ಹೈದರಾಬಾದ್ : ಒಡಿಶಾದಲ್ಲಿ ವ್ಯಾಪಕ ನಾಶ ನಷ್ಟ ಉಂಟುಮಾಡಿದ ಬಳಿಕ ವಿನಾಶಕಾರಿ ತಿತ್ಲಿ ಚಂಡಮಾರುತ ಇದೀಗ ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ್ದು ಇಲ್ಲಿಯೂ ತನ್ನ ಆರ್ಭಟವನ್ನು ತೋರುತ್ತಿದೆ. ಅಂತೆಯೇ ಈ ತನಕ ಒಟ್ಟು 8 ಮಂದಿಯನ್ನು ಬಲಿಪಡೆದಿದೆ.
ಶ್ರೀಕಾಕುಳಂ ಜಿಲ್ಲೆಯಲ್ಲಿ ತನ್ನ ತಾಂಡವ ನರ್ತನ ಪ್ರದರ್ಶಿಸಿರುವ ತಿತ್ಲಿ ಚಂಡಮಾರುತ ಇಲ್ಲಿ ಕನಿಷ್ಠ ಇಬ್ಬರನ್ನು ಬಲಿ ಪಡೆದಿದೆ.
ಒಡಿಶಾದಲ್ಲಿ ತಿತ್ಲಿ ಚಂಡಮಾರುತ ಹಲಾರು ಮರಗಳನ್ನು ವಿದ್ಯುತ್ ಕಂಬಗಳನ್ನು ಧರೆಗುರುಳಿಸಿ ಅಟ್ಟಹಾಸ ಮೆರೆಯಿತು. ಒಡಿಶಾದ ಗಂಜಂ ಮತ್ತು ಗಜಪತಿ ಜಿಲ್ಲೆಗಳಲ್ಲಿ ತಾಂಡವ ನರ್ತನ ತೋರಿದ ಹೊರತಾಗಿ ಯಾವುದೇ ಜೀವಗಳನ್ನು ಅದು ಇಲ್ಲಿ ಬಲಿ ಪಡೆಯದಿರುವುದು ಅದೃಷ್ಟದಾಯಕ ಎನಿಸಿತು. ಒಡಿಶಾದಲ್ಲಿ ಎಲ್ಲಿಯೂ ತಿತ್ಲಿ ಚಂಡಮಾರುತದಿಂದ ಸಾವು ನೋವು ಸಂಭವಿಸಿದ ವರ್ತಮಾನ ಈ ತನಕ ಇಲ್ಲ.
ಹಾಗಿದ್ದರೂ ಒಡಿಶಾದ ಗಂಜಾಂ, ಗಜಪತಿ ಮತ್ತು ಪುರಿ ಜಿಲ್ಲೆಗಳಲ್ಲಿ ತಿತ್ಲಿ ಚಂಡಮಾರುತ ಭಾರಿಯಿಂದ ಭಾರೀ ಮಳೆಯನ್ನು ಸುರಿಸಿತು. ಪರಿಣಾಮವಾಗಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿದು ಹೋಯಿತು ಎಂದು ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಬಿ ಪಿ ಸೇಠಿ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ತಿತ್ಲಿ ಚಂಡಮಾರುತದ ಪ್ರಭಾವದಲ್ಲಿ 2 ಸಿಎಂ ನಿಂದ 26 ಸಿಎಂ ಮಳೆ ಸುರಿದಿದೆ. ರಸ್ತೆ ಸಂಪರ್ಕ ಜಾಲ ತೀವ್ರವಾಗಿ ಬಾಧಿತವಾಗಿದೆ.
ಶ್ರೀಕಾಕುಳದವರೇ ಆದ ಸಾರಿಗೆಸಚಿವ ಕೆ ಅಚ್ಚನ್ ನಾಯ್ದು ಅವರು ಚಂಡಮಾರತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.