Advertisement

ನೋಟು ಅಮಾನ್ಯತೆಯ ನಂತರ

10:28 AM Nov 12, 2017 | |

ನವೆಂಬರ್‌ 8, 2016ರಂದು ದೇಶದಲ್ಲಿನ ಕಪ್ಪು ಹಣವನ್ನು ಅಳಿಸಿಹಾಕಲು 500 ಹಾಗೂ 1000 ರೂ. ಮೌಲ್ಯದ ನೋಟುಗಳು ಅಮಾನ್ಯಗೊಂಡು ಒಂದು ವರ್ಷವು ಕಳೆದಿದೆ. ಇದ್ದಕ್ಕಿದ್ದ ಹಾಗೆ ನವೆಂಬರ್‌ 8ರಂದು ದೊಡ್ಡ ಮೌಲ್ಯದ ನೋಟುಗಳು ಕಾಗದದ ಚೂರಾದದ್ದು ಚರಿತ್ರೆಯ ಪುಟಕ್ಕೆ ಸೇರಿದರೂ ಆಗಾಗ ನೆನಪಿಗೆ ಬರುವಂತಹ ಮಹತ್ತರವಾದ ಆರ್ಥಿಕ ನೀತಿ. ತದನಂತರ ನಾವೆಲ್ಲ ಹಣಕ್ಕಾಗಿ ಪರದಾಡಿದ್ದು, ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ಕಾದದ್ದು, ಹಣ ಸಿಗದೇ ನಿರಾಶರಾಗಿ ಬರಿಗೈಲಿ  ವಾಪಾಸು ಬಂದದ್ದು, ಎಟಿಎಂ ಮೆಶಿನ್‌ ಬರಿದಾದದ್ದು, ಅಮಾನ್ಯತೆಯ ಸಿಹಿ ಕಹಿ ಆಗಾಗ ನೆನಪಿಗೆ ಬರುತ್ತಲೇ ಇರುತ್ತವೆ. ಅದೊಂದು ರೋಚಕ ಅನುಭವವೆಂದರೆ ತಪ್ಪಿಲ್ಲ. ಯಾಕೆಂದರೆ ಇಂದು ಸಮಾಜದಲ್ಲಿ ಹಣವೇ ಎಲ್ಲವೂ ಆಗಿರುವಾಗ ಅದೇ ಇಲ್ಲವಾದ ಒಂದಷ್ಟು ದಿನಗಳು ಹೇಗಿರುತ್ತವೆ ಎಂಬ ಅನುಭವವನ್ನು ಈ ನಿರ್ಧಾರ ಒದಗಿಸಿಕೊಟ್ಟದ್ದು ನಿಜ. 

