Advertisement

ಭಾವುಕ ವಿದಾಯ: 132 ವರ್ಷಗಳ ಕಾಲ ಸುದೀರ್ಘ ಸೇವೆ ನೀಡಿ ಇತಿಹಾಸದ ಪುಟ ಸೇರಿದ ಮಿಲಿಟರಿ ಡೈರಿ  

03:29 PM Apr 01, 2021 | Team Udayavani |

ನವದೆಹಲಿ : ಕಳೆದ 132 ವರ್ಷಗಳಿಂದ ಭಾರತೀಯ ಸೇನೆಗೆ ಹಾಲು ಪೂರೈಸುತ್ತ ಬಂದಿದ್ದ ಡೈರಿಗಳು ಇದೀಗ ಇತಿಹಾಸದ ಪುಟ ಸೇರುತ್ತಿವೆ. ಹೌದು, ಭಾರತೀಯ ಸೇನೆಯ ಅಧೀನದಲ್ಲಿ ಅಂಬಾಲಾ, ಕೋಲ್ಕತ್ತಾ, ಶ್ರೀನಗರ, ಆಗ್ರಾ, ಪಠಾಣ್‍ಕೋಟ್, ಲಕ್ನೋ, ಮಿರಠ್, ಅಲಹಾಬಾದ್ ಹಾಗೂ ಗುವಾಹಟಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸುಮಾರು 20,000 ಎಕರೆ ಜಮೀನಿನಲ್ಲಿ ಹಾಲಿನ ಡೈರಿಗಳಿದ್ದವು. ಇವುಗಳಿಂದ ದೇಶದ ವಿವಿಧ ಭಾಗದಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಯೋಧರಿಗೆ ನಿತ್ಯ ಹಾಲು ಪೂರೈಕೆಯಾಗುತ್ತಿತ್ತು.

Advertisement

ಬ್ರಿಟಿಷರ್ ಆಡಳಿತಾವಧಿಯಲ್ಲಿ ಅಂದರೆ ಫೆಬ್ರುವರಿ 1, 1889 ರಲ್ಲಿ ಮೊದಲ ಡೈರಿ ಸ್ಥಾಪಿಸಲ್ಪಟ್ಟಿತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಇದರ ಜತೆಗೆ ಹೆಚ್ಚುವರಿಯಾಗಿ 130 ಡೈರಿಗಳನ್ನು ಸ್ಥಾಪಿಸಲಾಯಿತು. ಯೋಧರಿಗೆ ಆರೋಗ್ಯಯುತ ಹಾಗೂ ಪೌಷ್ಠಿಕ ಹಾಲು ಸರಬರಾಜು ಮಾಡುವ ನಿಟ್ಟಿನಲ್ಲಿ ಈ ಡೈರಿಗಳನ್ನು ತೆರೆಯಲಾಗಿತ್ತು. ಇದೀಗ ಭಾರತೀಯ ಸೇನೆ ಈ ಡೈರಿಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದ್ದು, ಇಂದಿನಿಂದ ಐತಿಹಾಸಿಕ ಹಾಲು ಉತ್ಪಾದನಾ ಕೇಂದ್ರದ ಬಾಗಿಲು ಮುಚ್ಚುತ್ತಿವೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಲೆಫ್ಟಿನೆಂಟ್ ಜನರಲ್ ಶಶಾಂಕ್ ಮಿಶ್ರಾ, ನಿರಂತರ 132 ವರ್ಷಗಳ ಸೇವೆಯ ನಂತರ ಮಿಲಿಟರಿ ಡೈರಿಗಳು ಇಂದಿನಿಂದ ಮುಚ್ಚುತ್ತಿವೆ. ಫೆ.1,1889 ರಲ್ಲಿ ಅಲಹಾಬಾದ್(ಪ್ರಸ್ತುತ ಪ್ರಯಾಗ್ ರಾಜ್ )ನಲ್ಲಿ ಮೊದಲ ಡೈರಿ ಪ್ರಾರಂಭವಾಯಿತು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 130 ಫಾರ್ಮ್ಸ್ ಗಳನ್ನು ತೆರೆಯಲಾಯಿತು. ಇವುಗಳಿಂದ ತುಂಬಾ ಉಪಯೋಗವಾಯಿತು. 1970ರಲ್ಲಿ ಭಾರತದಲ್ಲಿ ಉಂಟಾದ ಕ್ಷೀರ ಕ್ರಾಂತಿಯ ಮುಂಚೆಯೇ ಹಾಲು ಉತ್ಪಾದನೆಯಲ್ಲಿ ಮುಂಚೂಣೆಯಲ್ಲಿದ್ದವು. ಕೇವಲ ಯೋಧರಿಗೆ ಹಾಲು ಪೂರೈಸುವುದಲ್ಲದೆ, ದೇಶದಲ್ಲಿ ಡೈರಿ ಉದ್ಯಮ ಪ್ರೋತ್ಸಾಹಿಸುವಲ್ಲಿ ಇವುಗಳು ಪ್ರಮುಖ ಪಾತ್ರ ನಿಭಾಯಿಸುವೆ ಎಂದಿದ್ದಾರೆ.

ಭಾರತೀಯ ಸೇನೆಗೆ ಈ ಡೈರಿಗಳು ನೀಡಿರುವ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ಎಲ್ಲೆಡೆ ಹಾಲು ದೊರೆಯುತ್ತದೆ. ಹಾಲಿನ ಡೈರಿಗಳಿದ್ದ ಜಾಗವನ್ನು ಸೇನಾ ಕಾರ್ಯಕ್ಕೆ ಬಳಸುತ್ತೇವೆ. ಡೈರಿಯಲ್ಲಿರುವ ಹಸುಗಳನ್ನು ಆಯಾ ರಾಜ್ಯಗಳ ಸುಪರ್ದಿಗೆ ನೀಡಿದ್ದೇವೆ. ಹಾಗೂ ಡೈರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಬೇರೆ ಇಲಾಖೆಗಳಲ್ಲಿ ಉದ್ಯೋಗ ಕಲ್ಪಿಸಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next