ಹೊಸದಿಲ್ಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ಉದ್ಯಮಿ ನೀರವ್ ಮೋದಿಯ 11,400 ಕೋಟಿ ರೂ. ಹಗರಣ ಬಯಲಾಗುತ್ತಿದ್ದಂತೆಯೇ ಇತರ ಬ್ಯಾಂಕ್‌ಗಳಲ್ಲಿ ಒಂದೊಂದೇ ಹಗರಣಗಳು ಬೆಳಕಿಗೆ ಬರಲಾರಂಭಿಸಿವೆ. ವಜ್ರ ವಹಿವಾಟು ನಡೆಸುವ ಇನ್ನೊಂದು ಕಂಪೆನಿ ದ್ವಾರಕಾ ದಾಸ್ ಸೇಠ್ ಇಂಟರ್‌ನ್ಯಾಶನಲ್ ಕೂಡ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್(ಒಬಿಸಿ)ಗೆ 389.85 ಕೋಟಿ ರೂ. ಮೋಸ ಮಾಡಿರು ವುದು ಬಹಿರಂಗಗೊಂಡಿದೆ. ಕಂಪೆನಿಯ ಮಾಲಕ ಸಬ್ಯಾ ಸೇಠ್ ರೀಠಾ ಸೇಠ್, ಕೃಷ್ಣ ಕುಮಾರ್ ಸಿಂಗ್, ರವಿ ಸಿಂಗ್ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ.
ಅಚ್ಚರಿಯ ಸಂಗತಿಯೆಂದರೆ, ಒಬಿಸಿ ಆರು ತಿಂಗಳ ಹಿಂದೆಯೇ ಸಿಬಿಐಗೆ ಈ ಕುರಿತು ದೂರು ನೀಡಿತ್ತು. 2007-12ರ ಅವಧಿಯಲ್ಲಿ ಚಿನ್ನ ಹಾಗೂ ಅಮೂಲ್ಯ ಹರಳುಗಳನ್ನು ಖರೀದಿಸಲು ದ್ವಾರಕಾ ದಾಸ್ ಕಂಪೆನಿಯು ಲೆಟರ್ ಆಫ್ ಕ್ರೆಡಿಟ್ ಪಡೆದು ಸಾಲ ಮಾಡಿತ್ತು. ಆದರೆ ಅನಂತರ ಈ ಸಾಮಗ್ರಿಗಳನ್ನು ಕಂಪೆನಿಯು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿತ್ತು.
ಇನ್ನೊಂದೆಡೆ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲೇ ಇನ್ನೊಂದು ಹಗರಣ ಬೆಳಕಿಗೆ ಬಂದಿದೆ. ಕೇಂದ್ರ ಸರಕಾರದ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ನೀಡುವಾಗ ಸೂಕ್ತ ಪರಿಶೀಲನೆ ನಡೆಸದೆ ಪಿಎನ್‌ಬಿಯಿಂದ ಸಾಲ ನೀಡಲಾಗಿದೆ. ಇದರಿಂದಾಗಿ 62 ಲಕ್ಷ ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಸಿಬಿಐ ದೂರು ದಾಖಲಿಸಿಕೊಂಡಿದೆ. 26 ಮುದ್ರಾ ಸಾಲವನ್ನು ಸೂಕ್ತ ತಪಾಸಣೆ ಮಾಡದೇ ನೀಡಲಾಗಿದೆ ಎಂಬ ಆರೋಪವಿದೆ.
ಕಳೆದ 7 ವರ್ಷಗಳಲ್ಲಿ ಪಿಎನ್‌ಬಿಯ ಯಾವುದೇ ಉದ್ಯೋಗಿಯೂ ಹಗರಣದ ಕುರಿತು ಸೊಲ್ಲೆತ್ತಲಿಲ್ಲ ಎನ್ನುವುದು ಆತಂಕದ ವಿಚಾರ. ಇಷ್ಟೊಂದು ಪ್ರಮಾಣದ ವಂಚನೆಗೆ ಆಡಿಟರ್‌ಗಳು, ನಿಯಂತ್ರಕರು ಮತ್ತು ಬ್ಯಾಂಕ್ ಆಡಳಿತದ ನಿರ್ಲಕ್ಷ ವೇ ಕಾರಣ. ಅಗತ್ಯಬಿದ್ದರೆ ಬ್ಯಾಂಕ್ ವಂಚಕರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ಬಿಗಿಗೊಳಿಸುತ್ತೇವೆ.
ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