Advertisement

ಬಹು ಚರ್ಚಿತ ವಿಷಯ
ನೋಟು ಅಮಾನ್ಯತೆಯ ಸುಧಾರಣೆ ಆಗಿ ಒಂದು ವರ್ಷ ಕಳೆದರೂ ಇವತ್ತಿಗೂ ಆಗಾಗ ಚರ್ಚೆಯಲ್ಲಿರುವ ವಿಷಯ “ಅಮಾನ್ಯತೆಯ ಪರಿಣಾಮ ಏನಾಯಿತು?’ “ಎಷ್ಟು ಮಂದಿ ಜನನಾಯಕರು, ಕಪ್ಪು ಕುಳಗಳು ಕಪ್ಪು ಹಣವನ್ನಿಟ್ಟುಕೊಂಡು ಸಿಕ್ಕಿ ಬಿದ್ದರು?’ “ಕಪ್ಪು ಹಣ ಸಿಕ್ಕಿದೆಯಾ?’ “ಹಣವಿದ್ದವರು ಹೇಗೆ ತಮ್ಮ ಹಣವನ್ನು ಬಚ್ಚಿಟ್ಟುಕೊಂಡರು?’ “ಗಳಿಸಿದವರು ಉಳಿಸದೆ ಬಿಡಲಾರರು. ಗಳಿಸಿದ ಹಣವನ್ನು ತಮ್ಮದನ್ನಾಗಿ ಸೂಟ್‌ ಕೇಸ್‌ನಲ್ಲಿ ಇಟ್ಟುಕೊಂಡರಾ?’ “ಹೇಗೆ ಕಪ್ಪು ಹಣವನ್ನು ಹೂಡಿಕೆ ಮಾಡಿದರು- ಚಿನ್ನದÇÉೋ? ರಿಯಲ್‌ ಎಸ್ಟೇಟÇÉೋ?’ ಎಂಬೆಲ್ಲ ವಿಷಯಗಳ ಬಗ್ಗೆಯೇ ಗಂಭೀರ ಚರ್ಚೆ. ಅಮಾನ್ಯತೆಯ ಮೊದಲು ಸ್ಥಿತಿ ಹೇಗಿತ್ತು? ಈಗ ಹೇಗಿದೆ? ಎಲ್ಲ ಆರ್ಥಿಕ ಸಂಕಷ್ಟಗಳಿಗೆ ಸಂಬಂಧಿಸಿ ಹೇಳುವುದುಂಟು, “ಅಮಾನ್ಯತೆಯ ಮೊದಲು ಎಲ್ಲವೂ ಚೆನ್ನಾಗಿತ್ತು.’ ಈಗ ಮಾತ್ರ ಎಲ್ಲವೂ ಸಪ್ಪೆ ಯಾಕೆ? ಯಾವಾಗ ಕಪ್ಪು ಹಣದ ಲೆಕ್ಕ ಸಿಗುವುದು? ಇನ್ನೆಷ್ಟು ಕಾಯಬೇಕು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮಂದಿ ಜಾಸ್ತಿ ಮತ್ತು ಇದೇ ಬಹು ಚರ್ಚಿತ ವಿಷಯ.

