಿಗೂ ಉತ್ತರಿಸಿದರು.
ದಿಯಾ ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದು 2014ರಲ್ಲಿ. ಸುಮಾರು ಒಂದೂವರೆ ವರ್ಷಗಳ ಕಾಲ ತರಬೇತಿ ಪಡೆದಿದ್ದೆ. ದೀರ್ಘಕಾಲದ ನಂತರ 2020ರಲ್ಲಿ ದಿಯಾ ಸಿನಿಮಾ ಬಿಡುಗಡೆಯಾಗಿತ್ತು. ನನ್ನ ಹಾಗೂ ಸಿನಿಮಾ ತಂಡದ ನಿರೀಕ್ಷೆಗೂ ಮೀರಿ ಚಿತ್ರ ಯಶಸ್ವಿಯಾಗಿತ್ತು. ಅಲ್ಲದೇ ಸ್ಯಾಂಡಲ್ ವುಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸ್ವತಃ ಮೊಬೈಲ್ ಗೆ ಕರೆ ಮಾಡಿ ಅಭಿನಂದಿಸಿದ್ದರು ಇದು ತುಂಬಾ ಖುಷಿ ಕೊಟ್ಟ ಸಂಗತಿ ಎಂದರು.
ಇದೇ ಮಾರ್ಚ್ 26ಕ್ಕೆ “ಇಂಗ್ಲಿಷ್ ಎಂಕ್ಲೆಗ್ ಬರ್ಪುಜ್ಜಿ ಬ್ರೊ” ತುಳು ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರ ವಿದೇಶಗಳಲ್ಲಿಯೂ ತೆರೆ ಕಾಣಲಿದೆ ಎಂದು ಅಂಬಾರ್ ಹೇಳಿದರು. ನಂತರ ಲೈಫ್ ಈಸ್ ಬ್ಯೂಟಿಫುಲ್, ಶುಗರ್ ಲೆಸ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಶಿವಣ್ಣ ಜತೆ ನಟಿಸಿರುವ ಶಿವಪ್ಪ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ ಎಂದು ಪ್ರಥ್ವಿ ಅಂಬಾರ್ ಲೈವ್ ಚಾಟ್ ನಲ್ಲಿ ಹೇಳಿದರು.
ಚಿತ್ರನಟ ಪ್ರಥ್ವಿ ಅಂಬಾರ್ ಅವರನ್ನು ಉದಯವಾಣಿ ಪ್ರಸರಣ ವಿಭಾಗದ ಡಿಜಿಎಂ ಸತೀಶ್ ಶೆಣೈ ಮತ್ತು ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್ ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಉದಯವಾಣಿ ಡಿಜಿಟಲ್ ಹಾಗೂ ಪತ್ರಿಕೆಯ ಸದಸ್ಯರು ಹಾಜರಿದ್ದರು.