ನಾಣ್ಯಕ್ಕೆ ಎರಡು ಮುಖಗಳಿವೆ. ಹಾಗೆಯೇ ಆರ್ಥಿಕ ನೀತಿಗೆ ಪರ -ವಿರೋಧ ವಾದಗಳು ಇದ್ದೇ ಇವೆ. ಪರವಾಗಿರುವವರು ಸಂಭ್ರಮಿಸುವರು, ವಿರೋಧಿಸುವವರು ಕರಾಳ ದಿನವನ್ನಾಗಿ ಆಚರಿಸುವರು. ಒಟ್ಟಾರೆ ಸತ್ಯ ಇವೆರಡರ ಮಧ್ಯದಲ್ಲಿದೆ. ಅನೇಕರಿಗೆ ಬ್ಯಾಂಕ್‌ ಖಾತೆ ಇಲ್ಲ. ಯಾಕೆಂದರೆ, ಬ್ಯಾಂಕಿಗೆ ಹೋಗುವ ಅಭ್ಯಾಸ ಇಲ್ಲ. ಅವರು ಅಭ್ಯಾಸ ಮಾಡಿಕೊಳ್ಳಲಿಲ್ಲ. ಅನೇಕರಿಗೆ ಪ್ಲಾಸ್ಟಿಕ್‌ ಕಾರ್ಡುಗಳ ಬಳಕೆಯ ಬಗೆಗೆ ಅರಿವಿಲ್ಲ. ತಂತ್ರಜ್ಞಾನ ಬಳಕೆಗೆ ಹಿಂದು ಮುಂದು ನೋಡುವುದು, ಸ್ಮಾರ್ಟ್‌ ಫೋನ್‌ ಇದ್ದರೂ ಅದನ್ನು ಬ್ಯಾಂಕ್‌ ವ್ಯವಹಾರಕ್ಕಾಗಿ ಬಳಸಿಕೊಳ್ಳುವ ಬಗ್ಗೆ ನಮಗಿರುವ ಅಜ್ಞಾನ ಎಲ್ಲವೂ ಅಮಾನ್ಯತೆಯ ಸಮಯದಲ್ಲಿ ಅನೇಕ ರೀತಿಯ ನೋವನ್ನು ತಂದೊಡ್ಡಿತ್ತು. ಎಲ್ಲ ಸಮಸ್ಯೆಗಳಿಗೂ ನಾವು ಕೂಡ ಸ್ವಲ್ಪ ಕಾರಣವಿರಬಹುದೆಂದರೆ ತಪ್ಪಿಲ್ಲ. ಅಮಾನ್ಯತೆಯ ತರುವಾಯ ಡಿಜಿಟಲ್‌ ವ್ಯವಹಾರ ಹೆಚ್ಚಾದ ಪರಿಣಾಮ 16.41 ಲಕ್ಷ ಕೋಟಿಗಳಷ್ಟು ಇದ್ದ ಹಣದ ಚಲಾವಣೆ ಸುಮಾರು 13.10 ಲಕ್ಷ ಕೋಟಿಗಿಳಿಯಿತು. ಅಂದರೆ ಹಣದ ಚಲಾವಣೆ ಶೇ.20ರಷ್ಟು ತಗ್ಗಿತು. ಅನೇಕರು ಈಗ ಮತ್ತೆ ಹಣದ ಚಲಾವಣೆ ಸರಾಗವಾಗಿರುವುದರಿಂದ ಡಿಜಿಟಲ್‌ ರಗಳೆ ಯಾಕೆ, ನಗದು ಹಣವನ್ನೇ ಬಳಸೋಣ ಎಂದು ಮತ್ತೆ ನಗದು ವ್ಯವಹಾರಕ್ಕೆ ಮನಸ್ಸು ಮಾಡಿದರೆ ಆಶ್ಚರ್ಯವಿಲ್ಲ. ಅನಿವಾರ್ಯವಾದರೆ ಮಾತ್ರ ಹೊಸತನಕ್ಕೆ ಒಗ್ಗಿಕೊಳ್ಳುವವರು ನಾವು. ಹೊಸ ಬದಲಾವಣೆಗಳನ್ನು ನಾವಾಗಿಯೇ ಸ್ವಾಗತಿಸುವವರಾಗಿದ್ದರೆ ಪ್ರಾಯಶಃ ಸ್ವತ್ಛ ಬಾರತ, ಡಿಜಿಟಲ್‌ ಇಂಡಿಯಾ ಕಾರ್ಯಕ್ರಮಗಳೂ ಇಷ್ಟು ಹೊತ್ತಿಗೆ ಮನೆ ಮಾತಾಗಬೇಕಿತ್ತು. ಆದರೆ ಹಾಗಾಗಲಿಲ್ಲ.

ಈ ಮಧ್ಯೆ ಅರ್ಥ ವ್ಯವಸ್ಥೆಯನ್ನು ಚೇತರಿಕೆಯ ಹಾದಿಗೆ ತರಲು, ಅಭಿವೃದ್ಧಿ ದರದ ಕುಸಿತದಿಂದ ಪಾರಾಗಲು ಉತ್ತೇಜಕಗಳನ್ನು ಸರಕಾರ ಕೈಗೊಂಡಿದೆ. ಇಂತಹ ಉತ್ತೇಜಕಗಳನ್ನು 2008ರ ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ ಸರಕಾರ ಕೈಗೊಂಡಿತ್ತು. ಇದರಲ್ಲಿ ಹೊಸತೇನಿಲ್ಲ. ದೇಶದ ಹೆ¨ªಾರಿಗಳನ್ನು ಅಭಿವೃದ್ಧಿ ಪಡಿಸುವ ಸುಮಾರು 7 ಲಕ್ಷ ಕೋಟಿ ರೂ. ಮೌಲ್ಯದ ಮೆಗಾ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ. ಇದರ ಮೂಲ ಉದ್ದೇಶ ಉದ್ಯೋಗ ಸೃಷ್ಟಿ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು. ಅಮಾನ್ಯತೆ ಮತ್ತು ಜಿಎಸ್‌ಟಿ ಸುಧಾರಣೆಗಳು ಆರ್ಥಿಕವಾಗಿ ಲಾಭ ತಂದಿವೆಯೋ, ರಾಜಕೀಯವಾಗಿ ಲಾಭ ತಂದಿವೆಯೋ- ಉತ್ತರ ನಮ್ಮÇÉೇ ಇದೆ.

ಭ್ರಷ್ಟಾಚಾರ ಕ್ಯಾನ್ಸರ್‌ ಇದ್ದಂತೆ
ತೆರಿಗೆ ತಪ್ಪಿಸುವುದು ಒಂದು ಕಲೆ. ನಮ್ಮ ದೇಶದ ಜನಸಂಖ್ಯೆ ಸುಮಾರು 130 ಕೋಟಿ. ಇದರಲ್ಲಿ ಸರಕಾರಕ್ಕೆ ತೆರಿಗೆ ನೀಡುವವರು 3.7 ಕೋಟಿ ಅಂದರೆ, ಶೇ.2 ಜನರು. ದೇಶದಲ್ಲಿ ಒಂದು ಕೋಟಿ ರೂ.ಗೂ ಹೆಚ್ಚು ಆದಾಯವನ್ನು ಪಡೆಯುವ ಮಂದಿ ಸುಮಾರು 48,000. ಇದರಲ್ಲಿ 23,432 ಮಂದಿ (ಶೇ.0.1) ತೆರಿಗೆ ನೀಡುವವರು. ಈ ಅಂಕಿ ಅಂಶ ಆದಾಯ ಮತ್ತು ತೆರಿಗೆಯ ಭಾರದ ನಡುವಿನ ವೈರುಧ್ಯವನ್ನು ಎತ್ತಿ ತೋರಿಸುತ್ತದೆ. ಹಣವಿದ್ದರೂ ತೆರಿಗೆ ನೀಡುತ್ತಿಲ್ಲ. ಕಾರಣ ತೆರಿಗೆ ತಪ್ಪಿಸುವುದು. ಇನ್ನು 10 ಲಕ್ಷದಿಂದ 1 ಕೋಟಿ ರೂ. ಆದಾಯವಿರುವವರ ಸಂಖ್ಯೆ 24 ಲಕ್ಷ (6.6%) 2.5 ಲಕ್ಷದಿಂದ 10 ಲಕ್ಷ ರೂ. ಆದಾಯವಿರುವವರ ಸಂಖ್ಯೆ 3.4 ಕೋಟಿ (93.3%). ಈ ಅಂಕಿ ಅಂಶಗಳು ಆದಾಯ ವಿತರಣೆಯಲ್ಲಿನ ಅಸಮಾನತೆಯನ್ನು ಖಚಿತವಾಗಿ ವಿವರಿಸುತ್ತವೆ.

Advertisement

ಭ್ರಷ್ಟಾಚಾರದಿಂದ ಕಪ್ಪು ಹಣ ಸೃಷ್ಟಿ
ಭ್ರಷ್ಟಾಚಾರದ ಬಗ್ಗೆ ಟ್ರಾನ್ಸ್‌ಪರೆನ್ಸಿ ಇಂಟರ್‌ ನ್ಯಾಷನಲ್‌ ನಡೆಸಿದ ಅಧ್ಯಯನದ ಪ್ರಕಾರ 176 ರಾಷ್ಟ್ರಗಳ ಪಟ್ಟಿಯಲ್ಲಿ (0 ಸ್ವತ್ಛ, 100 – ಅತ್ಯಂತ ಭ್ರಷ್ಟ) ನಮ್ಮ ದೇಶ 76ನೇ ಸ್ಥಾನದಲ್ಲಿದೆ. ಭ್ರಷ್ಟರೇ ಪ್ರಬಲರಾಗಿರುವ ಸಮಾಜದಲ್ಲಿ ಪ್ರಾಮಾಣಿಕರಿಗೆ ಉಳಿಗಾಲವಿಲ್ಲ. ಅಪ್ರಾಮಾಣಿಕರೇ (ತೆರಿಗೆ ತಪ್ಪಿಸುವವರು) ತುಂಬಿರುವ ಸಮಾಜದಲ್ಲಿ ಸಮಾಜವನ್ನು ಮುನ್ನಡೆಸುವವರು ಅವರೇ. ಭ್ರಷ್ಟಾಚಾರ ಅಂದ ಕೂಡಲೇ ಅದಕ್ಕೆ ಚರಿತ್ರೆಯೇ ಇದೆ. ಅದು ಗ್ರೀಕ್‌, ರೋಮನ್‌ ಚರಿತ್ರೆಯಷ್ಟೇ ಹಳತು. ಚಾಣಕ್ಯನ ಅರ್ಥಶಾಸ್ತ್ರದಲ್ಲೂ ಈ ಬಗ್ಗೆ ಉÇÉೇಖವಿದೆ. ಭ್ರಷ್ಟಾಚಾರ ಅಳಿಸಲಸಾಧ್ಯ. ಅಮಾನ್ಯತೆಯ ಅಲ್ಪಾವಧಿ ನೋವನ್ನು ದೀರ್ಘಾವಧಿಯ ಲಾಭಕ್ಕಾಗಿ ದೇಶವಾಸಿಗರು ಅನುಭವಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಇದಕ್ಕೆಲ್ಲ ನಗದು ರಹಿತ ಸಮಾಜದ ನಿರ್ಮಾಣವೇ ಪರಿಹಾರ. ಇದೇ ನ್ಯೂ ಇಂಡಿಯಾದ ಕನಸೂ ಆಗಿದೆ. ಜತೆಗೆ ಭ್ರಷ್ಟ ರಾಷ್ಟ್ರ ಪಟ್ಟ ಕಳಚಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ. ಇನ್ನೆಷ್ಟು ಕಾಯಬೇಕೋ?

ಆಸ್ಟ್ರೇಲಿಯನ್‌ ಬರಹಗಾರ ಕಾರ್ಲ್ ಕಾಸ್‌ ಪ್ರಕಾರ ಭ್ರಷ್ಟಾಚಾರವೆಂಬುದು ವೇಶ್ಯಾ ವೃತ್ತಿಗಿಂತಲೂ ಕೆಟ್ಟದು. ಎರಡನೆಯದು ಒಬ್ಬ ವ್ಯಕ್ತಿಯನ್ನಷ್ಟೇ ಹಾಳು ಮಾಡುವುದು, ಮೊದಲನೆಯದು ಇಡೀ ಸಮಾಜದ ಮೌಲ್ಯವನ್ನೇ ಹಾಳುಗೆಡಹುವುದು. ಮಹಾತ್ಮಾ ಗಾಂಧಿ ಹೇಳಿದಂತೆ ಕೆಲಸ ಮಾಡದೇ ಗಳಿಸಿದ ಹಣ ಪಾಪದ ಹಣ. ಬೆವರಿಳಿಸಿ ದುಡಿದು ಗಳಿಸಿದ ಸಂಪತ್ತು ನಿಜವಾದ ಸಂಪತ್ತು. ನಾವೆಲ್ಲರೂ ಮಹಾತ್ಮರಾಗಬೇಕಾದ ಅಗತ್ಯವಿದೆ. ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣದತ್ತ ನಮ್ಮೆಲ್ಲರ ಪ್ರಯತ್ನವಾಗಲಿ. ನಗದು ರಹಿತ ವ್ಯವಹಾರವೇ ನಮ್ಮ ಮುಂದಿರುವ ಆಯ್ಕೆ. ಹಣವೆಂಬುದು ವಿನಿಮಯದ ಸಾಧನ. ಹಣ ಭ್ರಷ್ಟವಲ್ಲ. ಅದನ್ನು ಬಳಸುವ ಮಂದಿ ಭ್ರಷ್ಟರು. ಅದರ ನಿರ್ಮೂಲನೆ ನಮ್ಮಿಂದಲೇ ಆರಂಭಗೊಳ್ಳಬೇಕು. ಯುವ ಜನರೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಮುಂದಿದೆ. ಪ್ರಾಯಶಃ ಯುವಕರೇ ದೇಶವನ್ನು ಪಾರದರ್ಶಕ ಸಮಾಜವನ್ನು ಕೊಂಡೊಯ್ಯುತ್ತಾರೆ ಅನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ರಾಘವೇಂದ್ರ ರಾವ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next